‘ಲಿಬಿಯಾ ಡೈರಿ’ ಕೃತಿಯು ಲಿಬಿಯಾದ ಕ್ರಾಂತಿ ಮತ್ತು ಗಡಾಫಿಯ ಬಗ್ಗೆ ಮಾಧ್ಯಮಗಳು ತೋರಿಸಿದ ಸುಳ್ಳು ಚಿತ್ರಣಗಳ ವಿರುದ್ದ ವಾಸ್ತವ ಸತ್ಯವನ್ನುಹಾಗೂ ಗಡಾಫಿ ಹತ್ಯೆಯ ಹಿಂದಿನ ರಹಸ್ಯಗಳನ್ನು ಹಾಗೂ ಅಮೆರಿಕಾ -ಮಿತ್ರ ರಾಷ್ಟ್ರಗಳ ಬಗೆಗಿನ ಭಯಂಕರ ಹುನ್ನಾರಗಳನ್ನು ಲೇಖಕ ಉದಯ ಇಟಗಿ ಅವರು ಚಾರಿತ್ರಿಕ ಕಥನವನ್ನು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.
ನನ್ನ’ಲಿಬಿಯಾ ಡೈರಿ’ ಕುರಿತು ಖ್ಯಾತ ವಿಮರ್ಶಕಿ ಡಾ. ಮಂಗಳಾ ಪ್ರಿಯದರ್ಶಿನಿ
ಈ ಪುಸ್ತಕವನ್ನು ಕೈಗೆ ಹಿಡಿದ ಕೆಲವೇ ಗಂಟೆಗಳಲ್ಲಿ ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಕೆಳಗಿಡಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶವೇ ನೀಡದಂತೆ ಹಠ ಮಾಡಿ ಓದಿಸಿಕೊಳ್ಳುವ ಗುಣ ಖಂಡಿತ ಕೃತಿಗಿದೆ. ಕಾಲುಜ್ಜಿ, ಹಠ ಮಾಡಿ ತನಗೆ ಬೇಕಾದುದನ್ನು ಪಡೆವ ಮಗುವಿನಂತ ಗುಣ ಕೃತಿಗೆ ಮತ್ತು ಅದರ ವಿಚಾರಗಳಿಗೆ ಇದೆ.
ನನಗೇಕೆ ನಿಮ್ಮ ಕೃತಿಯ ನಾಯಕ ಮಹಮ್ಮದ್ ಗಡಾಫಿಯ ಬಗೆಗೆ ಅಷ್ಟೊಂದು ಕುತೂಹಲ ಎಂದರೆ ಅವನ ರಾಜಕೀಯ ಕರ್ತೃತ್ವ ಶಕ್ತಿ , ಅವನು ಪಾಲಿಸಿದ ಆರ್ಥಿಕ ನೀತಿ, ಆಫ್ರಿಕನ್ ಸಮುದಾಯವನ್ನೇ ಒಗ್ಗೂಡಿಸಬೇಕೆಂಬ ಆತನ ಮಹತ್ವದ ಹಂಬಲ ಹಾಗೂ ನೆರೆ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡ ಸಂಬಂಧಗಳು, ಜೊತೆಗೆ ಆತನ ರಾಷ್ಟ್ರಗಳಾದ ತಾಂಜಾನಿಯಾ, ಉಗಾಂಡಾ, ರುವಾಂಡಾ ದೇಶಗಳಲ್ಲಿ ನಿರ್ಮಿಸಿರುವ ಬೃಹತ್ ಮಸೀದಿಗಳ ಕಾರಣದಿಂದ. ನಾನು ಇವುಗಳನ್ನು ಕಣ್ಣಾರೆ ಕಂಡು, ಆ ದೇಶದ ಜನತೆ ಆತನ ಬಗ್ಗೆ ಹೇಳುವ ಮಾತುಗಳ ಕಾರಣದಿಂದ.
ನಾನು ಪೂರ್ವ ಆಫ್ರಿಕಾದ ಅನೇಕ ರಾಷ್ಟ್ರಗಳನ್ನು ನೋಡಿದ್ದೇನೆ. ಅದರಲ್ಲೂ ಉಗಾಂಡಾ, ರುವಾಂಡಾ ದೇಶಗಳಲ್ಲಿ ಕೆಲವು ಕಾಲ ವಾಸ ಮಾಡಿದ್ದೇನೆ. ಆ ಜನಗಳ ಬದುಕಿನಲ್ಲಿ ಕೆಲ ಕಾಲ ಸಂಪರ್ಕವನ್ನು ಹೊಂದಿದ್ದೇನೆ. ಮುಖ್ಯವಾಗಿ ನಾನು ಕಂಡಂತೆ ಗಡಾಫಿ ತಾಂಜಾನಿಯಾ, ಉಗಾಂಡಾ, ರುವಾಂಡಾ ದೇಶಗಳಲ್ಲಿಯೂ ಜನಪ್ರಿಯ ಧರ್ಮವೊಂದೇ ತಮ್ಮನ್ನೆಲ್ಲ ಬೆಸೆಯುವ ಸಾಧನ ಎಂದು ಭಾವಿಸಿದ್ದರಿಂದ ತನ್ನ ನೆರೆ ರಾಷ್ಟ್ರಗಳಲ್ಲಿ ಧರ್ಮ ಸಂಘಟನೆ ಮಾಡಲೆಂದೇ ಈ ಮೂರೂ ದೇಶಗಳಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾನೆ.
ಈ ದೇಶಗಳು ಅವು ತಮಗೆ ನೀಡಿದ ಅತ್ಯಮೂಲ್ಯ ಕಾಣಿಕೆಗಳು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ. ನನಗೆ ಈ ಮೂರೂ ಮಸೀದಿಗಳನ್ನು ನೋಡುವ ಅವಕಾಶ ಒದಗಿತ್ತು.
ತಾಂಜಾನಿಯಾದ ರಾಜಧಾನಿ ದೊಡಾಮವಲ್ಲಿರುವ ’ನ್ಯಾಷನಲ್ ಮಾಸ್ಕ್’ ತಾನ್ಜಾನಿಯ ದೇಶದ ಅತಿದೊಡ್ಡ ಮಸೀದಿ. ಹಾಗೇ ಇದು ಪೂರ್ವ ಆಫ್ರಿಕಾ ದೇಶದ ಎರಡನೇ ಅತಿದೊಡ್ಡ ಮಸೀದಿ. ಸುಮಾರು ಮೂರು ಸಾವಿರ ಜನ ಏಕಕಾಲದಲ್ಲಿ ಪ್ರಾರ್ಥಿಸುವ ಸ್ಥಳಾವಕಾಶವಿದೆ ಇದನ್ನು 2010ರಲ್ಲಿ ಗಡಾಫಿ ತನ್ನ ದೇಶದ ಜನತೆಗೆ ಇಸ್ಲಾಂ ಧರ್ಮದ ಕಾಣಿಕೆಯಾಗಿ ನೀಡಿದ. ಇದರ ಬಗ್ಗೆ ನನ್ನ ತಾಂಜಾನಿಯ ಪ್ರವಾಸ ಕಥನದಲ್ಲಿ ಹೇಳಿದ್ದೇನೆ. ತಾಂಜಾನಿಯಾ ದೇಶಭಾಷೆಯಾದ ಸ್ವಹೇಲಿಯಲ್ಲಿ ಇದನ್ನು Mskite Wa Gaddffi ಎಂದು ಕರೆಯಲಾಗಿದೆ. ಇದು ಹಾಲು ಬಣ್ಣದ ಮಿನಾರುಗಳನ್ನೊಳಗೊಂಡ ಇಸ್ಲಾಂ ಧರ್ಮದ ಸ್ಮಾರಕವೂ ಆಗಿದೆ.
ಇನ್ನು ಗಡಾಫಿ ಉಗಾಂಡಾದ ಪೂರ್ವ ಆಫ್ರಿಕಾ ದೇಶದ ಅತ್ಯಂತ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ, ಇದು ರಾಜಧಾನಿ ಕೆಂಪಾಲದ ಬೆಟ್ಟದ ಮೇಲೆ ಇದೆ, ಇದರ ವಾಸ್ತು ಶೈಲಿಯಂತೂ ಅಭೂತಪೂರ್ವಬಾದುದು. ಕೆಂಪಾಲದ ಅತಿ ಮಖ್ಯ ಹಾಗೂ ಪ್ರಶಸ್ತ ಜಾಗದಲ್ಲಿರುವಂತದು. 2006 ರಲ್ಲಿ ನಿರ್ಮಾಣಗೊಂಡ ಮಸೀದಿಗೆ ಕಾರಣವಾದದ್ದು ಈದಿ ಆಮೀನ್ನನ ಸ್ನೇಹ. ಈ ಸ್ನೇಹ ಸ್ಮಾರಕವಾಗಿ, ದರ್ಮದ ಸಂಕೇಟವಾಗಿ ತಲೆ ಎತ್ತಿತು. ಆದರೆ ಇದು ನಿರ್ಮಾಣಗೊಳ್ಳುವ ಮೊದಲೇ ಈದಿ ಆಮಿನ್ ತೀರಿಕೊಂಡಿದ್ದನು.
ಇದು ಬೆರಗುಗೊಳಿಸುವಷ್ಟು ವಿಸ್ತಾರವಾಗಿರುವ ಮಸೀದಿ. ನೆಲಅಂತಸ್ತಿನಲ್ಲಿ ಹದಿಮೂರು ಸಾವಿರ, ಟೆರೆಸಿನಲ್ಲಿ ಮೂರುವರೆ ಸಾವಿರ ಹಾಗೂ ಗ್ಯಾಲರಿಯಲ್ಲಿ ಸುಮಾರು ಸಾವಿರ ಜನರು ಪ್ರಾರ್ಥಿಸುವಷ್ಟು ಅವಕಾಶವಿದೆ. ಇದು ಕೂಡ ಉಗಾಂಡಾ ದೇಶಕ್ಕೆ ಗಡಾಫಿ ನೀಡಿದ ಅಮೂಲ್ಯ ಕಾಣಿಕೆಯಾಗಿದೆ. ಗಡಾಫಿಯ ಮರಣದ ನಂತರ ’ಗಡಾಫಿ ನ್ಯಾಷನಲ್ ಮಾಸ್ಕ’ ಎಂಬ ಹೆಸರನ್ನು ಬದಲು ಮಾಡಿ ಈಗ ಇದು ತಾಂಜಾನಿಯಾದಂತೆಯೇ ’ಉಗಾಂಡಾ ನ್ಯಾಷನಲ್ ಮಾಸ್ಕ್’ ಆಗಿದೆ.
ಯಾವ ರಾಷ್ಟ್ರಗಳು ಮಿತ್ರ ರಾಷ್ಟ್ರಗಳು ಎಂದು ಭಾವಿಸಿದ್ದನೋ, ಅವನ ಹೆಸರಿನಲ್ಲಿ ಕಟ್ಟಲ್ಪಟ್ಟ ಭವ್ಯ ಮಸೀದಿಗಳು ಮತ್ತು ಅವನ ಹೆಸರನ್ನು ತಮ್ಮ ಚರಿತ್ರೆಯಲ್ಲಿ ಅಳಿಸಿ ಹಾಕುವಂತೆ ಹೆಸರು ಬದಲಾಯಿಸಿದವು.
ರುವಾಂಡಾ ದೇಶದ ಕಿಗಾಲಿಯಲ್ಲಿನ ಗಡಾಫಿ ನಿರ್ಮಿಸಿದ ಮಸೀದಿಯೂ ಇದೇ ಹಾದಿಯಲ್ಲಿರುವಂತಹದು. ಆದರೆ ಸುಮಾರು ದೇಶಗಳಲ್ಲಿ ಮಸೀದಿ ನಿರ್ಮಿಸಿ ಇಸ್ಲಾಂ ಧರ್ಮದ ಮೂಲಕ ಧರ್ಮವನ್ನು, ದೇಶವಾಸಿಗಳನ್ನು, ಆ ಮೂಲಕ ಮುಸ್ಲಿಂ ಮೂಲಭೂತವಾದಿಗಳನ್ನು ಗೆಲ್ಲುವ ತಂತ್ರಗಾರಿಕೆಯೊಂದನ್ನು ರೂಪಿಸಿಕೊಂಡಿದ್ದು ಸುಳ್ಳಲ್ಲ.
ನಾನು 2011 ಡಿಸೆಂಬರ್ನಲ್ಲಿ ತಾಂಜಾನಿಯಾಕ್ಕೆ ಭೇಟಿ ನೀಡಿದಾಗ, ಆಗತಾನೆ ಗಡಾಫಿಯ ಹತ್ಯೆಯಾಗಿತ್ತು. ತಮ್ಮ ದೇಶದ ಹೆಮ್ಮೆಯ ಮಸೀದಿಗೆ ಕಾರಣನಾದ ದೇಶಸ್ನೇಹಿಯಾದ ಗಡಾಫಿ ಸಾವಿಗೆ ದೇಶದ ಕಂಗಳಲ್ಲಿ ಬತ್ತದ ಕಣ್ಣೀರಿತ್ತು. ತುಂಬಾ ಒಳ್ಳೆಯ ಆದರ್ಶಗಳನ್ನು ಹೊತ್ತು, ತನ್ನ ನಾಡನ್ನು ನಂದನವನವನ್ನಾಗಿ ಮಾಡುತ್ತೇನೆಂದು ಹೊರಟ ಗಡಾಫಿ, ಅವನ ದೇಶದಲ್ಲಿ ಉಂಟಾದ ಕ್ಷಿಪ್ರಕ್ರಾಂತಿ- ಇತ್ಯಾದಿಗಳ ಬಗ್ಗೆಯಷ್ಟೇ ತಿಳಿವಳಿಕೆ ಇದ್ದ ನನಗೆ ಉಗಾಂಡದಲ್ಲಾಗಲಿ, ತಾಂಜಾನಿಯಾದಲ್ಲಾಗಲಿ ಆತನ ಬಗ್ಗೆ ಒಂದೂ ಅಪಶಬ್ಧ ಬರಲಿಲ್ಲ. ಜೊತೆಗೆ ಆತ ಈ ನಾಡಿನ ಜನತೆಗೆ, ಸರಕಾರಕ್ಕೆ ಮಾಡಿದ ಉಪಕಾರಗಳ ಪಟ್ಟಿಯನ್ನೇ ನನಗೆ ತಿಳಿದ ತಾಂಜಾನಿಯನ್ನರು ಹಾಗೂ ಉಗಾಂಡಿಯನ್ನರು ನೀಡಿ, ನನ್ನ ಮುಂದೆ ಬಹಳ ಪ್ರೀತಿ, ಕೃತಜ್ಞತೆ, ಹೆಮ್ಮೆಯಿಂದ ಹೇಳಿಕೊಂಡಿದ್ದರು. ಗಡಾಫಿ ಡೈರಿಯನ್ನು, ಲಿಬಿಯಾ ಡೈರಿಯನ್ನು ನೀವು ಬರೆದಿದ್ದೀರಿ ಎಂದಾಗ ನನಗೆ ಸಹಜವಾಗಿ ಕುತೂಹಲ ಉಂಟಾಗಿತ್ತು. ನನ್ನೆಲ್ಲ ಕುತೂಹಲಗಳಿಗೆ ಉತ್ತರ, ಸಮರ್ಥನೆಗಳನ್ನು ನೀಡುವ ರೀತಿಯಲ್ಲಿ ಕೃತಿ ಕಳಿಸಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.
ಈ ಕೃತಿಯನ್ನು ಯಾವ ಸಾಹಿತ್ಯ ಪ್ರಕಾರದಡಿ ಗುರುತಿಸಬೇಕು? ಇದು ಚರಿತ್ರೆಯೋ? ವ್ಯಕ್ತಿ ಚಿತ್ರಣವೋ? ಪ್ರವಾಸಕಥನವೋ? ರಾಜಕೀಯ ವಿದ್ಯಮಾನಗಳ ದಾಖಲೆಯೋ? ಯಾವ ಪ್ರಕಾರಕ್ಕೂ ಇದು ಇಂಥದೇ, ಹೀಗೆ ಎಂದು ಸುಲಭವಾಗಿ ಸೇರಿಕೊಳ್ಳದೆ ಎಲ್ಲ ಪ್ರಕಾರಗಳಲ್ಲೂ ತನ್ನ ಪ್ರಾತಿನಿಧಿಕತೆಯನ್ನು ಕಾಪಾಡಿಕೊಳ್ಳಲು ಹಂಬಲಿಸುವ ಕೃತಿ ಎನ್ನಬಹುದೇನೋ?
ಮುಖ್ಯವಾಗಿ ಸಾಮ್ರಾಜ್ಯಶಾಹಿ ವಿರೋಧಿಯಾಗಿ, ತನ್ನ ಪುಟ್ಟ ದೇಶ ಲಿಬಿಯಾವನ್ನು ಕಾಪಾಡಲು, ಅದನ್ನು ಆರ್ಥಿಕವಾಗಿ, ಸಮಾಜಿಕವಾಗಿ ಸದೃಢಗೊಳಿಸಲು ಹೋರಾಡಲು ಹೊರಟು ತನ್ನ ದೇಶದ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಅಸ್ತ್ರವಾಗಿ, ವಸಾಹತು ಸಾಮ್ರಾಜ್ಯದ ಆಡಳಿತದ ವಿರುದ್ಧ ಹೋರಾಡಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪರದಾಡಿ, ಕೊನೆಗೆ ಆತ ಮಾಡಿದ ಯಾವ ಸಾಧನೆಯೂ ನೆನಪಿನಲ್ಲ ಉಳಿಯದಂತೆ ಏಕಾಂಗಿಯಾಗಿ ಕೊನೆಗೊಂಡ ಮಹತ್ವಕಾಂಕ್ಷೆಯ ಮಹಾವೀರನ ಬದುಕನ್ನು ಇಟಗಿಯವರ ಎಳೆಎಳೆಯಾಗಿ ಬಿಡಿಸಲು. ಪ್ರಯತ್ನಿಸಿದ್ದಾರೆ. ಕೃತಿಯ ಮುಖ್ಯ ಉದ್ದೇಶ ಇಂತಹ ಮಹಾನ್ ನಾಯಕನ ಹತ್ಯೆ ಹಿಂದೆ ನಡೆದಂತಹ ರಹಸ್ಯ ಕಾರ್ಯಾಚರಣೆಗಳು, ಧಾರ್ಮಿಕ ಮೂಲಭೂತವಾದಿಗಳ ಸಹಕಾರ-ಆ ಮೂಲಕ ಆಫ್ರಿಕಾದಲ್ಲಿ ಭರವಸೆಯ ಬೆಳಕಾಗಿದ್ದ ಗಡಾಫಿಯ ಅಂತ್ಯ-ಮಹಾಪತನ. ಲೇಖಕರೇ ಹೇಳುವಂತೆ, ಅದು ಲಿಬಿಯಾದ ಪತನವೂ ಹೌದು. 2011 ರಲ್ಲಿ ಪತನಗೊಂಡ ಲಿಬಿಯಾ ಇಂದಿಗೂ ಏಳುವ ಸ್ಥಿತಿಯಲ್ಲಿಲ್ಲ.
ಗಡಾಫಿಯಂತಹ ವ್ಯಕ್ತಿತ್ವಗಳನ್ನು ಅಮೆರಿಕವನ್ನೂ ಒಳಗೊಂಡಂತೆ ಮುಂದುವರೆದ ರಾಷ್ಟ್ರಗಳು ಜಗತ್ತಿಗೆ ಬಿಂಬಿಸುವ ರೀತಿಯೇ ಬೇರೆ. ಅವುಗಳಿಗೆ ಸಹಕಾರ ನೀಡುವ ಮಾಧ್ಯಮ ಜಗತ್ತು, ಲೇಖಕರ ಅಭಿಪ್ರಾಯದಂತೆ ಚರಿತ್ರೆಯನ್ನು ತಿರುಚಿ ಹೇಳಿವೆ, ಪ್ರತಿ ವ್ಯಾಖ್ಯಾನಗಳನ್ನು ಸೃಷ್ಟಿ ಮಾಡಿವೆ. ಇಡೀ ಜಾಗತಿಕ ಮನಸ್ಸಿನ ಮೇಲೆ, ಇಂತಹ ಮೂಲಗಳು ಕಟ್ಟಿಕೊಟ್ಟ ಅಭಿಪ್ರಾಯಗಳು ಬಲವಾಗಿ ಸತ್ಯ ಎಂಬಂತೆ ಬೇರರಿದಾಗ, ಅವುಗಳ ಬಲವಾದ ವ್ಯಾಖ್ಯಾನ, ರಚನೆಗಳನ್ನು ವಿರೂಪಗೊಳಿಸುವ ಕೆಲಸಕ್ಕೆ ಇಟಗಿಯವರು ಮುಂದಾಗುತ್ತಾರೆ. ಹೀಗಾಗಿ ಈ ನಾಯಕನ, ಬಹುಮತ ಒಪ್ಪದಂತ ಚರ್ಚೆಯನ್ನು ಮುಂದಿಟ್ಟುಕೊಂಡು ಗಡಾಫಿಯ ಬಗೆಗೆ ಪುನರ್ ವ್ಯಾಖ್ಯಾನ ಮಾಡಲು ತೊಡಗುತ್ತಾರೆ.
ಗಡಾಫಿಯ ಆಡಳಿತ ವೈಖರಿ, ಅವನ ಸಿದ್ಧಾಂತಗಳು, ಆರ್ಥಿಕ ನೀತಿ, ಅರಬ್ ಜಗತ್ತಿಗೆ ಬಹುಮುಖ್ಯ ನಾಯಕ ಎಂಬ ಅಂಶಗಳನ್ನು ಒಪ್ಪಿಕೊಂಡೇ ಕೃತಿರಚನೆಗೆ ಇಳಿಯುತ್ತಾರೆ. ಗಡಾಫಿಯ ಆರ್ಥಿಕ ನೀತಿ, ತನ್ನ ನೆರೆರಾಷ್ಟ್ರಗಳೊಂದಿಗಿದ್ದ ಅವನ ಸೌಹಾರ್ದ ಸಂಬಂಧಗಳು-ಇವುಗಳ ಬಗ್ಗೆ ಲೇಖಕರಿಗೆ ಅತೀವ ಅಭಿಮಾನ. ಹಾಗೆಂದ ಮಾತ್ರಕ್ಕೆ ಅವನಲ್ಲಿ ತಪ್ಪುಗಳೇ ಇರಲಿಲ್ಲವೆಂದಲ್ಲ. ಅವನ್ನು ತುಂಬಾ ಸಕಾರಣವಾಗಿ ವಿವರಿಸುತ್ತಾರೆ. ಗಡಾಫಿ ಮಾಡಿದ ಒಂದಿಷ್ಟು ತಪ್ಪುಗಳು, ಲಿಬಿಯಾ ತಪ್ಪಿದ್ದೆಲ್ಲಿ? ಎಂಬ ಭಾಗಗಳಲ್ಲಿ ಕೃತಿಕಾರ ’ಪೂರ್ವಾಗ್ರಹ ಪೀಡಿ” ಎಂಬ ಮನೋಭಾವನೆಯನ್ನ ಖಂಡಿತ ಅಳಿಸಿ ಹಾಕಿ ನಿಷ್ಪಕ್ಷಪಾತ ವಿಮರ್ಶೆ ಮೂಡಿಬರುತ್ತದ.
ಗಡಾಫಿ ಗರ್ಲ್ಸ್ ಭಾಗದಲ್ಲಿ ಲೇಖಕರು ಗಡಾಫಿಯ ಹೆಣ್ಣುಗಳನ್ನು ಪರಿಚಯ ಮಾಡಿಕೊಡುತ್ತಾರೆ. ಜಗತ್ತಿನ ಯಾವ ರಾಷ್ಟ್ರದಲ್ಲೂ ’ಅಬಲೆ’ ಎಂದು ಭಾವಿಸಲ್ಪಟ್ಟ ಹೆಣ್ಣು ಅಂಗರಕ್ಷಕಿಯಾದ ಉದಾಹರಣೆಯೇ ಇಲ್ಲ. ಆದರೆ ಗಡಾಫಿ ಮುನ್ನೂರು ಹೆಣ್ಣುಮಕ್ಕಳು ತನ್ನ ಅಂಗರಕ್ಷಕ ಪಡೆಯಲ್ಲಿ ನೇಮಿಸಿಕೊಂಡಿದ್ದ. ಇದು ಸ್ವಾಗತಾರ್ಹ ವಿಚಾರವಾದರೂ ಅವರು ಸುಮ್ದರಿಯರೇ ಆಗಿರಬೇಕು, ಕನ್ಯೆಯರೇ ಆಗಿರಬೇಕು, ಸದಾ ಆಧುನಿಕ ಪೋಷಾಕಿನಲ್ಲಿರಬೇಕು, ಮೇಕಪ್ ನಲ್ಲಿರಬೇಕು ಅವನ ಆತ್ಮೀಯರಾಗಿರಬೇಕು ಇತ್ಯಾದಿಗಳು ಮೇಲ್ನೋಟಕ್ಕೆ ಹುಸಿ ಎನ್ನಿಸಿ ಅವನ ಹೆಣ್ಣುಬಾಕತನವನ್ನು ಎತ್ತಿಹಿಡಿಯುತ್ತದೆ. ಅವನ ಆರೋಗ್ಯ ತಪಾಸಣೆಗೆ ಉಕ್ರೇನಿಯನ್ ಚೆಲುವಿನ ಖಣಿಗಳಾದ ನರಸಮ್ಮರೇ ಬೇಕು ಎಂಬ ವಿಚಾರಗಳು, ಸ್ತೀಯರ ಬಗೆಗೆ ಗಡಾಫಿಯ ನಿಲುವನ್ನು ಸೂಚಿಸುತ್ತದೆ. ಎಲ್ಲೋ ಲೇಖಕರು ಸ್ತ್ರೀ ಲೋಕವನ್ನು ಕಾಣುವಷ್ಟು ಪಾವಿತ್ರ್ಯದ ನೆಲೆಯಲ್ಲಿ ಗಡಾಫಿ ಕಾಣುವುದಿಲ್ಲ ಎಂಬುದು ಸಾಬೀತಾಗುತ್ತದೆ. ಹಾಗೇ ಮೊರೆಟ್ಯಾನಿಯನ್ ಚೆಲುವೆಯರ ಬಗೆಗಿನ ರಂಜಕತೆಗಿಂತ ಅವರ ಅಸಹಾಯಕತೆ ನಮಗೆ ಮುಖ್ಯವಾಗುತ್ತದೆ. ಬಲವಾದ ಕಾರಣಗಳು ಇರುವುದಿಂದಲೇ ಸ್ತ್ರೀಯರು ಆ ದೇಶದಲ್ಲಿ ಸುರಕ್ಷಿತರಾಗಿದ್ದಾರೆ ಎಂಬ ಸತ್ಯ ಬಿಂಬಿತವಾಗುತ್ತದೆ.
”ಸಹರಾ ಮರುಭೂಮಿಯಲ್ಲಿ ಒಂದು ಕವಿಗೋಷ್ಠಿ’ಯಲ್ಲಿ ಇಟಲಿಯಿಂದ ಬಂದ ಕವಯತ್ರಿಯ ಬಗೆಗಿನ ದೈಹಿಕ ವಿವರಣೆಗಳು, ’ಬಿಚ್ಚಮ್ಮ’, ’ಮುಚ್ಚಮ್ಮ’ ’ಸೆಕ್ಷಿ’ಯಾಗಿ ಕಾಣಿಸುತ್ತಿದ್ದಳು- ಈ ರೀತಿಯ ಹೆಣ್ಣನ್ನು ಕುರಿತಾದ ವ್ಯಾಖ್ಯಾನಗಳು ಎಲ್ಲೋ ಕಸಿವಿಸಿ ಹುಟ್ಟಿಸುತ್ತವೆ. ಕ್ರಾಂತಿಯಾದ ಅಷ್ಟು ವರ್ಷಗಳ ನಂತರವೂ ಹೆಣ್ಣನ್ನು ಕುರಿತ ಮನೋಭಾವ, ನಿಲುವುಗಳು- ಇನ್ನು ಅಲ್ಲಿನ ಹೆಣ್ಣುಮಕ್ಕಳು ನಮಗೂ ಇಂತ ಅವಕಾಶವಿರಬಾರದಿತ್ತೆ? ಎಂದು ಯೋಚಿಸುವ ರೀತಿ- ಬಹುಭಾಷಾ ಗೋಷ್ಠಿಯಲ್ಲಿ ಯಾವ ವಿಚಾರಗಳು ಯಾವ ಭಾಷೆಯಲ್ಲಿ ಹೇಗೆ ಮುಖ್ಯವಾದವು, ಎಂಬ ಅಂಶಗಳನ್ನೇ ಮರೆತು ಒಬ್ಬ ವಿದೇಶಿ ಹೆಣ್ಣುಮಗಳ ಬಟ್ಟೆಬರೆಗಳು, ತುಂಡು ಬಟ್ಟೆ ತೊಟ್ಟು ಕಾಲು ಮೇಲೆ ಕಾಲು ಹಾಕಿ ಪ್ರದರ್ಶಿಸಿದ ರೀತಿ, ಸಿಗರೇಟಿನ ಸೇದುವಿಕೆ- ಈ ಕಡೆಗೆ ಹೋಗುತ್ತದೆ. ಅವಳು ಮಂಡಿಸಿದ ಕವನ, ಅದಕ್ಕೆ ಅವಳು ಆಯ್ಕೆ ಮಾಡಿಕೊಂಡಿದ್ದ ವಸ್ತು, ನಿರೂಪಿಸಿದ ಪರಿ- ಇವುಗಳ ಬಗೆಗೆ ಚರ್ಚಿಸಿದ್ದರೆ ಸಮಾಧಾನವಾಗುತ್ತಿತ್ತು. ಆ ಕವಿಗೋಷ್ಠಿಯಲ್ಲಿದ್ದ ಉಳಿದ ಕವಿಗಳು ಯಾರು? ಅವರ ಕಾವ್ಯ ತಲ್ಲಣಗಳನು? ಕವಿಗೋಷ್ಠಿಗೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಕ್ರಿಯೆ, ವಿಮರ್ಶೆ ಎಂಥದಾಗಿತ್ತು? ಬಹುಶಃ ಇದರ ಕಡೆಗೆ ಗಮನ ಹರಿಸಿದ್ದರೆ ಸಮಕಾಲೀನ ಲಿಬಿಯನ್ ಸಾಹಿತ್ಯ, ವಿಮರ್ಶೆಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭಿಸುತ್ತಿದ್ದವೇನೋ!
ಇಡೀ ಕೃತಿಯಲ್ಲಿ ತುಂಬಾ ಭಿನ್ನವಾಗಿ ನಿಲ್ಲುವ ಭಾಗ- ಸಹರಾ ಮರಭೂಮಿಯ ವರ್ಣನೆ. ಅವಿನಾತ್ ಶಿಲೆಯಲ್ಲಿ ಅರಳಿರುವ ಪ್ರಾಕೃತಿಕ ಕಲೆ, ಓಬಾರಿಯಾದ ಗೆಬ್ರಾನ್ ಸರೋವರ. ಅಕಾಕುಸ್ ಪರ್ವತಗಳ ವರ್ಣನೆ ಹಾಗೂ ಚಿತ್ರಗಳು ಮನಸ್ಸಿಗೆ ಮುಟ್ಟುತ್ತವೆ. ಮರುಭೂಮಿ ಸುಂದರವಾಗಿರುತ್ತದೆ, ಅಂತರಗಂಗೆ ಇರುತ್ತಾಳೆ, ಮರಭೂಮಿಯಲ್ಲೂ ಹಸಿರು ಚಿಮ್ಮುತ್ತದೆ, ಚಳಿಗಾಲದಲ್ಲಂತೂ ಮರುಭೂಮಿ ಅತಿ ಶೀತಲ- ಇತ್ಯಾದಿಗಳ ವಿವರಣೆಗಳು ಸುಂದರವಾಗಿವೆ, ವಿಶೇಷವಾಗಿವೆ.
’ಮಳೆಯಲ್ಲಿ ಸಿಕ್ಕ ಅವರಿಬ್ಬರ” ಮರುಭೂಮಿಯ ಓಯಸಿಸ್ ಗಳಂತೆ ಲೇಖಕರ ಕಷ್ಟದ ಸಂದರ್ಭದಲ್ಲಿ ಪ್ರತ್ಯಕ್ಷರಾಗಿ ತಮ್ಮ ಸಹಾಯಹಸ್ತ ಚಾಚುತ್ತಾರೆ. ಉತ್ತಮ ಸ್ಥಿತಿಯಲ್ಲಿರುವ ಉದ್ಯೋಗಸ್ಥ ಹೆಣ್ಣುಮಗಳಾಗಲಿ, ಸಣ್ಣ ಸಂಬಳದ ಕ್ಯಾಬ್ ಡ್ರೈವರ್ನಾಗಲಿ, ಒಂದೇ ಮಟ್ಟದ ಮಾನವೀಯತೆ ಇರುವುದನ್ನು ಲೇಖಕರು ಗುರುತಿಸಿಕೊಳ್ಳುವಂತಹ ಸೂಕ್ಷ್ಮಮನಸ್ಸಿನವರಾಗಿದ್ದಾರೆ. ಬಹುಶಃ ಇವರ ನಡವಳಿಕೆಗಳು ಅವರ ರಾಜಕೀಯ ನಾಯಕನಾದ ಗಡಾಫಿಯಿಂದಲೇ ರೂಪಗೊಂಡಿರಬಹುದು ಅಥವಾ ಸಹಜವಾಗಿಯೇ ಅವರೊಳಗಿರುವ ಮಾನವೀಯ ಭಾವನೆಗಳಿಗೆ ಗಡಾಫಿಯ ರಾಜಕೀಯ ಚಿಂತನೆಗಳು ಪುಷ್ಟಿ ನೀಡಿರಬಹುದು. ಏಕೆಂದರೆ ಗಡಾಫಿಯ ರಾಜ್ಯದಲ್ಲಿದ್ದಿದ್ದು ಒಂದೇ ಸೂತ್ರ ’ಸಮಾನತೆ’. ಅದು ಗಂಡು-ಹೆಣ್ಣುಗಳ ನಡುವಿನ ಸಮಾನತೆ ಆಗಿರಬಹುದು ಔದ್ಯೋಗಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿನ ಸಮಾನತೆ ಇರಬಹುದು. ಲೇಖಕರು ತಮ್ಮ ಬದುಕಿನಲ್ಲಿಯೇ ಕಾಣಬರುವ ಇಂತಹ ಅಪರೂಪದ ಘಟನೆಯನ್ನು ಸುಂದರವಾಗಿ ನಿರೂಪಿಸುತ್ತಾರೆ.
ಇಟಗಿಯವರು ಏಳೆಂಟು ವರ್ಷಗಳ ಕಾಲ ಆ ನಲದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದ್ದು, ವಿದ್ಯಾರ್ಥಿಗಳ ನಡುವಿನ ಸಂಬಂಧ, FB, Email ಗಳಿರುವ ಈ ಕಾಲದಲ್ಲಿ ಅವರ ಸಂಬಂದ ಮುಂದುವರೆದದಿಯೇ? ಅಲ್ಲಿನ ವಿದ್ಯಾಪದ್ದತಿ, ಶೈಕ್ಷಣಿಕ ಕ್ಷೇತ್ರದ ಸಾದನೆಗಳು, ಯಾವುದು ವಿದ್ಯಾರ್ಥಿಗಳು ಹೆಚ್ಚು ಬಯಸುವ ವಿಷಯಗಳು, ಅಮೆರಿಕನ್ನರ ಕಾರಣದಿಂದಲೋ, ಅಥವಾ ಪರದೇಶಗಳಿಗೆ ತಮ್ಮ ವದ್ಯಮಾನಗಳು ನುಸಳಬಾರದೆಂದೋ, ಗಡಾಪಯು ಇತರ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳುವ ಸಂಪರ್ಕ ಭಾಷೆಯನ್ನು ಹತ್ತು ವರ್ಷಗಳ ಕಾಲ ನಿಲ್ಲಸಿದಾಗ ವ್ಯಾವಹಾರಿಕ, ಶೈಕ್ಷಣಿಕ ಜಗತ್ತಿನಲ್ಲುಂಟಾದ ತಲ್ಲಣಗಳೇನು? ಯುವ ಜನತೆಯ ಮೇಲುಂಟಾದ ಪರಿಣಾಮಗಳೇನು? ಸ್ತ್ರೀ ಸಮಾನತೆ ಎಂದು ಬೊಬ್ಬಿರಿದ ಗಡಾಫಿಯ ನಾಡಿನಲ್ಲಿ ಸ್ತ್ರೀ ವಿದ್ಯಾಭ್ಯಾಸದ ನೆಲೆಗಳೇನು? ವಿಜ್ಞಾನ ತಂತ್ರಜ್ಞಾನಗಳ ಬಗೆಗೆ ಗಡಾಫಿಯ ನಿಲುವುಗಳೇನಾಗಿದ್ದವು? ಕೇವಲ ತನ್ನನ್ನು ಉಳಿಸಿಕೊಳ್ಳಲು ಅಂಗ ರಕ್ಷಕ ಪಡೆಯನ್ನು ನೇಮಿಸಿಕೊಂಡನೇ? ಕೇವಲ ತನ್ನೊಬ್ಬನ ಆರೋಗ್ಯ ಕಾಪಾಡಿಕೊಳ್ಳಲು ದಾದಿಯರನ್ನು ನೇಮಿಸಿಕೊಂಡನೇ? ದೇಶದ ಆರೋಗ್ಯ ಮಟ್ಟ ಹೇಗಿತ್ತು? ಚಿಕಿತ್ಸಾ ಸೌಲಭ್ಯಗಳಾವವು? ಹೀಗೆ ಓದುಗರ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳಿಗೆ ಲೇಖಕರು ಉತ್ತರ ನೀಡಬಹುದಿತ್ತು.
ಮುಖ್ಯವಾಗಿ ಹಲವಾರು ವರ್ಷಗಳು ಬೇರೊಂದು ನಾಡಿನಲ್ಲಿ ಬದುಕಿದಾಗ, ಆ ನಾಡಿನ ಜನ ಜೀವನ, ಸಾಂಸ್ಕೃತಿಕ ಬದುಕು, ಸಾಮಾಜಿಕ ಬದುಕು, ಅಡಿಗೆ, ಸಂಗೀತ, ನೃತ್ಯ, ಸಂತೆಯಂತಹ ವಿಷಯಗಳ ಬಗೆಗೂ ಇಟಗಿಯವರು ಲಿಬಿಯಾ ದೇಶದ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳು ಪ್ರಕಟಗೊಳ್ಳುವ ಸಾಧ್ಯತೆಗಳು ಇರುತ್ತಿದ್ದವು.
ಇವು ನನ್ನ ಕೆಲವು ಅನುಮಾನಗಳು. ಡೈರಿಯನ್ನು ಅವರು ವಿಸ್ತರಿಸುವದಾದರೆ, ಈ ಎಲ್ಲ ಅಂಶಗಳ ಬಗ್ಗೆಯೂ ಬೆಳಕು ಚೆಲ್ಲಿದರೆ, ಲಿಬಿಯಾ ದೇಶದ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಬಹುಶಃ ಲೇಖಕರು ತಮ್ಮ ನೆನಪಿನಲ್ಲುಳಿದಿರುವ ಅನುಭವಗಳನ್ನು, ಸಾಂಸ್ಕೃತಿಕ ಮುಖಾಮುಖಿಗಳನ್ನು, ಇವತ್ತಿನ ಲಿಬಿಯಾದ ಸ್ಥಿತಿಗತಿಗಳು, ಬದಕಿನ ಸಂತೋಷ, ಸಂಘರ್ಷಗಳನ್ನು ’ಡೈರಿ-2’ ರಲ್ಲಿ ಹೊರಹಾಕಲಿ ಎಂದು ಆಶಿಸುತ್ತೇನೆ.
ವಿವಾದಗಳ ವೈಪರಿತ್ಯದ ನೆಲೆಯಲ್ಲಿ ನಿಂತ ಗಡಾಫಿಯ ಸಿದ್ಧ-ವ್ಯಕ್ತಿ ಚಿತ್ರಣವನ್ನು ಒಡೆದು. ಜನಪರ, ನಿಷ್ಠಾವಂತ ಜನನಾಯಕನ ಹೊಸ ಚಿತ್ರಣವನ್ನು ಸಕರಾತ್ಮಕ ಗುಣಗಳೊಂದಿಗೆ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಜನತೆಯ ಮನೋವಲಯದಲ್ಲಿ ಭದ್ರವಾಗಿ ಕುಳಿತ ಪಾತ್ರವನ್ನು ಹೊರತೆಗೆದು ಅದಕ್ಕೆ ಹೊಸ ವ್ಯಾಖ್ಯಾನವನ್ನು ನೀಡುವಲ್ಲಿ ಇಟಗಿಯವರು ಯಶಸ್ವಿಯಾಗಿದ್ದಾರೆ. ಇಂಥ ಕ್ರಾಂತಿಕಾರಕ ನಾಯಕರ ಸ್ಥಿತಿಯೇ ಹಾಗೆ. ಅವರನ್ನು ಕುರುಡಾಗಿ ಪ್ರೀತಿಸಿ, ಒಪ್ಪಿಕೊಳ್ಳುವ ಜನಗಳೆಷ್ಟೆದ್ದಾರೋ, ಅವನ ಯಾವ ವಿಚಾರಗಳನ್ನೂ ಒಪ್ಪದೇ, ಅಷ್ಟೇ ತೀವ್ರವಾಗಿ ಆಳದಿಂದ ದ್ವೇಷಿಸುವ, ವಿರೋಧಿಸುವ ಜನಗಳು ಇರುತ್ತಾರೆ. ಇಂತಹ ಸಂಕೀರ್ಣ ವ್ಯಕ್ತಿತ್ವವನ್ನು ಮರುವ್ಯಾಖ್ಯಾನ ಪುನರ್ ವ್ಯಾಖ್ಯಾನ ಮಾಡಲು ತಾರ್ಕಿಕ ಜ್ಞಾನವೂ ಇರಬೇಕು, ಧೈರ್ಯವೂ ಬೇಕು. ಇಟಗಿಯವರಿಗೆ ಆ ಎರಡೂ ಗುಣಗಳು ಸಿದ್ಧಿಸಿವೆ ಎಂದೇ ಹೇಳಬಹುದು.
ಡಾ, ಡಿ. ಮಂಗಳಾ ಪ್ರಿಯದರ್ಶಿನಿ
15.12.2019
......................................................................................................................................................
ಲಿಬಿಯಾ ಡೈರಿಯ ಪುಟಗಳನ್ನು ತಿರುವುತ್ತಾ.......
ಉದಯ್ ಅವರು ನನಗೆ ಸುಮಾರು ವರ್ಷಗಳಿಂದ ಪರಿಚಿತರು. ನಾನು ’ಅವಧಿ’ ಅಂತರ್ಜಾಲ ಪತ್ರಿಕೆಯ ಉಪಸಂಪಾದಕಿಯಾಗಿದ್ದಾಗ ಲಿಬಿಯಾ ಕುರಿತ ಅವರ ಈ ಲೇಖನಮಾಲಿಕೆ ’ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಹಾಗಾಗಿಯೇ, ಇದು ಪುಸ್ತಕವಾಗುತ್ತದೆ ಎಂದು ಅವರು ಹೇಳಿದಾಗ ನನಗೆ ಬಹಳ ಸಂತೋಷವಾಗಿತ್ತು. ತೃತೀಯ ಜಗತ್ತಿನ ದೇಶವೊಂದರ ಬಗೆಗೆ ಕೇವಲ ’ರಾಯ್ಟರ್ಸ್’, ’ಗೂಗಲ್’ ಕೊಡುವ ಅಭಿಪ್ರಾಯಗಳನ್ನಷ್ಟೇ ಓದಿರುವ ನಮಗೆ, ಅಲ್ಲೇ ವರ್ಷಗಳನ್ನು ಕಳೆದು ಬಂದವರು ಕೊಡುವ ಅನುಭವ ಕಥನ ಸಿಗುತ್ತಿದೆ ಎನ್ನುವ ಕಾರಣದಿಂದ ಬರುವ ಹಿಗ್ಗುಅದು. ಆದರೆ ಒಂದು ದಿನ ಉದಯ್ ಅವರು ಕರೆ ಮಾಡಿ, ಪುಸ್ತಕಕ್ಕೆ ನಾನು ಮುನ್ನುಡಿ ಬರೆಯಬೇಕು ಎಂದು ಕೇಳಿದಾಗ ನಾನು ಗಾಬರಿ ಬಿದ್ದೆ! ಮೊದಲನೆಯದಾಗಿ, ಆಗ ತಾನೆ ಒಂದು ಹೊಸ ಪ್ರಾಜೆಕ್ಟ್ ನಲ್ಲಿ ಸೇರಿದ್ದ ನನಗೆ ಇದ್ದ ಕಾಲದ ಅಭಾವ ಕಾರಣವಾಗಿದ್ದರೆ, ಇನ್ನೊಂದು ಇಂತಹ ವಿಷಯದಲ್ಲಿ ಮುನ್ನುಡಿ ಬರೆಯುವಷ್ಟು ಆಳದ ಓದು ನನಗಿದೆಯೇ ಎನ್ನುವ ಸಂದೇಹ. ಆದರೆ ಉದಯ್ ಅವರು ’ಒಂದು ಹೆಣ್ಣಾಗಿ ಇದನ್ನು ನೀವು ಹೇಗೆ ನೋಡುತ್ತೀರಿ ಎಂದು ಬರೆಯಿರಿ ಮೇಡಂ’ ಎಂದಾಗ, ಅದಾದರೆ ನಾನು ಮಾಡಬಹುದು ಅನ್ನಿಸಿತ್ತು. ಹಾಗೆಯೇ ಇದನ್ನು ಮತ್ತೊಮ್ಮೆ ಓದಲೆಂದು ಕೈಗೆತ್ತಿಕೊಂಡೆ.
ಹೊಸ ಊರು, ಹೊಸ ಭಾಷೆ, ಹೊಸ ಕೆಲಸ, ಹೊಸ ಮನೆ, ಹೊಸ ಬಂಧ, ಹೊಸ ಸಂಬಂಧ ಎಲ್ಲವೂ ನಮಗೆ ಹೊಸದೇ ಆದ ಜಗತ್ತೊಂದನ್ನು ಪರಿಚಯ ಮಾಡಿಸುತ್ತದೆ. ಕೆಲವು ಸಲ ಆ ಹೊಸತಿಗೆ ನಾವು ಅದರ ಪರಿಧಿಯಾಚೆಗೇ ನಿಂತು ‘ಹಲೋ’ ಎನ್ನುತ್ತೇವೆ, ಕೆಲವು ಸಲ ಅದರ ಗೋಡೆಗಳನ್ನು ದಾಟಿ ಒಳಹೋಗಿ ಅದಕ್ಕೆ ನಮ್ಮ ಬದುಕನ್ನಿಷ್ಟು ಕೊಟ್ಟು, ಅದನ್ನು ನಮ್ಮ ಬದುಕಿಗಿಷ್ಟು ಬಸಿದುಕೊಳ್ಳುತ್ತೇವೆ. ನಾವು ಇನ್ನೊಂದು ದೇಶದ, ರಾಜ್ಯದ ಅಷ್ಟೇ ಏಕೆ, ಇನ್ನೊಂದು ಊರಿನ ಬಗ್ಗೆ ಬರೆಯುವಾಗಲೂ ಈ ವ್ಯತ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಪರಿಧಿಯಾಚೆಗೆ ನಿಂತು ಬರೆಯುವುದು ಪ್ರವಾಸ ಕಥನವಾಗುತ್ತದೆ, ಆ ಪರಿಧಿಯನ್ನು ದಾಟಿ, ಒಳಗೆ ಹೋಗಿ, ಅಲ್ಲಿ ಉಳಿದು, ಅಲ್ಲಿನವರೊಡನೆ ಒಡನಾಡಿದಾಗ ಉದಯ್ ಇಟಗಿಯವರ ’ಲಿಬಿಯಾ ಡೈರಿ’ಯಂತಹ ಪುಸ್ತಕವೊಂದು ರೂಪುಗೊಳ್ಳುತ್ತದೆ.
ಉದಯ್ ಅವರು ಅಲ್ಲಿ ಹೋಗಿರುವುದು ಪ್ರವಾಸಕ್ಕಲ್ಲ, ಅಲ್ಲದೆ ಆ ದೇಶ ಪ್ರವಾಸೋದ್ಯಮಕ್ಕೆ ಹೆಸರಾಗಿರುವುದೂ ಅಲ್ಲ. ಅದು ಲಿಬಿಯಾ, ಗಡ್ಡಾಫಿಯ ಲಿಬಿಯಾ, ಅಮೇರಿಕಾದಂತಹ ಅಮೇರಿಕಾಕ್ಕೆ ಸೆಡ್ಡು ಹೊಡೆದು, ’ಏನೀಗ?’ ಎಂದು ಕೇಳಿದ ಲಿಬಿಯಾ. ಉದಯ್ ಇಟಗಿಯವರ ಈ ಪುಸ್ತಕ ಓದುವಾಗ ನನ್ನ ಮನಸ್ಸಿನಲ್ಲಿದ್ದ ಇನ್ನೊಂದು ದೇಶ ಕ್ಯೂಬಾ. ಒಂದು ಅಧಿವೇಶನದಲ್ಲಿ ಭಾಗವಹಿಸಲೆಂದು ಕ್ಯೂಬಾಕ್ಕೆ ಹೋಗಿದ್ದ ಹಿರಿಯ ಮಾಧ್ಯಮ ತಜ್ಞರಾದ ಜಿ ಎನ್ ಮೋಹನ್ ಅವರು ಕ್ಯೂಬಾವನ್ನು ನೆಪವಾಗಿಟ್ಟುಕೊಂಡು ಇಡೀ ಲ್ಯಾಟಿನ್ ಅಮೇರಿಕಾ ದೇಶಗಳನ್ನು ನಿಯಂತ್ರಿಸಲು ದಾಳ ಉರುಳಿಸುವ ಅಮೇರಿಕಾದ ಹುನ್ನಾರಗಳನ್ನು ಬಿಡಿಸಿಡುತ್ತಾ ಹೋಗುತ್ತಾರೆ. ಉದಯ್ ಅವರು ಬರೆದ ಈ ಪುಸ್ತಕದ ಹಲವಾರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಜಿ ಎನ್ ಮೋಹನ್ ಅವರ ’ನನ್ನೊಳಗಿನ ಹಾಡು ಕ್ಯೂಬಾ’ ನೆರವಾಯಿತು.
ಕ್ಯೂಬಾದಂತೆ ಲಿಬಿಯಾ ಸಹ ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ದೇಶ. ಕ್ಯೂಬಾದಲ್ಲಿ ಸಕ್ಕರೆ ಹೊಳೆದರೆ, ಲಿಬಿಯಾದಲ್ಲಿ ತೈಲ ಹರಿಯುತ್ತದೆ. ಎರಡೂ ದೇಶಗಳೂ ತಮ್ಮಲ್ಲಿನ ಸಂಪತ್ತಿನ ಕಾರಣದಿಂದಲೇ ಜಗತ್ತಿನ ಬಲಶಾಲಿ ರಾಷ್ಟ್ರಗಳ ಕಣ್ಣು ಕುಕ್ಕುತ್ತಿರುತ್ತದೆ. ಕ್ಯೂಬಾದಲ್ಲಿ ಸ್ಪೇನ್ ತಳ ಊರಿದ್ದರೆ, ಲಿಬಿಯಾದಲ್ಲಿ ಇಟಲಿ. ಆ ಎರಡೂ ರಾಷ್ಟ್ರಗಳೂ ತಮ್ಮ ಶಕ್ತ್ಯಾನುಸಾರ ಈ ವಸಾಹತು ದೇಶಗಳನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಕಡೆಯಲ್ಲಿ ವಿಶ್ವದ ’ನಿಯಂತ್ರಕ ಶಕ್ತಿ’ಯಾಗಿ ಹೊರಹೊಮ್ಮಿದ ಅಮೇರಿಕಾ ಕಾಸು ಸಿಗುವ ಕಡೆಯೆಲ್ಲಾ ಅಂಗಡಿ ತೆಗೆದುಕೊಂಡು ಕೂರುತ್ತದೆ. ಅಷ್ಟುಹೊತ್ತಿಗಾಗಲೇ ಇಡೀ ವಿಶ್ವದ ಕಣ್ಣಿಗೆ ತನ್ನ ಕನ್ನಡಕ ಹಾಕಬಲ್ಲಂತಹ ಮಾಧ್ಯಮ ತಾಕತ್ತು ಅಮೇರಿಕಾದ ಕೈಯ್ಯಲ್ಲಿರುತ್ತದೆ. ಹೀಗಾಗಿ ತನ್ನ ಅಗತ್ಯಕ್ಕನುಗುಣವಾಗಿ ಅದು ವಿಶ್ವದ ಅಭಿಪ್ರಾಯಗಳನ್ನು ರೂಪಿಸುವ ಚಾಣಾಕ್ಷತೆ ಮೈಗೂಡಿಸಿಕೊಂಡಿರುತ್ತದೆ. ಇಲ್ಲಿ ಎಲ್ ಬಸವರಾಜು ಅವರು ಹೇಳಿದರು ಎನ್ನಲಾದ ಒಂದು ಮಾತು ನೆನಪಾಗುತ್ತದೆ, ’ಯಾರು ಎಲ್ಲಿ ಚೆಂಡನ್ನು ಯಾವ ಕಡೆಗೆ ಒದ್ದರೂ, ಗೋಲು ಮಾತ್ರ ಅಮೇರಿಕಾದ್ದೆ’. ಹಾಗಾಗಿ ಅಮೇರಿಕಾ ಕ್ಯೂಬಾವನ್ನು ನೋಡಲು ಒಂದು ಕನ್ನಡಕ ಸಿದ್ಧಪಡಿಸಿಡುತ್ತದೆ, ಇರಾಕ್ ಅನ್ನು ನೋಡಲು ಒಂದು ಕನ್ನಡಕ ತಯಾರಿಸಿಡುತ್ತದೆ, ಲಿಬಿಯಾವನ್ನು ನೋಡಲು ಮತ್ತೊಂದು ಕನ್ನಡಕವನ್ನು ತಯಾರಿಸಿಡುತ್ತದೆ. ಆ ಕನ್ನಡಕಗಳ ದೆಸೆಯಿಂದ ಅಮೇರಿಕಾಕ್ಕೆ ಎದುರಾಗಿ ಕಾಲೂರಿ ನಿಂತು ದೇಶವನ್ನು ಕಟ್ಟಿದ ಕ್ಯೂಬಾದ ಬಗ್ಗೆ ಸತ್ಯ ಹೊರ ಬರುವುದೇ ಇಲ್ಲ. ಅಮೇರಿಕಾವನ್ನು ಒಪ್ಪದೆ, ತನ್ನ ನಿಯಮಗಳ ಪ್ರಕಾರ ಬದುಕಲೆತ್ನಿಸಿದ ಲಿಬಿಯಾದ ಹೋರಾಟ ಮರೆಯಾಗಿ, ಗಡ್ಡಾಫಿಯ ಚಾಣಾಕ್ಷತನ ಉದಾಸೀನಕ್ಕೊಳಗಾಗಿ ಅವನ ಲೋಲುಪತೆ ಮಾತ್ರ ಜಗತ್ತಿಗೆ ಕಾಣುತ್ತದೆ, ಯುದ್ಧ ನಡೆದು, ಅಮೇರಿಕಾದ ಪ್ರಚಂಡ ಶಕ್ತಿಯೆದಿರು ಸೋತ ಇರಾಕ್ ನಲ್ಲಿಸದ್ದಾಂ ಹುಸೇನ್ ಸತ್ತು ದಶಕ ಕಳೆದರೂ ಅಮೇರಿಕಾ ಹೇಳಿದ್ದ ’ಜಗತ್ತನ್ನೇ ನಾಶಪಡಿಸುವಂತಹ ಶಸ್ತ್ರಾಸ್ತ್ರ’ ಕಾಣಸಿಗುವುದಿಲ್ಲ. ಇದೆಲ್ಲಾ ವಿಷಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಾವು ಉದಯ್ ಇಟಗಿಯವರ ಈ ಪುಸ್ತಕವನ್ನು ಓದಬೇಕಾಗುತ್ತದೆ.
ಲಿಬಿಯಾದ ಕಾಲೇಜೊಂದರಲ್ಲಿ ಇಂಗ್ಲಿಷ್ ಕಲಿಸಲೆಂದು ಉದಯ್ ಲಿಬಿಯಾಗೆ ಹೋಗುತ್ತಾರೆ. ಅಲ್ಲಿ ಅವರು ಕಂಡ ಬದುಕು, ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಅವರು ಬರೆಯುತ್ತಾರೆ. ಇದನ್ನು ಬರೆಯುವಾಗ ಉದಯ್ ಅವರು ಯಾವುದೇ ಆಕರವನ್ನು ನಮ್ಮೆದುರಿಗೆ ಇಡುವುದಿಲ್ಲ. ಅದಕ್ಕೆ ನೆರವಾಗುವ ಯಾವುದೇ ಪುಸ್ತಕ, ಲೇಖನ, ಭಾಷಣವನ್ನು ಅವರು ಕೋಟ್ ಮಾಡುವುದಿಲ್ಲ. ಅವರ ಬರಹವನ್ನು ನಮಗೆ ಲಭ್ಯವಿರುವ ಮಾಹಿತಿಯ ಜೊತೆಗೆ ಹೋಲಿಸಿ ನೋಡೋಣ ಎಂದರೆ ನಮ್ಮೆದುರಿಗಿರುವುದು ಪಾಶ್ಚಿಮಾತ್ಯ ರಾಷ್ಟ್ರ ಪ್ರಣೀತ ಸುದ್ದಿಮನೆಯ ಸುದ್ದಿಗಳು. ಹಾಗಾಗಿ ನಾವು ಲಿಬಿಯಾವನ್ನು ಉದಯ್ ಅವರ ಕಣ್ಣಿನ ಮೂಲಕವೇ ನೋಡಬೇಕಾಗುತ್ತದೆ. ಅವರ ಬರವಣಿಗೆಯನ್ನು ನಾವು ಮೂರು ನೆಲೆಗಳಿಂದ ಅರ್ಥೈಸಿಕೊಳ್ಳಬಹುದು. ಮೊದಲನೆಯದು ಲಿಬಿಯಾ, ಎರಡನೆಯದು ಲಿಬಿಯಾದಲ್ಲಿ ಉದಯ್ ಮತ್ತು ಮೂರನೆಯದು ಮತ್ತು ಉದಯ್ ಅವರ ಮಟ್ಟಿಗೆ ಮುಖ್ಯವಾದದ್ದು ಗಡ್ಡಾಫಿ ಮತ್ತು ಗಡ್ಡಾಫಿಯ ಲಿಬಿಯಾ.
1968 ರಲ್ಲಿ, ತನ್ನ 27 ನೆ ವಯಸ್ಸಿನಲ್ಲಿ ಒಂದು ಕ್ರಾಂತಿಯ ಕೂಸಾಗಿ ಲಿಬಿಯಾದ ಆಡಳಿತ ಸೂತ್ರವನ್ನು ಕೈಯಲ್ಲಿ ಹಿಡಿದವನು ಗಡ್ಡಾಫಿ. ’Brotherly Leader and Guide of the First of September Great Revolution of the Socialist People's Libyan Arab Jamahiriya’ ಎನ್ನುವ ಆಕರ್ಷಕ ಹೆಸರನ್ನಿಟ್ಟುಕೊಂಡು ಅವನು ಲಿಬಿಯಾವನ್ನು ಆಳಲು ಪ್ರಾರಂಭಿಸುತ್ತಾನೆ, ಹಾಗೆ 47 ವರ್ಷಗಳ ಕಾಲ ಆಳುತ್ತಾನೆ. ಕ್ಯೂಬಾ ಮತ್ತು ಲಿಬಿಯಾಗೆ ಒಂದು ಸಾಮ್ಯತೆ ಇದೆ. ಎರಡೂ ದೇಶಗಳಲ್ಲಿ ಅಪಾರ ಮೌಲ್ಯದ ನೈಸರ್ಗಿಕ ಸಂಪತ್ತು ಇರುತ್ತದೆ. ಆ ದೇಶಗಳನ್ನು ವಸಾಹತು ಮಾಡಿಕೊಂಡ ರಾಷ್ಟ್ರಗಳು ಅದರ ಲಾಭ ಪಡೆಯುತ್ತಿರುತ್ತದೆ. ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ರೋ ಮತ್ತು ಲಿಬಿಯಾದಲ್ಲಿ ಗಡ್ಡಾಫಿ ಇದನ್ನು ವಿರೋಧಿಸುತ್ತಾರೆ. ’ನಮ್ಮ ದೇಶದ ಸಂಪತ್ತಿಗೆ ನಾವು ಬೆಲೆ ನಿರ್ಧರಿಸುತ್ತೇವೆ’ ಎಂದು ಕಾಲೂರಿ ನಿಂತು ಬಿಡುತ್ತಾರೆ. ಅದರ ಜೊತೆ ಜೊತೆಯಲ್ಲಿ ಇಬ್ಬರೂ ತಮ್ಮ ನೆಲದಲ್ಲಿ ನಿಂತಿದ್ದ ಅಮೇರಿಕಾ ಸೈನ್ಯ ನೆಲೆಯನ್ನು ಖಾಲಿ ಮಾಡಿಸಲು ಅಣಿಯಾಗುತ್ತಾರೆ. ಆಗ ಶುರು ಆಗುತ್ತದೆ ಅಮೇರಿಕಾದ ಕುಟಿಲೋಪಾಯಗಳು. ಆರ್ಥಿಕ ದಿಗ್ಭಂದನ, ರಾಜಕೀಯ ಒತ್ತಡ, ಅಂತರಾಷ್ಟ್ರೀಯ ಸಮುದಾಯದ ಮೂಲಕ ಒತ್ತಡ, ವ್ಯಕ್ತಿತ್ವಹರಣ, ತನಗಿರುವ ಅಪಾರವಾದ ಮಾಧ್ಯಮ ಶಕ್ತಿಯ ಮೂಲಕ ಅವರ ವಿರುದ್ಧ ಅಭಿಪ್ರಾಯ ರೂಪಿಸುವುದು ಎಲ್ಲವನ್ನೂ ಅಮೇರಿಕಾ ಮಾಡುತ್ತದೆ. ಅಲ್ಲಿ ಕ್ಯಾಸ್ಟ್ರೋ ಮತ್ತು ಇಲ್ಲಿ ಗಡ್ಡಾಫಿ ಇಬ್ಬರೂ ದೃಢವಾಗಿ ನಿಂತು ಅದನ್ನು ಎದುರಿಸುತ್ತಾರೆ. ಬಹುಶಃ ಇಲ್ಲಿಗೆ ಅವರಿಬ್ಬರ ನಡುವಣ ಹೋಲಿಕೆ ಮುಗಿಯುತ್ತದೆ. ಗಡ್ಡಾಫಿ ತನ್ನ ಜನರಿಗೆ ಕೈತುಂಬಾ ಹಣವನ್ನೇನೋ ಸುರಿಯುತ್ತಾನೆ, ಆದರೆ ಲಿಬಿಯಾವನ್ನು ಕ್ಯೂಬಾದಂತಹ ರಾಷ್ಟ್ರವನ್ನಾಗಿ ರೂಪಿಸುವುದರಲ್ಲಿ, ಸಮುದಾಯ ಆರೋಗ್ಯ, ವಿದ್ಯಾಭ್ಯಾಸದಂತಹ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದರಲ್ಲಿ, ಅಮೇರಿಕಾದಂತಹ ದೈತ್ಯ ಶಕ್ತಿಯ ಎದುರಾಗಿ ಕ್ಯೂಬಾ ಹಣತೆ ದೀಪದಂತೆ ನಿಂತು ನಿರಂತರವಾಗಿ ಉರಿಯುತ್ತಾ ಹೋದಂತೆ ತನ್ನ ದೇಶವನ್ನು ರೂಪಿಸುವುದರಲ್ಲಿ ಗಡ್ಡಾಫಿ ಸೋಲುತ್ತಾನೆ. ಕ್ಯಾಸ್ಟ್ರೋ ’ನಿಮ್ಮ ಬದ್ಧತೆಯನ್ನು ಕೊಡಿ, ನಿಮ್ಮ ಊಟದ ಒಂದು ತುತ್ತು, ನಿಮ್ಮ ಶ್ರಮದ ಒಂದು ದಿನ ಕೊಡಿ, ರಾಷ್ಟ್ರ ಕಟ್ಟೋಣ’ ಎನ್ನುತ್ತಾರೆ, ಗಡ್ಡಾಫಿ ’ಇದೋ ಇನ್ನೂ ಒಂದು ಮುಷ್ಟಿ ಹಣ ಕೊಡುತ್ತೇನೆ, ನನ್ನ ಜೊತೆಗೆ ನಿಲ್ಲಿ’ ಎನ್ನುತ್ತಾರೆ. ಅಮೇರಿಕಾದ ಸಿಐಎ ಎಷ್ಟೇ ಪ್ರಯತ್ನಿಸಿದರೂ ಕ್ಯಾಸ್ಟ್ರೋನನ್ನು ಮುಟ್ಟಲಾಗುವುದಿಲ್ಲ, ಅದೇ ಅಮೇರಿಕಾ ಗಡ್ಡಾಫಿಯನ್ನು ಅವನ ದೇಶದ ಕ್ರಾಂತಿಕಾರರ ಕೈಲಿ ಹೀನಾಯವಾಗಿ ಬೀದಿಯಲ್ಲಿ ಸಾಯಿಸಿಹಾಕುತ್ತದೆ. ಗಡ್ಡಾಫಿಯ ದೀರ್ಘ ಆಡಳಿತದ ಮೊದಲು ಮತ್ತು ನಂತರದ ಲಿಬಿಯಾದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಿಬಿಯಾದ ಮೇಲೆ ಒಂದು ಪೈಸೆ ಸಾಲ ಇರುವುದಿಲ್ಲ, ತಲಾ ಆದಾಯ ಅತ್ಯಂತ ಉನ್ನತ ಮಟ್ಟದಲ್ಲಿರುತ್ತದೆ ಎನ್ನುವಷ್ಟೇ ಸತ್ಯ ಅಲ್ಲಿ ಭ್ರಷ್ಟತೆ ಸಹ ಮತ್ತಷ್ಟು ಹೆಚ್ಚಿರುತ್ತದೆ, ಆಡಳಿತ ಯಂತ್ರ ಮತ್ತಷ್ಟು ಕುಸಿದಿರುತ್ತದೆ ಎನ್ನುವುದು. ಈ ’ಡೈರಿ’ ಅದರ ಕಾರಣಗಳನ್ನು ಶೋಧಿಸುವ ದೃಷ್ಟಿಯನ್ನು ನಮಗೆ ಒದಗಿಸುತ್ತದೆ.
ಉದಯ್ ತಮ್ಮ ಪುಸ್ತಕದಲ್ಲಿ ಹೇಗೆ ಗಡ್ಡಾಫಿ ಚಾಣಾಕ್ಷತನದಿಂದ ಅಮೇರಿಕಾವನ್ನು ಕಟ್ಟಿ ಹಾಕಿದ ಎಂದು ವಿವರಿಸುತ್ತಾರೆ. ಆತ ಅಧಿಕಾರಕ್ಕೆ ಬಂದಾಗ ಇದ್ದ ತೈಲದ ಮಾರಾಟ ಬೆಲೆ ಒಂದು ಬ್ಯಾರೆಲ್ ಗೆ ಸುಮಾರು ೪೦ ಸೆಂಟ್ಸ್, ಹಂತಹಂತವಾಗಿ ಆತ ಅದನ್ನು ಬ್ಯಾರೆಲ್ ಗೆ ೪೦ ಡಾಲರ್ ಗಳಿಗೂ ಹೆಚ್ಚು ಮಾಡುತ್ತಾನೆ. ಪಾಶ್ಚಿಮಾತ್ಯ ರಾಷ್ಟ್ರಗಳು ಅದನ್ನು ತೆರುವಂತೆ ಮಾಡುತ್ತಾನೆ. ಪ್ರಜೆಗಳಿಗೆ ಒಳ್ಳೆಯ ವಿದ್ಯೆ ದೊರಕುವಂತೆ ಮಾಡುತ್ತಾನೆ. ವಿದ್ಯಾಭ್ಯಾಸದ ನಂತರ ಸರಿಯಾದ ಕೆಲಸ ಸಿಗದಿದ್ದರೆ ಅವರ ಓದಿಗೆ ಸರಿಯಾದ ಸಹಾಯ ಧನ, ಮದುವೆ ಆದ ಕೂಡಲೆ ದಂಪತಿಗೆ ಮನೆ ಕಟ್ಟಿಕೊಳ್ಳಲು ಸಾಲ, ವ್ಯಾಪಾರ ಮಾಡಲು ಸಾಲ, ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ವಾಹನ ಮತ್ತು ವಿದ್ಯಾರ್ಥಿ ವೇತನ ಹೀಗೆ ಗಡ್ಡಾಫಿಯ ಆಡಳಿತ ವೈಖರಿಯನ್ನು ಲೇಖಕರು ಪ್ರಶಂಸಿಸುತ್ತಾ ಹೋಗುತ್ತಾರೆ. ಅವರು ತೆರೆದಿಡುವ ಇನ್ನೊಂದು ಬಾಗಿಲು, ’ಸರ್ವಾಧಿಕಾರಿಯ ನಾಡಿನಲ್ಲಿದ್ದ ಸಮಾನತೆಯ ಬಾಳ್ವೆಯ’ನ್ನು ಕುರಿತಾದ್ದು. ಹೇಗಿದ್ದ ಲಿಬಿಯಾ ಹೇಗಾಯಿತು ಮತ್ತು ಗಡ್ಡಾಫಿಯ ನಂತರ ಅದು ಏನಾಯಿತು ಎನ್ನುವುದನ್ನು ಅವರು ವಿವರವಾಗಿ ಚಿತ್ರಿಸುತ್ತಾರೆ. ಎಲ್ಲೋ ಒಂದು ಕಡೆ ಅವರು ಗಡ್ಡಾಫಿಯ ವ್ಯಕ್ತಿತ್ವದ ಮೋಡಿಗೆ ಸಿಲುಕಿರುವರೇನೋ ಎನ್ನಿಸುವಷ್ಟು ಗಡ್ಡಾಫಿ ಅವರಿಗೆ ಹತ್ತಿರವಾಗಿರುತ್ತಾನೆ. ವ್ಯಕ್ತಿ ಚಿತ್ರ ಬರೆಯುವಾಗ ಆ ವ್ಯಕ್ತಿಯೊಡನೆ ಒಂದು ಅಂತರ ಕಾಯ್ದುಕೊಳ್ಳುವುದು ಕಷ್ಟ ಆದರೆ ಅತ್ಯಗತ್ಯ. ಹಾಗಾಗದಾಗ ಎಲ್ಲೋ ಒಂದು ಕಡೆ ಅದು ಬರವಣಿಗೆಗೆ ಒಂದು ಚೌಕಟ್ಟು ಕಟ್ಟಿಬಿಡುತ್ತದೆ. ಆ ಚೌಕಟ್ಟಿನೊಳಗೆ ಲಿಬಿಯಾ ಮತ್ತು ಗಡ್ಡಾಫಿಯನ್ನು ಪ್ರತ್ಯೇಕಿಸಿ ನೋಡುವುದು ಕಷ್ಟವಾಗಿ ಬಿಡುತ್ತದೆ. ಗಡ್ಡಾಫಿಯ ವ್ಯಕ್ತಿತ್ವದ ದ್ವಂದ್ವ ಮತ್ತು ವಿರೋದಾಭಾಸಗಳನ್ನು ಪುಸ್ತಕ ನಮ್ಮ ಕಣ್ಣೆದುರಿಗಿಡುವ ಘಳಿಗೆಯಲ್ಲಿ ಲೇಖಕರು ತಮಗೇ ಅರಿವಿಲ್ಲದಂತೆ ಗಡ್ಡಾಫಿಯ ಸಹಾಯಕ್ಕೆ ಬಂದುಬಿಡುತ್ತಾರೆ. ಪುಸ್ತಕ ಬರೆಯುವಾಗಲೇ ಅವರು ಒಂದು ನಿರ್ಧಾರ ತೆಗೆದುಕೊಂಡು ಅದನ್ನು ಸಾಬೀತು ಮಾಡಲು ಪುರಾವೆಗಳನ್ನು ಒದಗಿಸುತ್ತಾಹೋಗುತ್ತಿದ್ದಾರೆ ಎಂದೂ ಅನ್ನಿಸಿಬಿಡುತ್ತದೆ.
ಒಂದು ವಿಶ್ವವಿದ್ಯಾಲಯದ ಡೀನ್ ಮತ್ತು ಅದೇ ಕಾಲೇಜಿನ ಒಬ್ಬ ಕರ್ಮಚಾರಿಯ ನಡುವೆ ಇರುವ ಸಮಾನತೆಯ ಕೊಡುಕೊಳ್ಳುವಿಕೆಯ ಬಗ್ಗೆ ಬರೆಯುತ್ತಾ ಉದಯ್ ಅವರು ತಮ್ಮ ಬರಹವನ್ನು ಪ್ರಾರಂಭಿಸುತ್ತಾರೆ, ಅದರೊಂದಿಗೆ ಪುಸ್ತಕಕ್ಕೆ ಒಂದು ಧನಾತ್ಮಕವಾದ ಆವರಣವನ್ನು ಸಹ ನಿರ್ಮಿಸುತ್ತಾರೆ. ಅಷ್ಟೇ ಆಸಕ್ತಿಕಾರಿಯಾಗಿರುವುದು ಯಾರನ್ನಾದರೂ ಮಾತನಾಡಿಸುವಾಗ ಲಿಬಿಯನ್ನರು ಅವರು, ಅವರ ಮನೆಯವರದಷ್ಟೇ ಅಲ್ಲದೆ ಅವರ ಮನೆಯ ಸಾಕುಪ್ರಾಣಿಗಳ ಕ್ಷೇಮಸಮಾಚಾರವನ್ನು ಸಹ ವಿಚಾರಿಸುವುದು. ಅದನ್ನು ಓದುವಾಗ ನಮಗರಿವಿಲ್ಲದಂತೇ ನಮ್ಮ ತುಟಿಗಳ ಮೇಲೆ ನಗು ಅರಳುತ್ತದೆ. ಪುಸ್ತಕವನ್ನು ಆತ್ಮೀಯವಾಗಿಸುವುದರಲ್ಲಿ ಇಂತಹ ವಿವರಗಳು ಸಹಾಯ ಮಾಡುತ್ತವೆ.
ಲಿಬಿಯಾ ಕಂಡರೆ ನಮಗಿರಬಹುದಾದ ಅನೇಕ ಭಾವನೆ ಮತ್ತು ಅಭಿಪ್ರಾಯಗಳನ್ನು ಒಡೆದು ಹಾಕಿ, ನಮಗೆ ಅಚ್ಚರಿ ಎನ್ನಿಸಬಹುದಾದ ಅನೇಕ ವಿಷಯಗಳನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಸಹರಾ ಮರುಭೂಮಿಯಲ್ಲಿ ನಲ್ವತ್ತು ಅಡಿ ಆಳಕ್ಕೆ ತೋಡುವಷ್ಟರಲ್ಲಿ ನೀರಿನ ಚಿಲುಮೆ ಉಕ್ಕುತ್ತದೆಯಂತೆ. ಅಲ್ಲಿನ ಜನಕ್ಕೆ ಕೃಷಿ ಮಾಡಲು ಅನುಕೂಲವಾಗುವಂತೆ ಗಡ್ಡಾಫಿ ಅತಿ ದೊಡ್ಡ ನೀರಾವರಿ ಯೋಜನೆಯೊಂದನ್ನು ಕಲ್ಪಿಸಿಕೊಟ್ಟಿದ್ದ. ಆ ಯೋಜನೆ ಇಡೀ ವಿಶ್ವದಲ್ಲೇ ಮಾನವ ನಿರ್ಮಿತ ಅತಿದೊಡ್ದ ನೀರಾವರಿ ಯೋಜನೆ ಎನಿಸಿಕೊಂಡಿದೆ ಹಾಗೂ ಅದನ್ನು ಜಗತ್ತಿನ ಎಂಟನೆಯ ಅದ್ಭುತ ಎಂದು ಗುರುತಿಸಲಾಗಿದೆ ಎಂದು ಉದಯ್ ಹೇಳುತ್ತಾರೆ. ಅಷ್ಟೇ ಅಚ್ಚರಿಗೊಳಿಸುವ ಮತ್ತೊಂದು ಮಾಹಿತಿ, ಮರಳುಗಾಡಿನೊಳಗಡೆಯ ಮೈನಡುಗಿಸುವ ಚಳಿಯನ್ನು ಕುರಿತಾದದ್ದು. ಹೊರಗೆ ಸುಡುಕೆಂಡದಂತಹ ಬಿಸಿಯನ್ನೂ, ಒಳಗೆ ಕತ್ತರಿಸುವ ಚಳಿಯನ್ನೂ ಒಳಗೊಂಡ ಹಾಗೆಯೇ ದೇಶಬಿಟ್ಟು ದೇಶಕ್ಕೆ ದುಡಿಯಲು ಹೋಗುವವರ ಅನಿವಾರ್ಯತೆ, ಹತಾಶೆ, ಒಂಟಿತನ, ನೆನಪು... ಸಹ. ಇದನ್ನು ಉದಯ್ ಹೀಗೆ ಬರೆಯುತ್ತಾರೆ, ’ಹಾಗೆ ನೋಡಿದರೆ ಹೊರದೇಶದಲ್ಲಿ ದುಡಿಯುತ್ತಿರುವ ನಮ್ಮಂಥವರು ಇಲ್ಲಿಗೆ ಬರುವ ಮುನ್ನ ಈ ದುಡಿಮೆಯಿಂದ ಇದ್ದ ಬಿದ್ದ ಒಂದಷ್ಟು ಸಾಲಗಳನ್ನು ತೀರಿಸಿ ಮತ್ತೆ ಇಂಡಿಯಾಕ್ಕೆ ವಾಪಾಸಾಗಿ ನಮ್ಮ ಎಂದಿನ ಕೆಲಸವನ್ನು ಮುಂದುವರಿಸದರಾಯಿತು ಎಂದುಕೊಂಡು ಬರುತ್ತೇವೆ. ಆದರೆ ಕ್ರಮೇಣ ಮಕ್ಕಳನ್ನು ಒಳ್ಳೆ ಸ್ಕೂಲಿಗೆ ಸೇರಿಸಲು ಹಣ ಬೇಕು. ಅದಕ್ಕೆ ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಇನ್ನೊಂದು ವರ್ಷ ಮುಂದುವರೆಸುತ್ತೇವೆ. ಅದು ಮುಗಿಯುತ್ತಿದ್ದಂತೆ ವಾರಿಗೆಯವರು, ಸ್ನೇಹಿತರು ಒಂದು ಸೈಟ್ ತೆಗೆದುಕೊಂಡಿದ್ದಾರೆ. ನಾನೂ ಒಂದು ತೆಗೆದುಕೊಳ್ಳಬೇಕು. ಮತ್ತೆ ಅದಕ್ಕೋಸ್ಕರ ಇನ್ನೊಂದೆರಡು ವರ್ಷ ಉಳಿಯುತ್ತೇವೆ. ಅದರ ಕಮಿಟ್‍ಮೆಂಟ್ ಮುಗಿಯುತ್ತಿದ್ದಂತೆ ಇನ್ನೊಂದು ಸೈಟ್ ತೆಗೆದುಬಿಡೋಣ, ಕಷ್ಟಕಾಲಕ್ಕೆ ಆಗಬಹುದು ಎನ್ನುವ ದೂರದ ಆಸೆ. ಅದಕ್ಕೋಸ್ಕರ ಮತ್ತೊಂದೆರಡು ವರ್ಷ. ಅದರ ಸಾಲ ಎಲ್ಲಾ ತೀರುತ್ತಿದ್ದಂತೆ ಹೇಗೂ ಒಳ್ಳೆಯ ಸಂಬಳ ಇದೆ. ನಮ್ಮದೇ ಒಂದು ಸೂರನ್ನು ಯಾಕೆ ಮಾಡಿಕೊಳ್ಳಬಾರದು ಎನಿಸಿ ಮತ್ತೆ ಅದಕ್ಕಾಗಿ ಇನ್ನೊಂದೆರಡು ವರ್ಷ ಉಳಿಯುತ್ತೇವೆ. ಅದೆಲ್ಲಾ ಮುಗಿಯುತ್ತಿದ್ದಂತೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸಮಾಡಿ ಒಗ್ಗಿಹೋದ ಮನಸ್ಸು ಇಂಡಿಯಾದಲ್ಲಿ ಸಿಗುವ ಸಣ್ಣ ಮೊತ್ತದ ಸಂಬಳಕ್ಕೆ ಕೆಲಸಮಾಡಲು ಅಣಿಯಾಗುತ್ತದೆಯೇ? ಹೀಗಾಗಿ ಮತ್ತೆ ಇನ್ನೊಂದೆರಡು ವರ್ಷ ದುಡಿದುಕೊಂಡು ಬಂದ ಹಣವನ್ನು ಬ್ಯಾಂಕಿನಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸಿದರಾಯಿತು ಎಂದುಕೊಂಡು ಮತ್ತೆ ಒಂದೆರೆಡು ವರ್ಷ ಮುಂದೂಡುತ್ತೇವೆ. ಹೀಗೆ, ಹೋಗಬೇಕೆಂದುಕೊಳ್ಳುವದು, ಮತ್ತೆ ಮುಂದೂಡುವದು, ಹೋಗಬೇಕೆಂದುಕೊಳ್ಳುವದು, ಮತ್ತೆ ಮುಂದೂಡುವದು ನಡೆಯುತ್ತಲೇ ಇರುತ್ತದೆ. ಮನುಷ್ಯನ ಆಸೆಗಳಿಗೆ ಕೊನೆ ಎಲ್ಲಿ? ಹೀಗೆ ಒಂದಾದ ಮೇಲೊಂದರಂತೆ ಆಸೆಗಳನ್ನು ತೀರಿಸಿಕೊಳ್ಳುವಷ್ಟೊತ್ತಿಗೆ ನಮ್ಮ ಬದುಕಿನ ಎಂಟತ್ತು ವರ್ಷಗಳನ್ನು ನಿಜವಾದ ಆಪ್ಯಾಯತೆಗಳಿಲ್ಲದೆ ಕಳೆದುಬಿಟ್ಟಿರುತ್ತೇವೆ...’ ಓದುತ್ತಿರುವ ಕಣ್ಣುಗಳು ಒಂದು ಕ್ಷಣ ನಿಂತು ಮನಸ್ಸು ಮ್ಲಾನವಾಗುತ್ತದೆ. ದೂರದಲ್ಲಿದ್ದು ಬಿಟ್ಟು ಬಂದ ಸಂಬಂಧಗಳನ್ನು ಕಾಯ್ದುಕೊಳ್ಳಬೇಕಾದ ಕಷ್ಟ ಸಣ್ಣದಲ್ಲ. ಇಂತಹ ಒಳನೋಟಗಳಿಂದ ಪುಸ್ತಕ ಹೆಚ್ಚು ಆಪ್ತವಾಗುತ್ತಾ ಹೋಗುತ್ತದೆ. ಮುಂದುವರೆದು ಅವರು, ’ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಅವರಿಗೆ ಲ್ಯಾಪ್‍ಟಾಪ್, ಇಂಟರ್ನೆಟ್ ಕನಸಿನ ಮಾತು. ಹೋಗಲಿ ಫೋನು ಆದರೂ ಮಾಡಿ ಊರಿನಲ್ಲಿರುವವರೊಂದಿಗೆ ಮಾತಾಡೋಣವೆಂದರೆ ಭಾರಿ ಮೊತ್ತವನ್ನು ತೆರಬೇಕಾಗುತ್ತದೆಂದು ಸುಮ್ಮನಿದ್ದುಬಿಡುತ್ತಾರೆ. ಮಾಡಿದರೂ ಹತ್ತೋ ಹದಿನೈದು ದಿವಸಗಳಿಗೊಂದು ಸಾರಿ ಮಾಡುತ್ತಾರೆ. ಮಾತನಾಡುವುದನ್ನೆಲ್ಲಾ ಒಂದು ಹಾಳೆಯಲ್ಲಿ ಬರೆದುಕೊಂಡು ಬಡಬಡನೆ ಮಾತನಾಡಿ ಮುಗಿಸುತ್ತಾರೆ. ಅದೂ ಕೇವಲ ಐದಾರು ನಿಮಿಷಗಳಷ್ಟು ಮಾತ್ರ. ಇಂಥವರು ತಮ್ಮ ಕಾಮನೆಗಳನ್ನಷ್ಟೇ ಅಲ್ಲ ಭಾವನೆಗಳನ್ನು ಕೂಡ ಹತ್ತಿಕ್ಕಿ ಬದುಕುತ್ತಾರೆ.’ – ಇಲ್ಲಿ ಅವರು ವಿದೇಶಕ್ಕೆ ಹೋಗಿ ಪಡೆದುಕೊಂಡರೋ, ಇಲ್ಲ ಕಳೆದುಕೊಂಡರೊ?
ಹಾಗೆಂದು ಪುಸ್ತಕದಲ್ಲಿರುವ ಎಲ್ಲವನ್ನೂ ಮನಸ್ಸು ಒಪ್ಪಿಕೊಳ್ಳುತ್ತದೆ ಎಂದೂ ಅಲ್ಲ. ಇಲ್ಲಿ ನನಗೆ ಕೆಲವು ತಕರಾರುಗಳು ಸಹ ಕಂಡವು, ಅದನ್ನು ಬರೆಯದಿದ್ದರೆ ಈ ಬರಹ ಅಪೂರ್ಣ ಎನ್ನುವ ಕಾರಣಕ್ಕೆ ಅವನ್ನು ಇಲ್ಲಿ ನಮೂದಿಸುತ್ತಿದ್ದೇನೆಯೇ ಹೊರತು, ಅದನ್ನು ಬರಹದ ದೋಷವನ್ನಾಗಿ ತೋರಿಸುವುದು ನನ್ನ ಉದ್ದೇಶವಲ್ಲ. ಮೊದಲನೆಯದಾಗಿ ಇಟಗಿಯವರು ’Gaddafi’s Girls’ ಎಂದು ಕರೆಯುವ ಗಡ್ಡಾಫಿಯ ಅಂಗರಕ್ಷಕಿಯರ ಬಗ್ಗೆ. ಗಡ್ಡಾಫಿಗೆ ಹೆಂಗಸರ ಕಾರ್ಯದಕ್ಷತೆಯಲ್ಲಿ ಅಪಾರವಾದ ನಂಬಿಕೆ ಇತ್ತು. ಆ ಕಾರಣದಿಂದಲೇ ’ಅವನು ಮಹಿಳಾ ಅಂಗರಕ್ಷಕಿಯರನ್ನು ನೇಮಿಸಿಕೊಂಡು ತನ್ನ ವಿಶ್ವಾಸವನ್ನು ಜಗತ್ತಿಗೆ ಸಾರಿದ ಮೊಟ್ಟಮೊದಲ ಗಂಡಸು’ ಎಂದು ಉದಯ್ ದೃಢವಾದ ದನಿಯಲ್ಲಿ ಹೇಳುತ್ತಾರೆ. ಗಡ್ಡಾಫಿ ಅಂಗರಕ್ಷಕಿಯರ ಜೊತೆಗೆ ಉಕ್ರೇನಿಯನ್ ನರ್ಸ್ ಗಳನ್ನೂ ಸಹ ನೇಮಿಸಿಕೊಂಡಿರುತ್ತಾನೆ. ಆತನ ಅಂಗರಕ್ಷಕಿಯರು ಯಾವುದೇ ಮಾಡೆಲ್ ಗೆ ಕಡಿಮೆ ಇಲ್ಲದಂತೆ ಅಲಂಕಂರಿಸಿಕೊಂಡಿರುವುದನ್ನು ಅವರ ಹಲವಾರು ಚಿತ್ರಗಳು ತೋರಿಸುತ್ತವೆ. ಅದಕ್ಕೆ ಕಾರಣ ಗಡ್ಡಾಫಿಗೆ ಇದ್ದ ಸೌಂದರ್ಯೋಪಾಸನೆ ಎಂದು ಉದಯ್ ಸಮಜಾಯಿಶಿ ಕೊಡುತ್ತಾರೆ. ಮಹಿಳೆಯರು ಅಂತಹ ಜವಾಬ್ದಾರಿ ವಹಿಸಿರುವುದು ಅದೇ ಮೊದಲಲ್ಲ. ಒಂದು ಉದಾಹರಣೆ ಕೊಡಬಹುದಾದರೆ, ತಮಿಳಿನ ಈಳಂ. ಅಲ್ಲೂ ಮಹಿಳಾ ಸೈನಿಕರಿದ್ದಾರೆ, ಪುರುಷರೂ ಇದ್ದಾರೆ. ಆ ಸೈನ್ಯದಲ್ಲಿ ಕೆಲವರು ಹೆಂಗಸರಾಗಿರುವುದು ಕೇವಲ ಇನ್ಸಿಡೆಂಟಲ್. ಅಲ್ಲಿ ಅವರ ’ಹೆಣ್ತನ’ವನ್ನು ಉದ್ದೀಪಿಸುವ ಯಾವುದೇ ಅಲಂಕಾರ, ವಸ್ತ್ರ ಕಾಣಸಿಗುವುದಿಲ್ಲ. ಆದರೆ ಗಡ್ಡಾಫಿಯ ಅಂಗರಕ್ಷಕ ಪಡೆ ಹಾಗಲ್ಲ. ಅಲ್ಲಿ ಕೇವಲ ಚಿಕ್ಕವಯಸ್ಸಿನ ಸುಮಾರು ೩೦೦-೪೦೦ ಸುಂದರಿಯರು ಇರುತ್ತಾರೆ. ಸೈನ್ಯದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಇದ್ದರೆ, ಅದು ಸಮಾನತೆ. ಆದರೆ ಹುಡುಕಿ ಹುಡುಕಿ ಆಕರ್ಷಕ ರೂಪಿನ ಹೆಣ್ಣುಮಕ್ಕಳನ್ನೇ ನೇಮಿಸಿಕೊಳ್ಳುವುದನ್ನು ನಾವು ಹಾಗೆ ಸರಳವಾಗಿ ನೋಡಲಾಗುವುದಿಲ್ಲ. ಜೊತೆಗೆ ಆತ ಅವರಿಗೆ ವಿಧಿಸಿರುವ ನಿಭಂದನೆಯಂತೂ ಕ್ರೌರ್ಯವೇ ಸರಿ. ಆತನ ಪಡೆಯಲ್ಲಿದ್ದ ಯಾವ ಹೆಣ್ಣುಮಗಳೂ ಸಹ ನಿವೃತ್ತಿಯವರೆಗೂ ಮದುವೆ ಆಗುವಂತಿಲ್ಲ. ಇದನ್ನು ಕೇವಲ ಶಿಸ್ತಿನ ಕಾರಣಕ್ಕೆ ಆತ ಮಾಡಿದ ಎಂದು ನಂಬುವುದು ಹೇಗೆ? ಅದು ಸರ್ವಾಧಿಕಾರಿಯೊಬ್ಬನ ವಿಲಾಸದಂತೆಯೇ ಕಾಣಿಸುತ್ತದೆ. ಅಲ್ಲದೆ ಅಷ್ಟು ’ಸೌಂದರ್ಯೋಪಾಸಕ’ನಾಗಿದ್ದ ಗಡ್ಡಾಫಿ ತನ್ನ ನರ್ಸುಗಳು ಮಾತ್ರ ಯಾವುದೇ ಅಲಂಕಾರ ಮಾಡಿಕೊಳ್ಳಬಾರದು, ಸೇವೆಯೊಂದೇ ಅವರ ಬದುಕಿನ ಗುರಿಯಾಗಿರಬೇಕು ಎಂದು ಶಾಸಿಸಿರುತ್ತಾನೆ. ಜೊತೆಗೆ, ತನ್ನ ಜೊತೆ ವಿದೇಶಯಾತ್ರೆಗೆ ಬರುವ ಅಂಗರಕ್ಷಕಿಗೆ ಆತ ಕೊಡುತ್ತಿದ್ದ ಎನ್ನಲಾಗುವ ಬಂಗಾರದ ವಾಚು ಸಹ ಬೇರೇನನ್ನೋ ಸೂಚಿಸುತ್ತದೆ.
ನನ್ನ ಇನ್ನೊಂದು ತಕರಾರಿರುವುದು ಉದಯ್ ಅವರು ’ಮೊರೆಟ್ಯಾನಿಯನ್ ಸುಂದರಿ’ಯರ ವಿಷಯವನ್ನು ಕಟ್ಟಿಕೊಡುವ ರೀತಿಗೆ. ಅವರು ಹೇಗೆ ಎಲ್ಲರ ಮನಸ್ಸೆಳೆಯುತ್ತಿದ್ದರು, ಹೇಗೆ ಎಷ್ಟೋ ಜನ ಅವರ ಸಂಗ ಬಯಸಿ ಹೋಗುತ್ತಿದ್ದರು ಎಂದು ಅವರೇ ಬರೆಯುತ್ತಾರೆ. ಮದುವೆ ಆಗಿದ್ದರೂ, ಆ ಹುಡುಗಿಯರ ಸಂಗ ಬಯಸಿ ಹೋಗುವ ಗಂಡಸರ ಬಗ್ಗೆ ಏನೂ ಬರೆಯದೆ ಅವರು, ಆ ಹುಡುಗಿಯರನ್ನು ಮಾತ್ರ ವೇಶ್ಯೆಯರಂತೆ ಚಿತ್ರಿಸುವುದು ತಪ್ಪಾಗುತ್ತದೆ. ಅವರನ್ನು ನಮ್ಮ ನೆಲದ ಹೌದು-ಇಲ್ಲಗಳ ಕಣ್ಣುಗಳಿಂದ ನೋಡುವುದು ಸರಿ ಅನ್ನಿಸುವುದಿಲ್ಲ. ಅವರ ಬದುಕಿನ ರೀತಿಯಲ್ಲಿ ಪುರುಷರೊಡನೆ ಸ್ನೇಹ, ಮನಸ್ಸು ಮೆಚ್ಚಿದರೆ ಒಡನಾಟ ತೀರಾ ಸಹಜವೇ ಇರಬಹುದು. ಮದುವೆಯಾಚೆಗಿನ ಒಂದು ಸಂಬಂಧಕ್ಕೆ ಅವರು ಕೈಚಾಚಿದರು ಎಂದಾಕ್ಷಣ ಅವರನ್ನು ವೇಶ್ಯೆಯರು ಎಂದು ಬರೆಯುವುದು ಯಾಕೋ ಸರಿ ಅನ್ನಿಸುವುದಿಲ್ಲ. ಸಂಸಾರವನ್ನು ತಮ್ಮ ದೇಶಗಳಲ್ಲಿ ಬಿಟ್ಟುಹೋಗುವ ಗಂಡಸರ ಒಂಟಿತನದ ಬಗ್ಗೆ ಅಷ್ಟು ಆರ್ದ್ರವಾಗಿ ಬರೆಯುವಾಗ ಅಲ್ಲಿರುವ ಹೆಣ್ಣುಗಳನ್ನೂ ಅದೇ ಒಂಟಿತನ ಕಾಡಿರಬಹುದು ಎಂದು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ ಬೇಕಾಗುತ್ತದೆ. ಇನ್ನೊಂದು ವಿಷಯ ಲಿಬಿಯಾದ ಹುಡುಗಿಯರ ಬಗ್ಗೆ ಮಾತನಾಡುತ್ತಾ ಅವರು, ಆ ಹೆಣ್ಣುಮಕ್ಕಳು ಕಪ್ಪು ಮೈಬಣ್ಣದವರು, ಆದ್ದರಿಂದ ಅವರು ಆಕರ್ಷಕರಾಗಿಲ್ಲ ಎಂದು ಬರೆಯುತ್ತಾರೆ. ಭಾರತೀಯರ ಸೌಂದರ್ಯ ಪ್ರಜ್ಞೆ ಮತ್ತು ಮೈಬಣ್ಣದ ಮೇಲಿನ ಭಾರತೀಯರ ಪೂರ್ವಾಗ್ರಹಗಳ ಬಗ್ಗೆ ಲೋಹಿಯಾರವರು ಬರೆದ ದಿನದಿಂದ ಈ ಘಳಿಗೆಯವರೆಗೆ ಸಾಕಷ್ಟು ಚರ್ಚೆಗಳಾಗಿವೆ, ಆಗುತ್ತಲಿವೆ. ಅವು ಚೆಲ್ಲಿದ ಬೆಳಕಿನಲ್ಲಿ ನಾವು ನಮ್ಮ ಹಲವಾರು ಪೂರ್ವಾಗ್ರಹಗಳನ್ನು ಕಳಚಿಟ್ಟಿದ್ದೇವೆ. ಆದರೆ ಈಗಲೂ ಅದನ್ನೊಂದು ವಿಷಯ ಎನ್ನುವಂತೆ ಮಾತನಾಡುವುದು, ಬರೆಯುವುದು ಕಳವಳ ಹುಟ್ಟಿಸುತ್ತದೆ. ಆ ಭಾವನೆ ಇನ್ನೂ ಕೆಲವರ ಮನಸ್ಸಿನಲ್ಲಿ ಇರಬಹುದು, ಅದನ್ನು ನಾನು ನಿರಾಕರಿಸುವುದಿಲ್ಲ, ಆದರೆ ಲೇಖಕರೊಬ್ಬರು ಅದನ್ನು ಬರೆದಾಗ ಅದಕ್ಕೊಂದು ಶಾಶ್ವತ ಹಾಗು ಸಾರ್ವತ್ರಿಕ ಗುಣ ಬಂದುಬಿಡುತ್ತದೆ. ಅದನ್ನು ನಾವು ಎಚ್ಚರದಿಂದ ಗಮನಿಸಬೇಕು. ಬರೆಯುವವರಾಗಿ ಅದು ನಮ್ಮ ಜವಾಬ್ದಾರಿ ಸಹ. ನಾನು ಮೊದಲೇ ಹೇಳಿದ ಹಾಗೆ ಇವು ನನ್ನ ತಕರಾರುಗಳು, ಇವನ್ನು ಹೊರತು ಪಡಿಸಿಯೂ ಪುಸ್ತಕ ಹಲವಾರು ಚಾರಿತ್ರಿಕ ಕಾರಣಗಳಿಂದ ಮುಖ್ಯವಾಗುವ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಗಡ್ಡಾಫಿಯ ಬಗ್ಗೆ, ಲಿಬಿಯಾದಲ್ಲಾದ ಬದಲಾವಣೆಗಳ ಬಗ್ಗೆ ಬರೆದ ನಂತರ ಉದಯ್ ಅಲ್ಲಿನ ಬದುಕಿನ ಬಗ್ಗೆ ಬರೆಯುತ್ತಾರೆ. ಗೊತ್ತಿಲ್ಲದ ಊರಿನಲ್ಲಿ, ಗುರುತಿಲ್ಲದ ಅಪರಿಚಿತರು ಅಕಾರಣವಾಗಿ ತೋರಿಸುವ ಪ್ರೀತಿಯಲ್ಲಿ ಪುಸ್ತಕ ಮತ್ತಷ್ಟು ಆರ್ದ್ರವಾಗುತ್ತದೆ. ಆ ಮಟ್ಟಿಗೆ ಪುಸ್ತಕ ಒಂದು ಇತಿಹಾಸದ ದಾಖಲೆಯೂ ಹೌದು, ಪ್ರವಾಸ ಕಥನವೂ ಹೌದು, ’ಲಿಬಿಯಾ ಡೈರಿ’ ಇದಕ್ಕೆ ಸಾರ್ಥಕ ಹೆಸರು. ಇದರ ಹೊರತಾಗಿಯೂ ಲಿಬಿಯಾದ ಬಗ್ಗೆ ಅವರು ಬೆಳಕು ಚೆಲ್ಲುವ ಹಲವಾರು ಸಂಗತಿಗಳಿವೆ. ಆ ಎಲ್ಲಾ ಕಾರಣಗಳಿಂದಾಗಿ ಈ ಪುಸ್ತಕ ಮಹತ್ವ ಪಡೆಯುತ್ತದೆ.
ಉದಯ್ ಇಟಗಿಯವರು ಕತೆ, ಕವನ, ಪ್ರವಾಸ, ಅನುಭವ ಕಥನ ಎಲ್ಲದರಲ್ಲಿಯೂ ಆಸಕ್ತಿ, ಅಭಿರುಚಿ ಇಟ್ಟುಕೊಂಡವರು. ಈ ಪುಸ್ತಕ ಅವರ ಮತ್ತಷ್ಟು ಪುಸ್ತಕಗಳಿಗೆ ದಾರಿಯಾಗಲಿ ಎಂದು ಹಾರೈಸುತ್ತಾ, ಅವರನ್ನು ಅಭಿನಂದಿಸುತ್ತಾ ಈ ಬರಹವನ್ನು ಮುಗಿಸುತ್ತೇನೆ.
- ಸಂಧ್ಯಾರಾಣಿ
ಕೃಪೆ : ಬಿಸಿಲ ಹನಿ, (2018 ನವೆಂಬರ್ 01)
......................................................................................................................................
“ಲಿಬಿಯಾ ಡೈರಿ” ಒಂದು ಆಂತರಿಕ ಸತ್ಯ ಶೋಧದ ಪ್ರಯತ್ನ
ಹಾಗೆ ನೋಡಿದರೆ ಉದಯ್ ಇಟಗಿ ಅವರ ವೈಯಕ್ತಿಕ ಪರಿಚಯ ಅಷ್ಟಾಗಿ ಇಲ್ಲವೇ ಇಲ್ಲವೆನ್ನಬಹುದು. ಉದ್ಯೋಗದ ನಿಮಿತ್ತ ಲಿಬಿಯಾಗೆ ಹೋದವರು ಲಿಬಿಯಾ ಕುರಿತು ‘ಅವಧಿ’ಯಲ್ಲಿ ಅಂಕಣ ಶುರು ಮಾಡಿದಾಗಲೇ ಅವರ ಪರಿಚಯವಾಗಿದ್ದು, ಅದೂ ಲೇಖನಗಳ ಮೂಲಕ. ಅಂಕಣ ಮೆಚ್ಚಿ ಒಂದೆರಡು ಸಲ ಪ್ರತಿಕ್ರಿಯಿಸಿದ್ದೆನೆಂದು ನೆನಪು.
ಆದರೆ ಅವರ ಅಂಕಣ ಪುಸ್ತಕ ರೂಪ ತಾಳಿ, ಬಿಡುಗಡೆಗೆ ನೀವೇ ಬಂದು ಮಾತನಾಡಬೇಕೆಂದಾಗ ಒಂದು ಕ್ಷಣ ಗಾಬರಿಯಾಗಿದ್ದು ನಿಜ. ಏಕೆಂದರೆ ಹೊರ ಜಗತ್ತಿನಲ್ಲಿ ಅಷ್ಟಾಗಿ ಬಿಂಬಿಸಿಕೊಳ್ಳದ ಲಿಬಿಯಾ ಬಗ್ಗೆ ಅಂತಹ ಮಾಹಿತಿ ನನ್ನ ಬಳಿಯಿರಲಿಲ್ಲ. ‘ನನ್ನ ಪುಸ್ತಕದಲ್ಲೇ ಸಾಕಷ್ಟು ಮಾಹಿತಿಯಿದೆ. ನೀವು ಬಂದು ನಿಮ್ಮ ಅಭಿಪ್ರಾಯ ಹಂಚಿಕೊಂಡರೆ ಸಾಕು.’ ಎಂದು ಉದಯ್ ಇಟಗಿಯವರು ಹೇಳಿದಾಗ ಅಭಿಪ್ರಾಯಕ್ಕೆ ಮುಕ್ತ ಅವಕಾಶವಿದ್ದುದರಿಂದ ಮತ್ತು ಪುಸ್ತಕ ಕುರಿತು ಸಹಜ ಕುತೂಹಲವಿದ್ದುದರಿಂದ ಸಂತೋಷದಿಂದ ಈ ಕಾರ್ಯಕ್ರಮಕ್ಕೆ ಒಪ್ಪಿಕೊಂಡೆ.
‘ಲಿಬಿಯಾ ಡೈರಿ’ ಓದುತ್ತಾ, ಓದುತ್ತಾ ಹಲವು ವಿಷಯಗಳು ಸ್ಪಷ್ಟವಾಗುತ್ತಾ ಹೋಯಿತು. ಏಕೆಂದರೆ ನಾವೆಲ್ಲರೂ ಬಾಹ್ಯರೂಪದಲ್ಲಿ ಬಹಳ ಸುಲಭವಾಗಿ ಸಿಗುವ ಒಂದು ಸತ್ಯವನ್ನು ನಂಬಿಕೊಂಡಿರುತ್ತೇವೆ. ಇವತ್ತು ಭಾರತೀಯರನ್ನೂ ಸೇರಿಸಿ, ಪ್ರಪಂಚದಾದ್ಯಂತ ಎಲ್ಲರೂ ಅಮೆರಿಕಾದ ಕಣ್ಣಿನಿಂದ ಜಗತ್ತನ್ನು ನೋಡುತ್ತಿರುತ್ತೇವೆ. ಅಮೆರಿಕಾ ತೋರಿದಷ್ಟೇ ‘ಪರಮ ಸತ್ಯ’ ಎಂದು ನಂಬಿ, ನಮ್ಮ ಬರಿಗಣ್ಣಿಗೆ ಕಂಡದಷ್ಟೇ ‘ನಿಜ’ ಎಂದು ಗಾಢವಾಗಿ ಒಪ್ಪಿಕೊಂಡು ಬಿಟ್ಟಿರುತ್ತೇವೆ. ಆದರೆ ಇದೊಂದು ಬಹಿರಂಗ ಸತ್ಯವಷ್ಟೇ.
ಆದರೆ ಪ್ರತಿ ರಾಷ್ಟ್ರಕ್ಕೂ ತನ್ನದೇಯಾದ ಮತ್ತೊಂದು ಸತ್ಯವಿರುತ್ತೆ. ಅದೇ ಆ ಆ ರಾಷ್ಟ್ರಗಳ ಆಂತರೀಕ ಸತ್ಯ. ಇವನ್ನು ನಾವು ನಮ್ಮ ‘ಒಳಗಣ್ಣು’ ತೆರೆದು ನೋಡಬೇಕಾಗುತ್ತೆ. ಇದರ ಜೊತೆಗೆ ನಮ್ಮದಲ್ಲದ ಯಾವುದೋ ದೂರದ ದೇಶಗಳ ಬಗ್ಗೆ ಬರೆಯಬೇಕಾದರೆ ಬಾಹ್ಯ ಜಗತ್ತು ನಂಬಿದ ಬಹಿರಂಗ ಸತ್ಯ ಹಾಗೂ ಈ ಆಂತರೀಕ ಸತ್ಯದ ನಡುವೆ ಮತ್ತೊಂದು ‘ಸತ್ಯ’ವಿರುತ್ತೆ. ಅದನ್ನು ಬರಹಗಾರರಾಗಿ ನಾವು ಹುಡುಕಬೇಕಾಗುತ್ತೆ. ಉದಯ್ ಇಟಗಿಯವರು ಆ ರೀತಿಯ ಒಂದು ‘ಸತ್ಯ’ದ ಶೋಧವನ್ನು ತಮ್ಮ ‘ಲಿಬಿಯಾ ಡೈರಿಯಲ್ಲಿ ಮಾಡಿದ್ದಾರೆ.
ಸುಮಾರು ಆರು ವರುಷಗಳ ಕಾಲ ಲಿಬಿಯಾದಲ್ಲಿದ್ದು, ಗಡಾಫಿ ಕಾಲದ ಲಿಬಿಯಾ ಮತ್ತು ಗಡಾಫಿ ನಂತರದ ಲಿಬಿಯಾ ಕಂಡಿರುವುದರಿಂದ ತಮ್ಮಲ್ಲೇ ಎದ್ದ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ಇಲ್ಲಿ ಮಾಡಿದ್ದಾರೆ. ಅಮೆರಿಕಾ ಬಿಂಬಿಸಿದ ಬಹಿರಂಗ ಸತ್ಯವನ್ನು ಸಂಪೂರ್ಣ ಅಲ್ಲೆಗೆಳೆಯದೇ, ಲಿಬಿಯಾ ಜನಜೀವನದೊಡನೆ ಒಡನಾಡಿ ಸಂಗ್ರಹಿಸಿದ ಆಂತರೀಕ ಸತ್ಯವನ್ನೂ ಸಂಪೂರ್ಣ ನಂಬದೇ, ತಮ್ಮ ಒಳಗಣ್ಣಿಗೆ ಕಂಡ ಲಿಬಿಯಾವನ್ನು ಪ್ರಾಮಾಣಿಕವಾಗಿ ಚಿತ್ರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದ್ದರಿಂದ ಇಡೀ ಪುಸ್ತಕದಲ್ಲಿ ಯಾವ ಉತ್ಪ್ರೇಕ್ಷಿತ ಭಾಷೆಯಾಗಲೀ, ಕಪೋಲ ಕಲ್ಪಿತ ವಿಷಯಗಳಾಗಲೀ, ಅತೀ ಭಾವುಕತೆಯ ನಿರೂಪಣೆಯಾಗಲೀ ಇಲ್ಲ. ಅತ್ಯಂತ ಸಮತೋಲನದಿಂದ ಪ್ರತಿ ವಿಷಯವನ್ನೂ ಅವಲೋಕಿಸಿ, ಪರಾಮರ್ಶಿಸುತ್ತಾ ನಿಧಾನವಾಗಿ ಬರೆದಿರುವುದರಿಂದ ಮೊಹಮ್ಮದ್ ಗಡಾಫಿ ಮೇಲೆ ಕನ್ನಡದಲ್ಲಿ ಬಂದಂತಹ ಅತ್ಯಂತ ವಸ್ತನಿಷ್ಠವುಳ್ಳ ಅಪರೂಪದ ಪುಸ್ತಕವಾಗಿರುವುದರಿಂದ ಇದಕ್ಕೊಂದು ‘ಅಥೆಂಟಿಸಿಟಿ’ ಬಂದಿದೆ.
ಈ ಪುಸ್ತಕವನ್ನು ಸ್ಥೂಲವಾಗಿ ಎರಡು ಭಾಗ ಮಾಡಿಕೊಂಡು ನೋಡಬಹುದು. ಒಂದು ಕಡೆ ಗಡಾಫಿಯ ವ್ಯಕ್ತಿ ಚಿತ್ರಣ ನೀಡುತ್ತಲೇ ಲಿಬಿಯಾದ ಜನಸಾಮಾನ್ಯರ ಸಾಮಾಜಿಕ ಬದುಕನ್ನೂ ದಾಖಲಿಸುತ್ತಾ ಹೋಗುತ್ತದೆ. ಕೇವಲ ವ್ಯಕ್ತಿ ಚಿತ್ರಣಕ್ಕೇ ಉದಯ್ ಅವರ ಆಸಕ್ತಿ ಸೀಮಿತವಾಗಿಲ್ಲವೆಂಬುದೆ ವಿಶೇಷ. ಏಕೆಂದರೆ ಸಾಮಾನ್ಯವಾಗಿ ವ್ಯಕ್ತಿ ಚಿತ್ರಣವಿರುವ ಕೃತಿಗಳಲ್ಲಿ ಒಂದು ಅಪಾಯವಿರುತ್ತದೆ. ಕೆಲವೊಮ್ಮೆ ವ್ಯಕ್ತಿಯ ಆತ್ಮ ಚರಿತ್ರೆಯನ್ನು ಬರೆಯುವ ಪ್ರಕ್ರಿಯೆಯಲ್ಲಿ, ವ್ಯಕ್ತಿಯನ್ನು ಆವಾಹಿಸಿಕೊಳ್ಳುತ್ತಾ ಬರವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ, ಅವರ ದುರ್ಗುಣಗಳನ್ನೂ ಸದ್ಗುಣವಾಗಿ ಹೇಳುವಷ್ಟು ಪರವಶವಾಗಿ ಬಿಟ್ಟಿರುತ್ತೇವೆ. ಆದರೆ ಉದಯ್ ಇಟಗಿಯವರು ಕಟ್ಟೆಚ್ಚರದಿಂದಲೇ ಮೊಹಮ್ಮದ್ ಗಡಾಫಿಯ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಪ್ರಪಂಚದ ಬಹು ದೊಡ್ಡ ಖಳನಾಯಕ, ವಿಲನ್‍ಯೆಂದು ಅಮೆರಿಕಾ ಚಿತ್ರಿಸಿದ ಚಿತ್ರವನ್ನು ಒಡೆದು ಹಲವು ದ್ವಂದ್ವಗಳ, ಹಲವು ವೈಚಿತ್ರಗಳ ಸಮ್ಮಿಶ್ರಣದಲ್ಲಿ ಅದ್ದಿ ಎತ್ತಿದಂತಹ ಗಡಾಫಿಯ ವಿಕ್ಷಿಪ್ತ ವ್ಯಕ್ತಿತ್ವದ ಒಳ ಪ್ರವೇಶಿಸಿ ಅವನ ಮಾನವೀಯ ಮುಖದ ಆವರಣ ಮಾಡಿದ್ದಾರೆ.
ಈ ಗಡಾಫಿ ಎಂದರೆ ಯಾರು?
ಹಾಗೆ ನೋಡಿದರೆ ಮೊಹಮ್ಮದ್ ಗಡಾಫಿ ಬಗ್ಗೆ ಈ ಪ್ರಪಂಚ ಏನೇನು ಹೇಳುತ್ತಿದೆಯೋ ಅವೆಲ್ಲವೂ ನಿಜ. ಆದರೆ ಅವಷ್ಟೇ ಅಲ್ಲ.
ಅವನೊಬ್ಬ ಬಹು ದೊಡ್ಡ ಕ್ರೂರ ಸರ್ವಾಧಿಕಾರಿ, ಆದರೆ ಅಷ್ಟೇ ತಿಕ್ಕಲು ಮನುಷ್ಯ; ಅವನೊಬ್ಬ ಬಹು ದೊಡ್ಡ ಚಾಣಾಕ್ಷ, ಆದರೆ ಅಷ್ಟೇ ಹುಂಬ; ಅವನೊಬ್ಬ ಬಹು ದೊಡ್ಡ ಮುತ್ಸುದ್ಧಿ, ಆದರೆ ಅಷ್ಟೇ ಆದ್ರ್ರ ಭಾವನೆಯುಳ್ಳ ಮಾನವಂತ; ಜಗತ್ತಿನ ಭೂಪಟದಲ್ಲಿ ಹೇಳ ಹೆಸರಿಲ್ಲದಂತೆ ಒಂದು ಸಣ್ಣ ಚುಕ್ಕೆಯಾಗಿ ಮಕಾಡೆ ಮಲಗಿದ್ದ ಲಿಬಿಯಾ ಎಂಬ ದೇಶವನ್ನು ಜಗತ್ತೇ ಬೆರಗಾಗಿ ನೋಡುವಂತೆ ಎತ್ತಿ ಕಟ್ಟಿ ಉತ್ತುಂಗದಲ್ಲಿ ನಿಲ್ಲಿಸಿದ ಗಟ್ಟಿವಂತ; ಆದರೆ ತನ್ನ ಜನರಿಂದಲೇ ಅತ್ಯಂತ ಹೀನಾಯವಾಗಿ ಗತಿಯಿಲ್ಲದವನಂತೆ ರಸ್ತೆಯಲ್ಲಿ ಅನಾಥವಾಗಿ ಕೊಲ್ಲಲ್ಪಟ್ಟ ಹತಭಾಗ್ಯ!
ಇವು ಬಹಿರಂಗ ಸತ್ಯವೂ ಹೌದು, ಆಂತರೀಕ ಸತ್ಯವೂ ಹೌದು.
ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ ಗಡಾಫಿಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಅವನೊಬ್ಬ ಸರ್ವಾಧಿಕಾರಿಯಾಗಿಯೂ ಉತ್ತಮ ಜನನಾಯಕನಾಗಿದ್ದನೆಂಬುದಕ್ಕೆ ಪುರಾವೆ ಎಲ್ಲಿದೆ? ಅವನು ಹೇಗೆ ಲಿಬಿಯಾವನ್ನು ಒಂದು ಸುಭೀಕ್ಷ, ಸಧೃಡ ದೇಶವಾಗಿ ಕಟ್ಟಿದ? ಇಂತಹ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳುವುದು ಸಹಜ. ಇವೆಲ್ಲವೂ ಅರ್ಥವಾಗಬೇಕಾದರೆ ಲಿಬಿಯಾ ದೇಶದ ಚಾರಿತ್ರಿಕ ಹಿನ್ನಲೆಯನ್ನು ಸ್ವಲ್ಪ ಮಟ್ಟಿಗಾದರೂ ಶೋಧಿಸಲೇಬೇಕಾಗುತ್ತೆ.
ಪ್ರಾಯಶಃ ಎಲ್ಲರಿಗೂ ಗೊತ್ತಿದ್ದ ಹಾಗೆ ಲಿಬಿಯಾ ಇಟಲಿಯ ವಸಾಹತು ಆಗಿತ್ತು. ಎರಡನೇ ಮಹಾ ಯುದ್ಧದ ನಂತರ ತನ್ನದೇ ಆಂತರೀಕ ಸಮಸ್ಯೆಗಳಿಗೆ ಗುರಿಯಾದ ಇಟಲಿ, ಲಿಬಿಯಾ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸಿತು. 1951ರಲ್ಲಿ ಸ್ವತಂತ್ರ ರಾಷ್ಟ್ರವಾದ ಲಿಬಿಯಾ ಇದ್ರಿಸ್ ಎಂಬ ರಾಜನ ಆಳ್ವಿಕೆಗೆ ಒಳಪಟ್ಟಿರುತ್ತೆ. 1969ರಲ್ಲಿ ರಾಜ ಇದ್ರಿಸ್‍ನನ್ನು ಕೆಳಗಿಳಿಸಿ, ಮೊಹಮ್ಮದ್ ಗಡಾಫಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಅವನಿಗೆ ಕೇವಲ ಇಪ್ಪತ್ತೇಳು ವರುಷ!
ಲಿಬಿಯಾದಲ್ಲಿ ಅಪಾರವಾದ ನೈಸರ್ಗಿಗ ಸಂಪತ್ತೂ, ತೈಲ ನಿಕ್ಷೇಪಗಳಿದ್ದರೂ ಅವೆಲ್ಲಾ ಅಮೆರಿಕಾ ಮತ್ತಿತರ ಬಲಾಢ್ಯ ರಾಷ್ಟ್ರಗಳ ಅಧಿಪತ್ಯದಲ್ಲೇ ಇರುತ್ತಿತ್ತಾದ್ದರಿಂದ ಲಿಬಿಯಾದ ಜನತೆ ಕಡು ಬಡತನದಲ್ಲೇ ಬದುಕುತ್ತಿರುತ್ತಾರೆ. ಗಡಾಫಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೇ ಮಾಡಿದ ಮೊದಲ ಕೆಲಸ, ತನ್ನ ದೇಶದ ತೈಲ ನಿಕ್ಷೇಪವನ್ನು ಕೊಳ್ಳೆ ಹೊಡೆಯುತ್ತಿದ್ದ ಅಮೆರಿಕಾದ ಕೈ ಕೆಳಗಿದ್ದ ಕಂಪನಿಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ. ತೈಲ ದರವನ್ನು ಮರು ಪರಿಶೀಲಿಸಿ ನಿಗದಿತ ಬೆಲೆಯನ್ನು ನಿರ್ಧರಿಸುತ್ತಾನೆ. ಜೊತೆಗೆ, ತನ್ನ ನೆಲೆಯಲ್ಲಿ ತಳವೂರಿದ್ದ ಅಮೆರಿಕಾ ಮಿಲಿಟರಿ ಪಡೆಯನ್ನು ದೇಶದಿಂದ ಹೊರಗಟ್ಟುತ್ತಾನೆ.
ಇದು ಸಹಜವಾಗಿಯೇ ಅಮೆರಿಕಾದವರನ್ನು ರೊಚ್ಚಿಗೆಬ್ಬಿಸುತ್ತದೆ. ಆಗ ಅಮೆರಿಕಾ ಲಿಬಿಯಾ ಮೇಲೆ ಆರ್ಥಿಕ ದಿಗ್ಭಂಧನ, ರಾಜಕೀಯ ಒತ್ತಡ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಸಲ್ಲದ ಆರೋಪ ಹೇರುತ್ತಾ ಬರುತ್ತೆ.
ಇಷ್ಟೆಲ್ಲಾ ಬಿಕ್ಕಟ್ಟಿನ ನಡುವೆಯೂ ಗಡಾಫಿ ತನ್ನ ಚಾಣಾಕ್ಷತನದಿಂದ ಅಮೆರಿಕಾದಂತಹ ಅಮೆರಿಕಾವನ್ನೇ ಎದುರಿಸಿ, ಅದಕ್ಕೆ ಸೆಡ್ಡು ಹೊಡೆದು ನಿಲ್ಲುವಷ್ಟು ಬೆಳೆದು ನಿಂತಿದ್ದನ್ನು ಈ ಪುಸ್ತಕ ಹಂತ ಹಂತವಾಗಿ ವಿವರಿಸುತ್ತಾ ಹೋಗುತ್ತದೆ. ಜೊತೆಗೆ ಹಲವು ಅಚ್ಚರಿಯ ಸಂಗತಿಗಳನ್ನೂ ಈ ಪುಸ್ತಕ ನಮಗೆ ನೀಡುತ್ತಾ ಹೋಗುತ್ತದೆ.
ತನ್ನ ಜನತೆಯ ವಿಶ್ವಾಸ ಗಿಟ್ಟಿಸಿಕೊಳ್ಳದಿದ್ದರೆ, ಒಬ್ಬ ಜನ ನಾಯಕನಾಗಿ ತಾನು ಬಹು ಕಾಲ ಉಳಿಯಲು ಸಾಧ್ಯವಿಲ್ಲವೆಂಬ ಸತ್ಯ ಗಡಾಫಿಗೆ ಗೊತ್ತಿತ್ತು. ಇಡೀ ಜಗತ್ತೇ ಒಪ್ಪಿಕೊಂಡಂತಹ ಅಮೆರಿಕಾದಂತಹ ಬಹು ದೊಡ್ಡ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವುದು ಸುಲಭದ ಕೆಲಸವಲ್ಲವೆಂಬ ಅರಿವೂ ಅವನಿಗಿತ್ತು. ತನ್ನ ಅಕ್ಕಪಕ್ಕದ ನೆರೆ ರಾಷ್ಟ್ರಗಳೊಡನೆ ಸೌಹಾರ್ದಯುತ ಸಂಬಂಧವಿಟ್ಟುಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಾಗಲೇ ಅಮೆರಿಕಾದಂತಹ ಬಲಾಢ್ಯ ರಾಷ್ಟ್ರವನ್ನು ಲಿಬಿಯಾದಂತಹ ಗುಬ್ಬಚ್ಚಿ ದೇಶ ಎದುರಿಸಲು ಸಾಧ್ಯವೆಂಬ ರಾಜ ತಾಂತ್ರಿಕ ಜ್ಞಾನವೂ ಅವನಿಗಿತ್ತು. ಅದ್ದರಿಂದ ಆಫ್ರಿಕಾದ ಬೇರೆ ಯಾವುದೇ ದೇಶದ ಆಂತರೀಕ ಕಲಹವಿರಬಹುದು, ರಾಜಕೀಯ ಬಿಕ್ಕಟ್ಟಿರಬಹುದು, ತನ್ನ ಮಿಲಿಟರಿ ಪಡೆಗಳೊಂದಿಗೆ ನೇರ ಧುಮುಕಿ ಹೇರಳ ಆರ್ಥಿಕ ಸಹಾಯ ನೀಡುವುದರೊಂದಿಗೆ ನೆರೆ ರಾಷ್ಟ್ರಗಳ ವಿಶ್ವಾಸ ಗಿಟ್ಟಿಸಿಕೊಂಡಿದ್ದ. ಮುಸ್ಲಿಂ ರಾಷ್ಟ್ರಗಳೆಲ್ಲಾ ಒಂದುಗೂಡಬೇಕೆಂದು ಹಿಂದೆ ಮುಂದೆ ನೋಡದೇ ಮುಸ್ಲಿಂ ದೇಶಗಳ ನೆರವಿಗೆ ಮುನ್ನುಗ್ಗಿ ಹೋಗುತ್ತಿದ್ದ. ಇಡೀ ಆಫ್ರಿಕಾ ಖಂಡ ಒಗ್ಗೂಡಿ ಜಗತ್ತಿಗೇ ಮಾದರಿಯಾಗುವಂತಹ ಅಖಂಡ ಬಲಿಷ್ಠ ಶಕ್ತಿಯಾಗಬೇಕೆನ್ನುವ ಮಹತ್ವಾಕಾಂಕ್ಷೆ ಅವನದು. ಹಾಗಾಗಿ, ಆರ್ಥಿಕವಾಗಿ ಲಿಬಿಯಾ ಸಾಕಷ್ಟು ಸಧೃಡ ಹಾಗೂ ಸುಭೀಕ್ಷ ದೇಶವೆಂದು ನೆರೆ ರಾಷ್ಟ್ರಗಳೊಡನೆ ಬಿಂಬಿಸಿಕೊಳ್ಳುವ ಅಗತ್ಯವೂ ಅವನಿಗಿತ್ತು.
ಒಂದು ದೇಶ ಸುಭದ್ರ ದೇಶವಾಗಬೇಕಾದರೆ, ಅದು ಮೊದಲು ಆಂತರೀಕವಾಗಿ ಗಟ್ಟಿ ದೇಶವಾಗಿರಬೇಕೆನ್ನುವ ಸತ್ಯವೂ ಗಡಾಫಿಗೆ ಗೊತ್ತಿತ್ತು. ಆದ್ದರಿಂದ ಹತ್ತು ಹಲವು ಜನ ಪರವಾದ, ಸಮಾಜ ಪರವಾದ ಅನೇಕ ಬದಲಾವಣೆಗಳನ್ನು ಗಡಾಫಿ ತನ್ನ ದೇಶದಲ್ಲಿ ತರುತ್ತಾ ಹೋಗುತ್ತಾನೆ. ಆigಟಿiಣಥಿ oಜಿ ಟಚಿbouಡಿ ಇರಬಹುದು, ಯಾರೂ ಯಾರ ಗುಲಾಮರಲ್ಲ, ಕಾನೂನುರೀತ್ಯ ಎಲ್ಲರೂ ಸಮಾನರು ಎಂಬುದು ಕೇವಲ ಹೇಳಿಕೆಯಾಗಿ ಉಳಿಯದೇ ಅಕ್ಷರಶಃ ಲಿಬಿಯಾದ ದಿನನಿತ್ಯ ಬದುಕಿನಲ್ಲಿ ಎಲ್ಲರೂ ಪಾಲಿಸುತ್ತಿದ್ದರೆನ್ನವುದು ಓದಿದಾಗ ಅಚ್ಚರಿಯಾಗದೇ ಇರದು. ಉಚಿತ ವಿದ್ಯಾಭ್ಯಾಸ, ಉಚಿತ ಆಸ್ವತ್ರೆಗಳ ಸೌಕರ್ಯ, ಯವಕರು ದೇಶ ಬಿಟ್ಟು ಹೋಗದಂತೆ ಸರಿಯಾದ ಕೆಲಸ ಸಿಗುವವರೆಗೂ ಸಹಾಯ ಧನ, ಮದುವೆಯಾದ ದಂಪತಿಗಳಿಗೆ ಮನೆ ಕಟ್ಟಲು ಹಣದ ನೆರವು ಮತ್ತು ಮಹಿಳೆಯರಿಗಿರುವಂತಹ ಹಲವಾರು ಸೌಲಭ್ಯಗಳು - ಇಂತಹ ಅನೇಕಾನೇಕ ಸುಧಾರಣೆಗಳನ್ನು ಅವನು ಪರಿಚಯಿಸಿದನ್ನು ಪುಟ ಪುಟಗಳ ವಿವರಣೆಗಳೊಂದಿಗೆ ಓದುವಾಗ ಅಚ್ಚರಿ ಮೇಲೆ ಅಚ್ಚರಿಯಾಗದೇ ಇರದು. ಲಿಬಿಯಾದ ತಲಾದಾಯ ಜಗತ್ತಿನ ಮುಂದುವರಿದ ರಾಷ್ಟ್ರದೊಂದಿಗೆ ಸರಿದೂಗಿಸುವಂತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವ ಸಾಲಸೋಲವೂ ಇರಲಿಲ್ಲವೆಂದು ಲೇಖಕರು ಇಲ್ಲಿ ಬರೆಯುತ್ತಾರೆ. ಇಷ್ಟೆಲ್ಲಾ ಇದ್ದೂ ಒಂದು ಸಾಮ್ರಾಜ್ಯ ಪತನಗೊಂಡಿದ್ದು ಹೇಗೆ? ಪತನಗೊಂಡಿತ್ತಾದರೂ ಯಾಕೆ? ಬಹುಷಃ ಅವನು ಅನುಷ್ಠಾನಕ್ಕೆ ತಂದ ಅತ್ಯುನ್ನತ ಉದಾರವಾದಿ ಆಧುನಿಕ ವಿಚಾರಗಳೇ ಅವನಿಗೆ ಮುಳುವಾಯಿತೇ? ಅವನ ಮಹಾದೋದ್ದೇಶಗಳೇ ಅವನ ದೇಶದ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಕಾರಣವಾಗಿ ಅವನ ಹತ್ಯೆಗೆ ಪ್ರಚೋದಿಸುವಂತಾಯಿತೇ?
ಅದೇನೇ ಇರಲಿ, ಮೊಹಮ್ಮದ್ ಗಡಾಫಿಯನ್ನು ಒಬ್ಬ ಮಹಾನ್ ನಾಯಕನಾಗಿ ಚಿತ್ರಿಸಿರುವ ಇದೇ ಪುಸ್ತಕ ಒಂದು ದುರಂತ ಸಾವಿನಲ್ಲಿ ಅಂತ್ಯವಾಗಿ ಈಗ ಇತಿಹಾಸದ ಭಾಗವಾಗಿ ಹೋಗಿರುವ ಲಿಬಿಯಾದ ಗತ ವೈಭವವನ್ನು ದಾಖಲಿಸುವುದರೊಂದಿಗೇ ಪ್ರಸ್ತುತ ಬದುಕನ್ನೂ ತೆರೆದು ನಮ್ಮ ಮುಂದೆ ಇಡುತ್ತದೆ. ಹಾಗೆ ಪತನಗೊಂಡ ನಂತರದ ಲಿಬಿಯಾ ಎದುರಿಸಿದ ಆರ್ಥಿಕ ಮುಗ್ಗಟ್ಟುಗಳೇನು? ಉದಯ್ ಇಟಗಿಯವರು ಗಡಾಫಿಯ ನಂತರದ ಲಿಬಿಯಾವನ್ನೂ ಕಣ್ಣಾರೆ ಕಂಡಿರುವುದರಿಂದ ಆ ವಿವರ ಕೂಡಾ ಇಲ್ಲಿದೆ. ಮತ್ತು ಲೇಖಕರ ವೈಯಕ್ತಿಕ ಬದುಕು, ಉದ್ಯೋಗವರಸಿ, ಕುಟುಂಬವನ್ನು ತಾಯ್ನಾಡಿನಲ್ಲೇ ಬಿಟ್ಟು ಜಗತ್ತಿನ ಯಾವುದೋ ಮೂಲೆಯಲ್ಲಿ ಒಂಟಿಯಾಗಿ ನೆಲೆಸುವಾಗ ಕಾಡುವ ಒಂಟಿತನ, ಲಿಬಿಯಾದ ಬೌಗೋಳಿಕ ವಿವರಗಳೂ ಸವಿವರವಾಗಿ ಮೂಡಿ ಬಂದು ಗಡಾಫಿಯ ವ್ಯಕ್ತಿ ಚಿತ್ರಣದ ಜೊತೆಗೆ ಸಧ್ಯದ ಲಿಬಿಯಾ ಚಿತ್ರಣವನ್ನೂ ಕಣ್ಣಿಗೆ ಕಟ್ಟುವ ಹಾಗೆ ಕಟ್ಟಿಕೊಟ್ಟಿದ್ದಾರೆ.
ಇಂತಹ ಒಂದು ಅಪರೂಪದ ಪುಸ್ತಕ ಇವತ್ತು ಬಿಡುಗಡೆಗೊಳ್ಳುತ್ತಿದೆ. ಅತ್ಯಂತ ಸರಳ ಹಾಗೂ ಸಹಜ ನಿರೂಪಣೆಯಿರುವ ಈ ಪುಸ್ತಕ ಲಿಬಿಯಾದ ಇತಿಹಾಸವನ್ನು ಪ್ರತ್ಯಕ್ಷ ಕಂಡು ದಾಖಲಿಸಿದ್ದಾಗಿದೆ. ಕನ್ನಡಕ್ಕೆ ಇಂತಹ ಅಮೂಲ್ಯ ಕೊಡುಗೆ ಕೊಟ್ಟ ಉದಯ್ ಇಟಗಿ ಅವರನ್ನು ಮತ್ತೊಮ್ಮೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತಾ, ಅವರಿಂದ ಇನ್ನಷ್ಟು ಮತ್ತಷ್ಟು ಒಳ್ಳೆಯ ಕೃತಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.
- ಜಯಶ್ರೀ ಕಾಸರವಳ್ಳಿ, ಖ್ಯಾತ ಲೇಖಕಿ (ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಆಡಿದ ಮಾತುಗಳು)
...................................................................................
ಲಿಬಿಯಾ ಕುರಿತು ಹೊಸ ಒಳನೋಟ
ಜಗತ್ತನ್ನು ಆಳಿದ ಸರ್ವಾಧಿಕಾರಿಗಳಲ್ಲಿ ಹಿಟ್ಲರ್, ಮುಸ್ಸೊಲಿನಿಯ ಸಾಲಿಗೆ ಲಿಬಿಯಾದ ಮೊಹಮ್ಮದ್ ಗಢಾಫಿ ಕೂಡ ಸೇರುತ್ತಾನೆ. ಆದರೆ ಮೊಹಮ್ಮದ್ ಗಡಾಫಿಯ ಬಗೆಗೆ ಒಳ್ಳೆಯ ಮಾತುಗಳನ್ನು ಕೇಳಿದ್ದಕ್ಕಿಂತ ಅವನ ಅವಗುಣಗಳ ಕುರಿತು ಕೇಳಿದ್ದೆ ಹೆಚ್ಚು. ಇಂತಹದ್ದೊಂದು ಸಂದರ್ಭದಲ್ಲಿ ಉದಯ ಇಟಗಿಯವರು ಬರೆದ ಲಿಬಿಯಾ ಡೈರಿ ಹೆಚ್ಚು ಮಹತ್ವವೆನಿಸುತ್ತದೆ.
ಕೆಲವೊಂದು ಪ್ರವಾಸ ಕಥನಗಳಿಗೂ ಅಲ್ಲಿಯ ಪ್ರದೇಶದಲ್ಲಿ ವಾಸವಾಗಿದ್ದುಕೊಂಡು ಅಲ್ಲಿಯ ಜನತೆ, ಸಂಸ್ಕೃತಿಯ ಕುರಿತಾಗಿ ಬರೆಯುವುದಕ್ಕೆ ಹಲವಾರು ವ್ಯತ್ಯಾಸಗಳಿವೆ. ಪ್ರವಾಸಿಗರಿಗಿಂತ ಅಲ್ಲಿನ ವಾಸಿಯಾಗಿ ಇರುವದರಿಂದ ಆ ಊರಿನ ಕುರಿತು ಮತ್ತಷ್ಟು ಭಿನ್ನವೆನಿಸುತ್ತದೆ. ಇದಕ್ಕಾಗಿ ಅಂಕಣ ಬರಹದಂತಿರುವ ಈ ಪ್ರವಾಸ ಕಥನ ಲಿಬಿಯಾದ ಕುರಿತು ಹೊಸ ಒಳನೋಟಗಳನ್ನು, ಭಿನ್ನ ದೃಷ್ಟಿಯಿಂದ ಕಾಣುತ್ತದೆ.
ಉದಯ ಇಟಗಿಯವರು ಮೂಲತಃ ಕೊಪ್ಪಳದವರಾದ ಕೆಲಸದ ಅನಿವಾರ್ಯತೆಯಲ್ಲಿ ಲಿಬಿಯಾ ದೇಶದ ಸೆಭಾ ವಿಶ್ವವಿದ್ಯಾಲಯಕ್ಕೆ ಇಂಗ್ಲಿಷ್ ಅಧ್ಯಾಪಕರಾಗಿ ಹೋಗುತ್ತಾರೆ. ಜಗತ್ತು ಕಂಡ ಗಡಾಫಿಗೂ ಲೇಖಕರ ಕಣ್ಣಿಗೆ ಕಂಡ ಗಢಾಪಿಗೂ ಬಹಳ ವ್ಯತ್ಯಾಸವಿದೆ. ಇದೇ ಕಾರಣಕ್ಕೆ ಈ ಕೃತಿ ವಿಶಿಷ್ಟವಾಗಿ ನಿಲ್ಲುತ್ತದೆ.
ಮೊಹಮ್ಮದ್ ಗಡಾಫಿ ಒಬ್ಬ ಸಾಮ್ಯಾಜ್ರಶಾಹಿ, ಹೆಣ್ಣುಬಾಕ, ಅಮೇರಿಕಾದ ಕಡು ವಿರೋಧಿ ಎಂದೇ ಕುಖ್ಯಾತಿಯನ್ನು ಪಡೆದದ್ದು ಹೆಚ್ಚು. ಇದರಲ್ಲಿ ಅರ್ಧ ಸತ್ಯವು ಇದೆ, ಸುಳ್ಳು ಇದೆ. ಸಂದರ್ಭಕ್ಕೆ ಅನುಗುಣವಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಅಧ್ಯಾಪಕರಾಗಿ ಲಿಬಿಯಾಗೆ ಕಾಲಿಟ್ಟ ಲೇಖಕರಿಗೆ ಜಗತ್ತು ಕಂಡಂತಹ ಗಡಾಫಿಯ ಹೇಳಿಕೆಗೂ ತಾವು ಗಮನಿಸಿದ್ದಕ್ಕೂ ವ್ಯತ್ಯಾಸ ಕಂಡು ಬಂದಿದೆ. ಅಲ್ಲಿಯ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಅವಧಿ ಮ್ಯಾಗಜಿನ್ ಅಲ್ಲಿ ಬರೆದ "ಲಿಬಿಯಾ ಡೈರಿ" ಅಂಕಣ ಬರಹವು ಪುಸ್ತಕದ ಮಾರ್ಪಾಟನ್ನು ಪಡೆದು ಹೊರ ಬಂದಿದೆ.
ಹೊಸದೊಂದು ಊರು, ಭಾಷೆ, ಸಂಸ್ಕೃತಿ ವಿಭಿನ್ನವಾಗಿ ನಿಲ್ಲುವುದೇ ಇಂತಹ ಸಂಒಪ್ಪುವುದಿಲ್ಲ.ಅದರಲ್ಲೂ ಹೊಸದೊಂದು ತುಡಿತಕ್ಕೆ ತುಡಿಯುವವ ಲೇಖಕರಿಗೆ ಲಿಬಿಯಾ ಮತ್ತಷ್ಟು ವಿಭಿನ್ನವಾಗಿ ಕಂಡಿದೆ.
ಹಾಗಾದರೆ ಜಗತ್ತು ಯಾಕೆ ಗಡಾಫಿಯನ್ನು ಅಷ್ಟೊಂದು ದ್ವೇಷಿಸಿತು. ಜಗತ್ತಿನ ದೊಡ್ಡಣ್ಣನನ್ನು ಎದುರು ಹಾಕಿಕೊಂಡಿದ್ದಕ್ಕಾ, ಗಡಾಫಿಯ ಸರ್ವಾಧಿಕಾರತ್ವದ ತನ್ನದೇ ಸಿದ್ಧಾಂತಗಳಿಗ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವಲ್ಲಿ ಲೇಖಕರ ದೂರದೃಷ್ಟಿ ಇದೆ.
ಹಾಗಂತ ಇಲ್ಲಿ ಎಲ್ಲವನ್ನೂ ಲೇಖಕರು ಸರಿಯೆಂದು ಒಪ್ಪುವುದಿಲ್ಲ. ತಾವು ಕಂಡ ಗಡಾಫಿಗೂ ಜಗತ್ತಿಗೆ ತೆರೆದುಕೊಂಡ ಗಡಾಫಿಯನ್ನು ತುಲನೆ ಮಾಡುತ್ತಾರೆ. ಗಡಾಫಿಯ ತಪ್ಪುಗಳನ್ನು, ದುಡುಕುತನದ ನಿರ್ಧಾರಗಳ ಕುರಿತು ನೇರವಾಗಿ ಟೀಕಿಸಿದ್ದಾರೆ. ಗಡಾಫಿಯ ವ್ಯಕ್ತಿತ್ವದ ಹೊಸದೊಂದು ಆಯಾಮ ನಮಗಿಲ್ಲಿ ದಕ್ಕುತ್ತದೆ. ಅವನ ದ್ವಂದ್ವ ಮನಸ್ಥಿತಿಯ ಉದಾಹರೆಣೆಗೆ ಹೇಳುವುದಾದರೆ ತನ್ನ ದೇಶದಲ್ಲಿ ಹತ್ತು ವರ್ಷಗಳ ಕಾಲ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು, ನಂತರ ಅದರ ಮಹತ್ವತೆಯ ಕುರಿತು ಅರಿವಾಗಿ ಮತ್ತೆ ಜಾರಿಗೆ ತಂದ. ಆದರೆ ಈ ಹತ್ತು ವರ್ಷಗಳ ಅವಧಿಯ ನಡುವಿನ ಒಂದು ತಲೆಮಾರು ಇಂಗ್ಲಿಷ್ ಭಾಷೆಯ ಸಂಪರ್ಕಕ್ಕೆ ತೆರೆದುಕೊಳ್ಳಲಿಲ್ಲ ಎಂದು ಅಲ್ಲಿಯ ಜನರು ಗಡಾಫಿಯನ್ನು ಬೈಯ್ಯುತ್ತಾರೆ.
ಗಡಾಫಿ ಜಗತ್ತಿಗೆ ಖಳನಾಯಕನಂತೆ ಪರಿಚಯವಾದರೆ, ಲಿಬಿಯಾದ ಜನತೆಗೆ ಆತನೊಬ್ಬ 'ದುರಂತ ನಾಯಕ'ನಂತೆ ಕಾಣುತ್ತಾನೆ ಎಂಬ ಮಾತುಗಳು ಒಮ್ಮೊಮ್ಮೆ ನಿಜವೆನಿಸುತ್ತದೆ. ಅದೆಷ್ಟು ಸರ್ವಾಧಿಕಾರತ್ಬ ಧೋರಣೆ ಹೊಂದಿದ್ದರು ತನ್ನ ದೇಶದಲ್ಲಿ ಉತ್ತಮ ಆಡಳಿತವನ್ನು ಮಾಡಿದ್ದ. ಹಾಗೆಯೆ ಅಷ್ಟೇ ಅಸಂಬಂದ್ಧ ನಿರ್ಧಾರವನ್ನು ತೆಗೆದುಕೊಂದಿದ್ದ. ಈತನ ಹತ್ಯೆಯ ನಂತರ ಇಡೀ ಜಗತ್ತಿನ ಕಣ್ಣಿಗೆ ಆಫ್ರಿಕಾದ ಒಂದು ಮೂಲೆಯಲ್ಲಿ ಹರಡಿದ್ದ ಲಿಬಿಯಾ ಎಲ್ಲರ ಕಣ್ಣಿಗೆ ಕುಕ್ಕತೊಡಗಿತು.
ಹೊಸದೊಂದು ಒಳನೋಟ ಕಟ್ಟಿಕೊಳ್ಳಲು, ಲಿಬಿಯಾವನ್ನು ಕೇವಲ ಗಢಾಫಿಯ ಲಿಬಿಯಾವಾಗಿ ನೋಡದೆ ಬೇರೆಯ ದೃಷ್ಟಿಕೋನದಿಂದಲೂ ನೋಡುವಂತೆ ಮಾಡುವಲ್ಲಿ ಇದು ಪ್ರಮುಖವಾಗಿದೆ. ಜೊತೆಗೆ ಈ ಕೃತಿಯು ಲಿಬಿಯಾ, ಗಡಾಫಿಯ ಕುರಿತಾಗಿ ಮಾತ್ರವಲ್ಲದೆ ಲಿಬಿಯಾ ದೇಶದಲ್ಲಿ ತಾವು ಅನುಭವಿಸಿದ ವಿಭಿನ್ನ ಕೌತುಕ, ಹೊಸ ಬಗೆಯ ಅನುಭವಗಳು ಒಬ್ಬ ಪ್ರವಾಸಿಯ ಕಣ್ಣಿನಿಂದ ಹಾಗೂ ಲೇಖಕರ ಒಳನೋಟದಿಂದ, ತಮ್ಮ ಅನುಭವಗಳನ್ನು ಲೇಖಕರು ಈ ಪುಸ್ತಕದ ಮೂಲಕ ದಾಖಲಿಸಿದ್ದಾರೆ. ಒಂದಂತೂ ಸತ್ಯ. ಇದನ್ನು ಓದಿದ ಮೇಲೆ ಗಡಾಫಿಯ ಕುರಿತು ಒಂದು ವಿಷಾದವೊಂದು ಮೂಡುವುದು ಖಂಡಿತಾ.
- ರಾಜೇಶ್ವರಿ ಲಕ್ಕಣ್ಣವರ (ಕೃಪೆ: ’ಸಂಗಾತ’ ತ್ರೈಮಾಸಿಕ ಪತ್ರಿಕೆ)
.......................................................................................
ಗಡಾಫಿ ಹೀಗೂ ಇದ್ದ ಅನ್ನುವುದಕೆ ನಿಮ್ಮ ಪುಸ್ತಕ ಸಾಕ್ಷಿ
ಲಿಬಿಯಾ ಬಗ್ಗೆ ಕನ್ನಡದಲ್ಲಿ ಪುಸ್ತಕ ಬಂದದ್ದೇ ಖುಷಿ. ಬರೆಯುವವನೊಬ್ಬ ಎಲ್ಲಿದ್ದರೂ ಅದು ಆ ಪ್ರದೇಶದ ಅದೃಷ್ಟ. ಬರಹಗಾರ ಆ ಜಾಗವನ್ನು, ಬದುಕನ್ನು ದಾಖಲಿಸುತ್ತಾನೆ. ಕನ್ನಡದಲ್ಲಿ ಲಿಬಿಯಾ ಬಗ್ಗೆ ಬರೆದುದಕ್ಕೆ ಮೊದಲು ಅಭಿನಂದನೆಗಳು. ನಿಜ, ಗಡಾಫಿ ಬಗ್ಗೆ ಜಗತ್ತು ಅಂದುಕೊಂಡದ್ದು ಬೇರೆಯೇ. ಆದರೆ ನೀವು ಬರೆದದ್ದು ಕೂಡ ಪೂರ್ತಿ ನಿಜವೆನ್ನುವಂತಿಲ್ಲ. ನೀವು ಸುಳ್ಳು ಬರೆದಿರಿಅಂತಲ್ಲ. ನಿಮಗೆ ದಕ್ಕಿದಷ್ಟು ಬರೆದಿದ್ದೀರಿ. ಆದರೆ ಇಲ್ಲಿ ಎಲ್ಲರಿಗೂ ದಕ್ಕುವುದು ಅರ್ಧಸತ್ಯವೇ. ಆದರೂ ಗಡಾಫಿ ಹೀಗೂ ಇದ್ದ ಅನ್ನುವುದಕೆ ನಿಮ್ಮ ಪುಸ್ತಕ ಸಾಕ್ಷಿ. ಮರಳುಗಾಡಿನ ಬಗ್ಗೆ ನನ್ನ ಭ್ರಮೆಯೂ ಕಳಚಿತು. ತುಂಬಾ ವಿಷಯ ತಿಳಿದೆ. ಆದರೆ ಒಂದು ತಕರಾರು. ಸಂಧ್ಯಾರಾಣಿ ಹೇಳಿದಂತೆ ಹೆಣ್ಮಕ್ಕಳಿಗೆ ಸೂಳೆ ಅಂತ ಪದಬಳಕೆ ಮಾಡಿದ್ದು. ಮತ್ತು ತುಂಬ ರಿಪಿಟೇಷನ್ಸ್ ಇವೆ. ಅಂಕಣವಾಗಿ ಸರಿ. ಪುಸ್ತಕವಾಗುವಾಗ ಸ್ವಲ್ಪ ಅದನ್ನು ನೋಡಿಕೋಬಹುದಿತ್ತು. ಉಳಿದಂತೆ ಬಹಳೇ ಚೆನ್ನಾಗಿದೆ. ಅಪರಿಚೊರಾದ ನಿಮಗೆ ಸಹಾಯ ಮಾಡಿದ ಆ ಹೆಂಗಸು ಮತ್ತು ಡ್ರೈವರ್ ಚಿತ್ರ ಮನದಲ್ಲಿ ನಿಂತಿದೆ. ದೇಶಗಳು ಬೇರೆ. ಆದರೆ ಆಳದಲ್ಲಿಮನುಷ್ಯ ಸ್ವಭಾವ ಗಳು ಅವವೇ.
-ಕುಸುಮಾ ಆಯರಹಳ್ಳಿ (ಕುಸುಮ ಬಾಲೆ) ಮೈಸೂರು, ಖ್ಯಾತ ಲೇಖಕಿ ಮತ್ತು ಅಂಕಣಗಾರ್ತಿ
...........................................................................................
ಹಲವು ಆಯಾಮಗಳ ವ್ಯಕ್ತಿತ್ವದ ಗಡಾಫಿ
ಡೈರಿ ಈಗ ತಾನೇ ಓದಿಯಾಯ್ತು. ತುಂಬಾ ಇಷ್ಟವಾಯಿತು. ರಾಜಕೀಯ ವಿಪ್ಲವಗಳಿಗೆ ಸಾಮಾಜಿಕ, ಆಥಿ೯ಕ, ಸ್ವಾಥ೯ಸಾಧಕ ಹಾಗು ವ್ಯಕ್ತಿ-ವಸಾಹತು ಕೇಂದ್ರಿತ ಹಿತಾಸಕ್ತಿಗಳು ಹೇಗೆ ಕಾರಣವಾಗುತ್ತವೆಂಬುದನ್ನು ಬಹು ಚೆನ್ನಾಗಿ ವಿಸ್ತೃತವಾಗಿ ವಿವರಿಸಿದ್ದಾರೆ.
ಹಲವು ಆಯಾಮಗಳಿಂದ ಲಿಬಿಯಾದ ತ್ರಿಶಂಕು ಪರಿಸ್ಥಿತಿಯನ್ನು ಓದುಗರ ಮುಂದಿಡುವುದರ ಮೂಲಕ, ಸಮಥ೯ ನಾಯಕತ್ವದ ರಕ್ಷಣೆ ಇಲ್ಲದೇ ಹೋದಾಗ ದೇಶದ ಜನತೆಯ ಪರಿಸ್ಥಿತಿ ಹೇಗೆ ಕಠಿಣವಾಗುತ್ತೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದು ಇನ್ನು ಮುಂದೆಯೂ ಮೌಲಿಕ ಕೃತಿಗಳು ಮೂಡಿಬರಲಿ.
ಮಹಮ್ಮದ್ ಖುದ್ರತ್, ಚಿತ್ರದುರ್ಗ.
©2024 Book Brahma Private Limited.