ಲೇಖಕ ಕೆ. ಮೋಹನ್‌ಕೃಷ್ಣ ರೈ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻತುಳುನಾಡ ಅಬ್ಬಕ್ಕರಾಣಿಯರು: ಬದುಕು ಹೋರಾಟದ ಚಾರಿತ್ರಿಕ ವಿಶ್ಲೇಷಣೆʼ. ಪೋರ್ಚಿಗೀಸರ ಸದ್ದಡಗಿಸಿದ ತುಳುನಾಡಿನ ಮೊದಲ ವೀರ ರಾಣಿ ಅಬ್ಬಕ್ಕನ ಕುರಿತು ಪುಸ್ತಕ ಹೇಳುತ್ತದೆ. ನಿಜಕ್ಕೂ ಅಬ್ಬಕ್ಕ ಯಾರು? ಅವರನ್ನು ತುಳುನಾಡಿನ ವೀರ ಕಣ್ಮಣಿ ಎಂದು ವಿಶೇಷವಾಗಿ ಹೊಗಳಲು ಕಾರಣವೇನು? ನಾಡಿಗೆ ಅವರ ಕೊಡುಗೆ ಏನು? ಬಾಲ್ಯ-ಬದುಕು-ಹೋರಾಟದ ವೀರಕಥೆಯನ್ನು ಸಂಪುಟಗಳಾಗಿ ಲೇಖಕರು ಚರ್ಚಿಸುತ್ತಾರೆ. ಪ್ರಸ್ತುತ ಒಂದನೇ ಸಂಪುಟದಲ್ಲಿ ಅಬ್ಬಕ್ಕನ ಕೌಟುಂಬಿಕ ಸಂಘರ್ಷದ ವಿಶ್ಲೇಷಿಸುತ್ತಾರೆ. ತುಳುನಾಡಿನ ದಕ್ಷಿಣ ಭಾಗದ ಉಳ್ಳಾಲ ಭಾಗದಲ್ಲಿ ʻಪುತ್ತಿಗೆಯ ಚೌಟರುʼ ಎಂಬ ಒಂದು ದೊಡ್ಡ ರಾಜ ಮನೆತನದಲ್ಲಿ ಹುಟ್ಟಿದ ಅಬ್ಬಕ್ಕ, ಚಿಕ್ಕಂದಿನಿಂದಲೇ ವೇದಗಳ ಶಿಕ್ಷಣ, ಯುದ್ಧಕಲೆ, ಅಕ್ಷರಜ್ಞಾನ, ಇತ್ಯಾದಿಗಳನ್ನು ಕರಗತ ಮಾಡಿಕೊಳ್ಳುತ್ತಾ ಬೆಳೆದವರು. ಬಳಿಕ ಕುಟುಂಬದಲ್ಲಿ ಗಂಡುಮಕ್ಕಳಿಲ್ಲದ ಕಾರಣ ಅಧಿಕಾರ ವಹಿಸಿಕೊಂಡು, ಮುಂದೆ ಮಂಗಳೂರಿನ ಬಂಗಾಡಿಯ ರಾಜ ಲಕ್ಷ್ಮಪ್ಪ ಬಂಗರಸನೊಂದಿಗೆ ವಿವಾಹವಾಗುತ್ತಾರೆ. ಆದರೆ ಪತಿ ಪೋರ್ಚುಗೀಸರ ಒಪ್ಪಂದಕ್ಕೆ ಮಣಿದು ಕಪ್ಪಾ ಕಾಣಿಕೆ ಕೊಡಲಾರಂಭಿಸಿದ್ದನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದ ಅಬ್ಬಕ್ಕ, ಕಪ್ಪ ಕೊಡುವುದಿಲ್ಲವೆಂದು ಶಪತ ಕಟ್ಟಿ ಅರಮನೆ ಇಳಿದು ಬಂದು ಉಳ್ಳಾಲದ ರಾಣಿಯಾದವರು. ಹೀಗೆ ಅಬ್ಬಕ್ಕನ ವೀರ ಸಾಹಸದ ಕತೆಗಳನ್ನು ಲೇಖಕರು ಅಧ್ಯಯನದ ಮೂಲಕ ಪುಸ್ತಕದಲ್ಲಿ ವಿಶ್ಲೇಷಿಸುತ್ತಾ ಹೋಗುತ್ತಾರೆ.
©2024 Book Brahma Private Limited.