ಲೇಖಕರಾದ ಡಾ. ಬಿ. ಎಲ್ ಶಂಕರ್ ಮತ್ತು ವಲೇರಿಯನ್ ರೊಡ್ರಿಗಸ್ ಬರೆದ ಪುಸ್ತಕವನ್ನು ಕನ್ನಡಕ್ಕೆ ’ಭಾರತದ ಸಂಪತ್ತು ಒಂದು ಕಾರ್ಯನಿರತ ಪ್ರಜಾಪ್ರಭುತ್ವ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ತಂದವರು ಪ್ರೊ. ಜೆ.ಎಸ್ ಸದಾನಂದ.
ಭಾರತೀಯ ಸಂಸತ್ತು ರಚನೆಗೊಂಡ ಕ್ರಮ, ಸಂಸತ್ತಿನ ರೂಪುರೇಷೆಗಳು, ಅದರ ರಚನೆ , ಧೋರಣೆಗಳು, ಬದಲಾವಣೆಗಳ ಕಟ್ಟುಕ್ರಮ, ಎದುರಿಸಿದ ಸವಾಲುಗಳು, ಪ್ರಜಾಪ್ರಭುತ್ವದ ಬಿಕ್ಕಟ್ಟುಗಳು, ರಾಜಕೀಯ ವ್ಯವಸ್ಥೆಗಳು ಇವುಗಳ ಬಗ್ಗೆ ವಿವರಣೆ ನೀಡುತ್ತಾ ವಿಶ್ಲೇಷಿಸುವ ಮಹತ್ವದ ಕೃತಿ ’ಭಾರತದ ಸಂಪತ್ತು’. ಆರು ನೂರಕ್ಕೂ ಹೆಚ್ಚಿನ ಪುಟಗಳಲ್ಲಿ ತೊಂಬತ್ತರ ದಶಕದ ನಡುವಿನ ಸಂಸತ್ತಿನ ರಚನೆ, ಆಡಳಿತ ಕ್ರಮ, ಬದಲಾವಣೆಯ ಹಂತಗಳನ್ನು ಹಂತ ಹಂತವಾಗಿ ಶೋಧಿಸುತ್ತಾ ಸಮಾಜಶಾಸ್ತ್ರೀಯ ಆಯಾಮಗಳಲ್ಲಿ ಈ ಕೃತಿ ಓದುಗರಿಗೆ ನೈತಿಕತೆ, ಸಾಮಾಜಿಕ ಬದ್ದತೆ, ರಾಜಕೀಯ ಪ್ರಜ್ಞೆಯ ಬಗ್ಗೆ ಅರಿವು ಮೂಡಿಸುತ್ತದೆ.
ನಮ್ಮ ಸಂಸತ್ತು ನಡೆದುಬಂದ ದಾರಿಯ ಸಮಗ್ರ ಪರಿಚಯ :
ಭಾರತವು ರಾಜಕೀಯವಾಗಿ ಸ್ವತಂತ್ರಗೊಂಡು ಭಾರತದ ಸಂಸತ್ತು ಎಪ್ಪತ್ತೆರಡು ವರ್ಷಗಳು ಕಳೆದರೂ ನಾವು ಅಳವಡಿಸಿಕೊಂಡಿರುವ ರಾಜಕೀಯ ವ್ಯವಸ್ಥೆಯನ್ನು ಕುರಿತ ಕನಿಷ್ಟ ಜ್ಞಾನವಾದರೂ ನಮ್ಮ ವಿದ್ಯಾವಂತ ವರ್ಗಕ್ಕೆ ಇದೆ ಎಂದು ಹೇಳಲಾಗದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿ ಮಹತ್ವ ಪಡೆಯುತ್ತದೆ. ನಮ್ಮ ಸಂಸತ್ತು ರೂಪುಗೊಂಡ ರೀತಿ, ನಡೆದುಬಂದ ದಾರಿ, ಎದುರಿಸಿದ ಸವಾಲುಗಳು, ಅದರ ರಚನೆ ಮತ್ತು ಧೋರಣೆಗಳ ವಿಚಾರದಲ್ಲಿ ಅದು ಒಳಗಾದ ಬದಲಾವಣೆಗಳು, ಅದರ ಸಾಧನೆ ಹೀಗೆ ವಿವರವಾಗಿ ವಿಶ್ಲೇಷಣಾತ್ಮಕವಾಗಿ ನಮ್ಮ ಸಂಸತ್ತನ್ನು ವಿವಿಧ ಆಯಾಮಗಳಲ್ಲಿ ಪರಿಚಯಿಸುವ ಕೃತಿಯಿದು.
ಆರು ನೂರಕ್ಕೂ ಹೆಚ್ಚು ಪುಟಗಳಲ್ಲಿ, ಎಂಟು ಅಧ್ಯಾಯಗಳಲ್ಲಿ ಹರಡಿರುವ ಈ ಬೃಹತ್ ಅಧ್ಯಯನ ೫೦ರಿಂದ ೯೦ ರ ದಶಕಗಳ ನಡುವೆ ಸಂಸತ್ತಿನ ಸಾಮಾಜಿಕ ಸ್ವರೂಪದಲ್ಲಿನ ಬದಲಾವಣೆ, ೧೯೫೦ ರಿಂದ ಇತ್ತೀಚಿನವರೆಗೆ ಸಂಸತ್ತಿನ ಚಿಂತನೆಗಳಲ್ಲಾಗಿರುವ ಸ್ಥಿತ್ಯಂತರ, ಸದನದಲ್ಲಿ ಸಂವಹನದ ಮಾಧ್ಯಮವಾಗಿ ಬಳಕೆಯಾದ ಭಾಷೆಯ ಬಗೆಗಿನ ಜಿಜ್ಞಾಸೆ, ಸಂಸತ್ತು ಪ್ರತಿನಿಧಿಸಿದ ರಾಷ್ಟ್ರೀಯ ಅಸ್ಮಿತೆಯ ಸ್ವರೂಪ ಕ್ರಮೇಣ ವಿವಿಧ ಭಾಷಿಕ, ಪ್ರಾದೇಶಿಕ ಅಸ್ಮಿತೆಗಳ ಕಡೆಗೆ ಸ್ಥಿತ್ಯಂತರಗೊಂಡ ರೀತಿ; ಹಾಗೆಯೇ ನ್ಯಾಯಾಂಗ ಮತ್ತು ಸಂಸತ್ತಿನ ನಡುವಿನ ಸಂಬಂಧಗಳಲ್ಲಿ ಉಂಟಾದ ಪಲ್ಲಟ, ಮೇಲಾಟಗಳು ಮೊದಲ ಆರು ಅಧ್ಯಾಯಗಳಲ್ಲಿ ವಿಶ್ಲೇಷಣೆಗೊಂಡಿವೆ.
ಏಳನೆಯ ಅಧ್ಯಾಯದಲ್ಲಿ ರಾಜ್ಯಸಭೆಯ ರೂಪುರೇಷೆ ಅದರ ಅಗತ್ಯದ ಸಮರ್ಥನೆ ವಿವಿಧ ದೃಷ್ಟಿಕೋನಗಳ ವಿಶ್ಲೇಷಣೆ ಇದೆ. ಎಂಟನೆಯ ಅಧ್ಯಾಯವು ಕಾಲಕ್ರಮದಲ್ಲಿ ಸದನವು ಕಾರ್ಯ ನಿರ್ವಹಿಸುತ್ತಾ ಬಂದ ರೀತಿಯನ್ನು ವಿಶ್ಲೇಷಿಸುತ್ತದೆ. ಈ ಎಂಟು ಅಧ್ಯಾಯಗಳಿಗೆ ಪೂರಕವಾಗಿ ಇಲ್ಲಿರುವ ಕೋಷ್ಟಕಗಳು, ಅಡಿ ಟಿಪ್ಪಣಿಗಳು ಕುತೂಹಲಕರವೂ ಮತ್ತು ಉಪಯುಕ್ತವೂ ಆದ ಮಾಹಿತಿಗಳನ್ನು ನೀಡುತ್ತವೆ.
ಸ್ವಾತಂತ್ರ ಪೂರ್ವದ, ಸ್ವಾತಂತ್ರ್ಯೋತ್ತರದ ಪ್ರಾರಂಭದ ದಿನಗಳ ರಾಜಕಾರಣವು ವಿಶಾಲ ದೃಷ್ಟಿಕೋನವನ್ನು ಪ್ರತಿನಿಧಿಸಿದರೆ ಮುಂದಿನ ದಿನಗಳಲ್ಲಿ ಕಂಡುಬರುವ ಭಾಷಿಕ, ಪ್ರಾದೇಶಿಕ ಹಿತಾಸಕ್ತಿಗಳಿಂದ ಹರಡಿಹೋದ ಪರಿಯನ್ನು ಒಂದು ಋಣಾತ್ಮಕ ದೃಷ್ಟಿಯಿಂದಲೇ ನೋಡಲಾಗುತ್ತದೆ. ಆದರೆ ಈ ಪಲ್ಲಟ ಪ್ರಾದೇಶಿಕ ಸಂಗತಿಗಳಿಗೆ ಒತ್ತು ನೀಡುತ್ತಾ ದೇಶದ ವೈವಿಧ್ಯತೆಯ ಪೋಷಣೆಗೆ ಸಹಕಾರಿಯಾದ ಧನಾತ್ಮಕ ಆಯಾಮವೊಂದನ್ನು ಹೊಂದಿರುವುದು ಕೂಡ ನಮಗೆ ಇಲ್ಲಿನ ಅಧ್ಯಯನದಿಂದ ಗೋಚರವಾಗುತ್ತದೆ. ಈ ರಾಜ್ಯಶಾಸ್ತ್ರದ ಕೃತಿಯನ್ನು ಆಧುನಿಕ ಭಾರತದ ರಾಜಕೀಯ ಇತಿಹಾಸದ ದಾಖಲೆಯನ್ನಾಗಿ ಕೂಡ ನೋಡಬಹುದು. ಹಾಗೇ ಇಲ್ಲಿನ ಅಂಕಿ ಅಂಶಗಳನ್ನು ಬಳಸಿ ಈ ಕೃತಿಗಿರುವ ಸಮಾಜಶಾಸ್ತ್ರೀಯ ಆಯಾಮವನ್ನೂ ಶೋಧಿಸಬಹುದು.
ಇಂದಿನ ಸಂಸದರ ಕುಸಿಯುತ್ತಿರುವ ನೈತಿಕತೆ, ಸಾಮಾಜಿಕ ಬದ್ಧತೆ, ರಾಜಕೀಯ ಜ್ಞಾನದ ಕಾರಣಗಳಿಗಾಗಿ ಸಂಸತ್ತು ಕಾರ್ಯಾಂಗದ ನಿಯಂತ್ರಣಕ್ಕೆ ಒಳಗಾಗುತ್ತಾ ಅದು ಕ್ರಮೇಣ ಅವನತಿಯ ಹಾದಿ ಹಿಡಿದಿರುವುದು ಸಾಮಾನ್ಯರಿಗೂ ಗೋಚರವಾಗುತ್ತಿದೆ. ಆದರೂ ಈ ಸಂಸ್ಥೆಗೆ ಪರ್ಯಾಯ ಹುಡುಕುವ ಅಗತ್ಯವಿಲ್ಲ. ದಕ್ಷತೆಯೊಂದೇ ಸಂಸತ್ತಿನ ಮಾನದಂಡವಾಗಬಾರದು. ಅದರ ಬದಲಾಗುತ್ತಿರುವ ಪ್ರಾತಿನಿಧ್ಯದ ಸ್ವರೂಪ ಪ್ರತಿಬಿಂಬಿಸುವ ವಿವಿಧ ಹಿತಾಸಕ್ತಿಗಳನ್ನೂ ನಾವು ಪರಿಗಣಿಸಬೇಕು ಎನ್ನುವ ಈ ಕೃತಿ. ಅದರ ಕೆಲವು ದೋಷಗಳನ್ನು ಸರಿಪಡಿಸಿಕೊಂಡು ಮುಂದುವರಿಸಬಹುದು ಎಂದು ಅಭಿಪ್ರಾಯಪಡುತ್ತದೆ. ನಮ್ಮ ಕೆಲವೇ ಕೆಲವು ಅಧ್ಯಯನಶೀಲ ರಾಜಕಾರಣಿಗಳಲ್ಲೊಬ್ಬರಾದ ಬಿ.ಎಲ್. ಶಂಕರ್ ಖ್ಯಾತ ರಾಜ್ಯಶಾಸ್ತ್ರಜ್ಞ ಪ್ರೊ ವೆಲೆರಿಯನ್ ರಾಡ್ರಿಗಸ್ ಅವರೊಡಗೂಡಿ ಇಂಗ್ಲಿಷ್‌ನಲ್ಲಿ ರಚಿಸಿರುವ ಈ ಕೃತಿಯು ಯಾವುದೇ ತಾತ್ವಿಕ ಭಾರಗಳಿಲ್ಲದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಇದಕ್ಕೆ ಪ್ರೊ| ಜೆ.ಎಸ್. ಸದಾನಂದ ಅವರ ಸಮರ್ಥ ಅನುವಾದವೂ ಕಾರಣವಾಗಿದೆ.
-ಎಂ. ರಾಜು
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಮೇ- 2019)
©2024 Book Brahma Private Limited.