ಕುವೆಂಪು ಜನ್ಮಶತಮಾನೋತ್ಸವದ ನೆವದಲ್ಲಿ ಹಿರಿಯ ಸಾಹಿತಿ ಜಿ ಟಿ ನಾರಾಯಣರಾವ್ ಅವರು ರಸರ್ಷಿಗೆ ಅರ್ಪಿಸಿದ ನುಡಿ ನಮನ ಈ ಕೃತಿ.
ಲೇಖಕರೇ ವಿವರಿಸಿರುವಂತೆ ಇದರಲ್ಲಿ ಮೂರು ವಿಭಾಗಗಳಿದ್ದು ಮೊದಲನೇ ಭಾಗವು ಜಿಟಿನಾ ಅವರು ಕುವೆಂಪು ಮೋಡಿಗೆ ತುತ್ತಾದ ಬಗೆಯನ್ನು ಒಳಗೊಂಡಿದೆ. ಅದರಲ್ಲಿ ದೇಜಗೌ ಲೇಖಕರನ್ನು ’ಕುವೆಂಪು ವೃತ್ತಿಗೆ’ ಹಚ್ಚಿದ ವಿವರವೂ ಇದೆ.
ವಿಜ್ಞಾನ ಲೇಖಕರೂ ಆದ ರಾವ್ ಅವರು ಕುವೆಂಪು ಅವರ ವಿಜ್ಞಾನ ವಾಙ್ಮಯತೆ ಹಾಗೂ ವೈಜ್ಞಾನಿಕ ಮನೋಧರ್ಮವನ್ನು ಎರಡು ಮತ್ತು ಮೂರನೇ ವಿಭಾಗದಲ್ಲಿ ಚರ್ಚಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕದ ಮೇರು ವ್ಯಕ್ತಿತ್ವವನ್ನು ವಿಜ್ಞಾನದಂತಹ ಭಿನ್ನ ದೃಷ್ಟಿಯಿಂದ ನೋಡವ ಯತ್ನದಿಂದಾಗಿಯೇ ಕೃತಿ ಗಮನ ಸೆಳೆಯುತ್ತದೆ.
ಹೊಸತು - ಎಪ್ರಿಲ್ -2005
ಕುವೆಂಪು ಕಳೆದ ಶತಮಾನದ ಧೀಮಂತ ವ್ಯಕ್ತಿತ್ವದ ಮಹಾಕವಿ ಎಂದು ಪ್ರಸಿದ್ಧರಾಗಿದ್ದಾರೆ. ಅವರಿಂದ ನೇರ ಅಥವಾ ಪರೋಕ್ಷ ಪ್ರಭಾವಿತರಾಗದ ವ್ಯಕ್ತಿಗಳೇ ಬಹಳ ವಿರಳವೆನ್ನಬಹುದು. ಪ್ರಜ್ವಲ ವೈಚಾರಿಕ ನಿಲುವನ್ನು ಹಾಗೂ ಅಷ್ಟೇ ಕನ್ನಡ ಪ್ರೇಮವನ್ನು ಬಾಳಿನುದ್ದಕ್ಕೂ ಅಳವಡಿಸಿ ತಮ್ಮ ಸಾಹಿತ್ಯದ ಮೂಲಕ ಕನ್ನಡ ಸೇವೆಗೈದು ಕರ್ನಾಟಕದಾದ್ಯಂತ ಪ್ರಜೆಯಿಂದ ಪ್ರಭುವಿನ ತನಕ ಎಲ್ಲರ ಮನಸೂರೆಗೊಂಡಿದ್ದಾರೆ. ಇಂಥ ಮೇರು ಪ್ರತಿಭೆಯಿಂದ ಆಕರ್ಷಿಸಲ್ಪಟ್ಟು ಬಾಲ್ಯದಿಂದಲೇ ಅದು ಹೇಗೋ ಕುವೆಂಪು ವ್ಯಕ್ತಿತ್ವದ ಅಗೋಚರ ಸೆಳೆತಕ್ಕೆ ಸಿಕ್ಕಿದ ಖಗೋಳ ಗಣಿತ ವಿಜ್ಞಾನ ಲೇಖಕ ಶ್ರೀ ಜಿ. ಟಿ. ನಾರಾಯಣರಾವ್ ತುಂಬ ಸೊಗಸಾಗಿ ಕುವೆಂಪು ಅವರನ್ನು ಪರಿಚಯಿಸಿದ್ದಾರೆ. ಈ ಇಬ್ಬರು ಮಹನೀಯರ ನಡುವಿನ ಭೌತಿಕ ವಾಸ್ತವಾಂಶಗಳ ಬಗ್ಗೆ ಚರ್ಚೆ ಮತ್ತು 'ರಾಮಾಯಣ ದರ್ಶನಂ' ಕೃತಿಯಲ್ಲಿನ ವೈಜ್ಞಾನಿಕ ಅಂಶಗಳಲ್ಲಿನ ವಿವರಣೆ ಅತ್ಯಂತ ಮನೋಜ್ಞವಾಗಿ ಮೂಡಿದೆ.
©2024 Book Brahma Private Limited.