ಸಮಾನ ನಾಗರಿಕ ಸಂಹಿತೆ (Uniform Civil Code) ಎಂಬ ವಿಚಾರ ಕಿವಿಗೆ ಬಿದ್ದ ತಕ್ಷಣ ಕೆಲವರ ಕಿವಿ ಮತ್ತು ದೇಹ ಬಿಸಿ ಏರುವುದಿದೆ. ಒಂದು ವಿಚಾರಧಾರೆಯವರು “ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ರೂಪುಗೊಂಡು ಜಾರಿಗೆ ಬರಲೇ ಬೇಕು, ಇಲ್ಲವಾದರೆ ನಮ್ಮ ದೇಶದಲ್ಲಿ ಜಾತಿ-ಮತ-ಧರ್ಮಗಳ ಹೆಸರಿನಲ್ಲಿ ಬಿರುಕು-ಅಂತರ-ಅಂತಃಕಲಹ ನಿಲ್ಲದೆ ದೇಶದಲ್ಲಿ ಏಕತೆ ಮತ್ತು ಸಾಮರಸ್ಯ ಸಾಧ್ಯವೇ ಇಲ್ಲ' ಎಂದರೆ, ಇನ್ನೊಂದು ವಿಚಾರಧಾರೆಯವರು “ನಮ್ಮ ದೇಶದಲ್ಲಿ ಏನಾದರೂ ಸಮಾನ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅಲ್ಲಿ ರಕ್ತದ ಕೋಡಿಯೇ ಹರಿದು, ನಮ್ಮ ಕೆಲವು ಮತ-ಧರ್ಮಗಳ ಅಸ್ತಿತ್ವಕ್ಕೆ ಸಂಚಕಾರ ಉಂಟಾದೀತು” ಎಂಬ ನಿಲುವನ್ನು ಮುಂದಿಡುವುದನ್ನು ನಾವು ಕಾಣುತ್ತಿದ್ದೇವೆ.
ಈ ಎರಡು ತದ್ವಿರುದ್ದ ವಿಚಾರಧಾರೆಗಳ ನಡುವೆ - ಮಧ್ಯಮ ದಾರಿ ಎಂಬಂತೆ - “ಸಮಾನ ನಾಗರಿಕ ಸಂಹಿತೆ - ಒಂದು ವಿವೇಚನೆ” ಎಂಬ ಎಸ್. ಜಿ. ಕೃಷ್ಣರವರು ನಮ್ಮೆಲ್ಲರ ಮುಂದೆ ಈಗ ಇಟ್ಟಿರುವ ಈ ಪುಸ್ತಕ ಕಾಣಿಸುತ್ತದೆ. ಸಮಾನ ನಾಗರಿಕ ಸಂಹಿತೆಗಾಗಿ ಈ ಪುಸ್ತಕದಲ್ಲಿ ಒತ್ತಡ – ಒತ್ತಾಯ ಇಲ್ಲ. ಅದು ಬೇಡ – ಅದೊಂದು ಮಾತ್ರ ಬೇಡಪ್ಪಾ ಬೇಡ ಎಂಬಂತಹ ನಿರಾಕರಣ ನಿಲುವೂ ಈ ಪುಸ್ತಕದಲ್ಲಿ ಇಲ್ಲ. ಸಮಾನ ನಾಗರೀಕ ಸಂಹಿತೆ ಎಂಬ ವಿಚಾರದ ಕುರಿತು ಒಂದು ವಿವೇಚನಾತ್ಮಕ ಬರಹಗಳ ಕೈಪಿಡಿ ಎನ್ನಬಹುದು.
©2025 Book Brahma Private Limited.