ಕವಿ ಹಾಗೂ ಲೇಖಕ ವೀರಭದ್ರಪ್ಪ ಬಿಸ್ಲಳ್ಳಿ ಅವರ ’ನೆಲದ ನೆನಹು’ ಐತಿಹಾಸಿಕ ವಿಚಾರಗಳನ್ನೊಳಗೊಂಡ ಕಥನವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಮುಜಾಫರ್ ಅಸ್ಸಾದಿ ಅವರು, ’ನಾವು ಮಾನಸಿಕ ವಸಾಹತು ಹಿಡಿತದಿಂದ ಬಿಡುಗಡೆ ಹೊಂದಬೇಕು’ ಎಂಬ ಮಹಾತ್ಮ ಗಾಂಧಿ ಅವರ ಮಾತು ಚಾರಿತ್ರಿಕ ಯಜಮಾನಿಕೆಯಿಂದ ಬಿಡುಗಡೆಗೊಳಿಸುವ ಕಥನ, ಸಂಕಥನ, ಕರೆ. ಉದ್ಘೋಷ ಏನಾದರೂ ಅನ್ನಬಹುದು. ವೀರಭದ್ರಪ್ಪ ಬಿಸ್ಲಳ್ಳಿ ಯವರ ’ನೆಲದ ನೆನಹು’ ಪುಸ್ತಕವನ್ನು ಇದೇ ದೃಷ್ಟಿಕೋನದಲ್ಲಿ ನೋಡುವುದು ಮುಖ್ಯವೆನಿಸುತ್ತದೆ. ಚಾರಿತ್ರಿಕವಾಗಿ ಮೂಲೆ ಗುಂಪಾಗಿದ್ದ ಲ್ಯಾಟಿನ್, ಅಮೆರಿಕವನ್ನು ಮತ್ತು ಅದರ ಇತಿಹಾಸವನ್ನು ಬದಲಿಸಿದ ವ್ಯಕ್ತಿಗಳನ್ನು ಪರಿಚಯಿಸಿ, ವಿಸ್ಕೃತಿಯಿಂದ ಹೊರ ಬರಲು ಈ ಪುಸ್ತಕ ಸಹಾಯ ಮಾಡುತ್ತದೆ. ಅಮೆರಿಕದ ಸಾಮ್ರಾಜ್ಯಶಾಹಿಗೆ ಸೆಟೆದು ನಿಂತ ಚೆಗುವೆರಾ ಅದರ ಕಾರಾಸ್ಥಾನಕ್ಕೆ ಬಲಿಯಾದ. ಹ್ಯೂಗೊ ಶಾವೇಝ್ ನಂತೂ ಅಮೆರಿಕದ ಬಂಡವಾಳಶಾಹಿ ಪ್ರತಿರೋಧಕ್ಕೆ ಇನ್ನೊಂದು ಸಾಕ್ಷಿಯಾದ ವ್ಯಕ್ತಿಯಾಗಿದ್ದಾನೆ. ವಿಶ್ವಬ್ಯಾಂಕ್, ವಿಶ್ವ ಹಣಕಾಸು ಸಂಸ್ಥೆಯ ಹಸ್ತಕ್ಷೇಪವನ್ನು ನಿರಾಕರಿಸಿದ್ದು, ಅತ್ಯಂತ ಆಯಕಟ್ಟಿನ ಕೈಗಾರಿಕೆಗಳ ರಾಷ್ಟ್ರೀಕರಣ, ಸಾಲದ ವರ್ತುಲದಿಂದ ಬಿಡುಗಡೆಯ ವಿಚಾರಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಇಂಥ ಪ್ರಮುಖ ಐತಿಹಾಸಿಕ ಕಾರಣಗಳಿಂದ ’ ನೆಲದ ನೆನಹು’ ಅತ್ಯುತ್ತಮ ಕಥನವೆನ್ನಿಸುತ್ತದೆ. ಓದುಗರಿಗೆ ಸ್ಪಷ್ಟವಾಗಿ ಓದಿಸಿಕೊಂಡು ಹೋಗುವ ಕೃತಿ ಇದಾಗಿದ್ದು, ಐತಿಹಾಸಿಕ ವಿಸ್ಕೃತಿಯಿಂಧ ಹೊರಗೆ ತರುವ ಜ್ಞಾನದ ಆಕರವೆಂದೇ ಈ ಕೃತಿಯನ್ನು ಹೇಳಬಹುದು’ ಎಂದಿದ್ದಾರೆ.
©2024 Book Brahma Private Limited.