ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ಅನುವಾದಗಳನ್ನೂ ಕೊಟ್ಟಿದ್ದಾರೆ. 60ಕ್ಕೂ ಹೆಚ್ಚು ಕನ್ನಡ ಹಾಗೂ 3 ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ಕೃಷ್ಣ ವಿವರಗಳು, ವಿಶ್ವದ ಕತೆ, ಸೂಪರ್ನೋವಾ, ರಾಮನ್ ಸಂದರ್ಶನ, ಸುಬ್ರಹ್ಮಣ್ಯನ್ ಚಂದ್ರಶೇಖರ್ ಜೀವನ ಚರಿತ್ರೆ, ರಾಮಾನುಜನ್ ಬಾಳಿದರಿಲ್ಲಿ, ವಿಜ್ಞಾನ ಸಪ್ತರ್ಷಿಗಳು, ಐನ್‌ಸ್ಟೈನ್ ಬಾಳಿದರಿಲ್ಲಿ, ಕೊಪರ್ನಿಕಸ್ ಕ್ರಾಂತಿ, ಜಾತಕ ಮತ್ತು ಭವಿಷ್ಯ, ಎನ್‌ಸಿಸಿ ದಿನಗಳು, ನೋಡೋಣು ಬಾರಾ ನಕ್ಷತ್ರ(ಖಗೋಳವಿಜ್ಞಾನ ಕುರಿತ ಪುಸ್ತಕ, ಫರ್ಮಾ ಯಕ್ಷಪ್ರಶ್ನೆ, ವೈಜ್ಞಾನಿಕ ಮನೋಧರ್ಮ, ಆಕಾಶದಲ್ಲಿ ಭಾರತ, ಮುಗಿಯದ ಪಯಣ(ಆತ್ಮಕಥೆ), ದೇವ ಸ್ಮರಣೆ - ಬಾಗಲೋಡಿ ದೇವರಾಯ ಸ್ಮರಣ ಸಂಪುಟ (ಸಂಪಾದನೆ), ಸಂಗೀತ ರಸನಿಮಿಷಗಳು ಪ್ರಮುಖ ಕೃತಿಗಳು. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಎಚ್. ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಮಾಳವಾಡ ಪ್ರಶಸ್ತಿ, ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಸಂದಿವೆ. ಜೊತೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.