‘ಪಾಕಿಸ್ತಾನದ ಐ .ಎಸ್ .ಐ’ ಗುರುಪ್ರಸಾದ್ ಡಿ.ವಿ ಅವರ ಆಕರ ಗ್ರಂಥವಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಪಾಕಿಸ್ತಾನದ ಬಾಹ್ಯ ಬೇಹುಗಾರಿಕಾ ದಳ ಐ.ಎಸ್.ಐ ತನ್ನ ಕ್ರಿಮಿನಲ್ ಕೃತ್ಯಗಳಿಂದಲೇ ಅಪಖ್ಯಾತಿಯನ್ನು ಪಡೆದಿದ್ದರೂ, ಅದರ ಎಲ್ಲ ಚಟುವಟಿಕೆಗಳ ಬಗ್ಗೆ ಹೆಚ್ಚಿನ ವಿವರಗಳು ನಮಗೆ ಲಭ್ಯವಿರಲಿಲ್ಲ. ಆದರೆ ಇದೇ ಮೊದಲಬಾರಿಗೆ ಬೇಹುಗಾರಿಕಾ ವಿಷಯಗಳ ತಜ್ಞರಾದ ಡಾ.ಡಿ.ವಿ.ಗುರುಪ್ರಸಾದ್ ಈ ದಳವು ಹೊದ್ದಿದ್ದ ಮುಸುಕಿನ ಪರದೆಯನ್ನು ತೆರೆದು ಅದರ ನಿಜಸ್ವರೂಪವನ್ನು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. 1948ರಲ್ಲಿ ತಾನು ಸ್ಥಾಪನೆಗೊಂಡಾಗಿನಿಂದ 2024ರ ಜೂನ್‌ವರೆಗೆ ಐ.ಎಸ್.ಐ ಭಾರತದಲ್ಲಿ ನಡೆಸಿರುವ ಇಲ್ಲವೇ ಪ್ರೋತ್ಸಾಹಿಸಿರುವ ಆತಂಕವಾದಿ ಕೃತ್ಯಗಳು, ಪಾಕಿಸ್ತಾನದ ಸೈನ್ಯದ ಜತೆ ಅದಕ್ಕಿರುವ ಸಂಬಂಧ, ಪಾಕಿಸ್ತಾನದ ರಾಜಕೀಯವನ್ನು ತನಗೆ ಬೇಕಾದಂತೆ ತಿರುಗಿಸಿ ತನ್ನ ಸ್ವಾರ್ಥಕ್ಕೆ ಅದು ಬಳಸಿಕೊಂಡಿರುವ ಪರಿ, ತನಗಾಗದವರನ್ನು ನಿರ್ದಯದಿಂದ ನಿರ್ನಾಮ ಮಾಡುವ ಅದರ ನಡೆಗಳು ಮುಂತಾದ ನಾವು ಕೇಳರಿಯದಿದ್ದ ಅನೇಕ ಕುತೂಹಲಕರ ಮಾಹಿತಿಗಳನ್ನು ಲೇಖಕರು ಹೆಕ್ಕಿ ತೆಗೆದು ನಮ್ಮ ಮುಂದಿಟ್ಟಿದ್ದಾರೆ. ಐ.ಎಸ್.ಐ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದನ್ನು ಮುನ್ನಡೆಸುವವರು ಯಾರು? ಆತಂಕವಾದಿ ಸಂಘಟನೆಗಳ ಜತೆಗೆ ಅದಕ್ಕಿರುವ ಸಂಬಂಧವೇನು? ಮುಂತಾದವುಗಳ ಬಗ್ಗೆ ತಿಳಿಯಬೇಕೆನ್ನುವವರಿಗೆ ಈ ಪುಸ್ತಕದಲ್ಲಿ ಎಲ್ಲ ಮಾಹಿತಿಯೂ ಸಿಗುತ್ತದೆ. ಕೇವಲ ಭದ್ರತೆ, ಬೇಹುಗಾರಿಕೆ ಮತ್ತು ವಿದೇಶಾಂಗ ವ್ಯವಹಾರಗಳ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವವರಲ್ಲದೆ ಸಾಮಾನ್ಯ ಓದುಗನೂ ಓದಲೇಬೇಕಾದ ಈ ಕುತೂಹಲಕಾರಿ ಪುಸ್ತಕ ಒಂದು ಆಕರ ಗ್ರಂಥವಾಗಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಒಂದು ಮಹತ್ತರ ಕೊಡುಗೆಯಾಗಿದೆ.
©2025 Book Brahma Private Limited.