ಪೃಥ್ವಿಯ ಯಶೋಗಾಥೆ -ಭೂವಿಜ್ಞಾನ ಕುರಿತಂತೆ ಡಾ. ಎಂ. ವೆಂಕಟಸ್ವಾಮಿ ಅವರ ಕೃತಿ. ಒಟ್ಟು 19 ಅಧ್ಯಾಯಗಳಿದ್ದು, ಭೂಮಿಯ ಬಗ್ಗೆ ಎಲ್ಲಾ ಮಜಲುಗಳನ್ನು ಒಳಗೊಂಡಿದೆ. ಕನ್ನಡದಲ್ಲಿ ಭೂವಿಜ್ಞಾನ ಓದುವ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಣ್ಣ ಆಕರ ಪುಸ್ತಕವಿದು. ಇಡೀ ಬ್ರಹ್ಮಾಂಡದಲ್ಲಿ ಭೂಮಿ ಜೀವಜಾಲ ಇರುವ ಸುಂದರ ಏಕೈಕ ನೀಲಿ ಗ್ರಹವಾಗಿದೆ. ಮನುಷ್ಯನೆಂಬ ದುರುಳನು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದ ಇಂದಿನವರೆಗೂ ಅವನ ಎಲ್ಲಾ ರೀತಿಯ ಕೃತ್ಯಗಳು ಮತ್ತು ದುರಾಸೆಗಳನ್ನು ಭೂಮಿತಾಯಿ ಸಹಿಸಿಕೊಂಡು ಬರುತ್ತಲೇ ಇರುವಳು. ಭೂಮಿ ಮನುಷ್ಯ ಪ್ರಾಣಿಗಳಿಗೆ ಬೇಕಾದ ಗಾಳಿ, ನೀರು ಮತ್ತು ಆಹಾರವನ್ನು ಒದಗಿಸುವುದರ ಜೊತೆಗೆ ತನ್ನ ಒಡಲಲ್ಲಿ ಅಡಗಿಸಿ ಇಟ್ಟುಕೊಂಡಿರುವ ಅಮೂಲ್ಯ ವಜ್ರ-ವೈಢೂರ್ಯ, ಚಿನ್ನ-ಬೆಳ್ಳಿಯಂತಹ ಖನಿಜ ಲೋಹ ನಿಕ್ಷೇಪಗಳನ್ನು ಮನುಷ್ಯನಿಗೆ ಬಾಚಿಕೊಟ್ಟಿದೆ.
ಆಧುನಿಕ ಮನುಷ್ಯ ನಡೆಸುತ್ತಿರುವ ವಿಜ್ಞಾನ ಆವಿಷ್ಕಾರ ಗಾಳದ ಹಾಳುಮೂಳು ಯಂತ್ರಗಳಿಗೆ ಬೇಕಾದ ಕಲ್ಲಿದ್ದಲು, ಅನಿಲ-ಇಂಧನಗಳನ್ನು ಪೂರೈಸುತ್ತಿದೆ. ಕಂಪ್ಯೂಟರ್ ಗಳು ಬೇಕಾದ ಸಿಲಿಕಾ ಚಿಪ್ಪಿನಿಂದ ಹಿಡಿದು ಬಾಂಬ್ ಗಳಿಗೆ ಬೇಕಾದ ಹೈಡ್ರೋಜನ್ ಯುರೇನಿಯಂ ಥೋರಿಯಂನಂತಹ ಖನಿಜಗಳನ್ನು ಸಹ ನೀಡುತ್ತಿದೆ. ಇವುಗಳೆಲ್ಲವನ್ನು ಭೂಮಿ ನೀಡುತ್ತಿದೆ ಎನ್ನುವುದಕ್ಕಿಂತ ಮನುಷ್ಯಾದವನು ಅವುಗಳನ್ನು ಒಳ್ಳೆಯ ಕಾರ್ಯಗಳಿಗಿಂತ ಹೆಚ್ಚು ಕೆಟ್ಟ ಕಾರ್ಯಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ ಎನ್ನುವುದೇ ಸರಿ.
ಸುಮಾರು 4.543 ಕೋಟಿ ವರ್ಷಗಳ ಇತಿಹಾಸ ಇರುವ ಭೂಮಿಯ ಯಶೋಗಾಥೆಯಂತೂ ದೀರ್ಘ ವಾದದ್ದು ಮತ್ತು ರೋಚಕವಾದದ್ದು. 4.543 ಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡದಲ್ಲಿ ಕಾಣಿಸಿಕೊಂಡ ಭೂಮಿಯ ಸ್ವರೂಪ ಇಂದಿನಂತೆ ಇರಲಿಲ್ಲ. ಮೊದಲಿಗೆ ಅದೊಂದು ರಾಶಿರಾಶಿ ಅನಿಲದ ಮುದ್ದೆಯಾಗಿತ್ತು. ಕಾಲಾನಂತರದಲ್ಲಿ ಭೂಮಿ ಗಟ್ಟಿಗೊಂಡು ಮಳೆ, ವಾತಾವರಣ ಮತ್ತು ಸಮುದ್ರಗಳು ಕಾಣಿಸಿಕೊಂಡವು. ಅನಂತರ ಸಮುದ್ರದಲ್ಲಿ ಪಾಚಿ, ಏಕ ಕಣ ಜೀವಿಗಳು, ಮೀನು, ಕಪ್ಪೆ ಮತ್ತು ದೈತ್ಯ ತಿಮಿಂಗಲಗಳಂತಹ ಪ್ರಾಣಿಗಳು ಸೃಷ್ಟಿಯಾದವು. ಸಮುದ್ರದಿಂದ ದಡ ತಲುಪಿದ ಪ್ರಾಣಿಗಳಿಗೆ ಕಾಲು-ಕೈ, ರೆಕ್ಕೆಗಳು ಮೂಡಿ ಭೂಮಿಯ ಮೇಲೆಲ್ಲ ಉರುಳಾಡಿದವು, ಆಕಾಶದಲ್ಲೆಲ್ಲ ಹಾರಾಡಿದವು. ಭೂಮಿಯ ಮೇಲೆ ಹುಲ್ಲು, ಗಿಡ-ಮರಗಳೊಂದಿಗೆ ದಟ್ಟ ಹರಿದ್ವರ್ಣ ಅರಣ್ಯಗಳು ಬೆಳೆದು ನಿಂತವು. ಕೊನೆಗೆ ಮರಗಳ ಮೇಲಿದ್ದ ವಾನರ, ಗೊರಿಲ್ಲಾ, ಚಿಂಪಾಂಜಿ, ಒರಾಂಗುಟ್ಟಾಗಳಾಗಿ ಮಾರ್ಪಟ್ಟು, ಮನುಷ್ಯನ ರೂಪ ಪಡೆದುಕೊಂಢು ಭೂಮಿಯ ಮೇಲೆ ನೆಲೆ ನಿಂತುಕೊಂಡು, ಭೂಮಿ ತನ್ನ ಇತಿಹಾಸದಲ್ಲಿ ಅನಂತ ತೊಂದರೆಗಳನ್ನು ಅನುಭವಿಸುತ್ತ ಬಂದರೂ ಎಲ್ಲವನ್ನೂ ನುಂಗಿಕೊಂಡೆ ಬಂದಿದೆ. ಜ್ವಾಲಾಮುಖಿಗಳ ಸ್ಫೋಟ, ಅನ್ಯಕಾಯ/ಉಲ್ಕಾಶಿಲೆಗಳ ದಾಳಿ, ಭೂಕಂಪನಗಳ ಅಟ್ಟಹಾಸ, ಸುನಾಮಿಗಳ ಹೊಡೆತ, ಸಮುದ್ರಗಳ ಕೊರೆತೆ, ನೆರೆ ಬರ ಇತ್ಯಾದಿ. ಪೃಥ್ವಿಯ ಯಶೋಗಾಥೆಯ ಈ ಕೃತಿಯಲ್ಲಿ ಭೂಮಿ ರೂಪುಗೊಂಡ ಕಾಲದಿಂದ ಇಂದಿನ ಸಂಗತಿಗಳವರೆಗೂ ಒಂದು ಸಮಗ್ರ ನೋಟವನ್ನು ನೀಡಲಾಗಿದೆ.
ಪೃಥ್ವಿಯ ಯಶೋಗಾಥೆ (ಭೂವಿಜ್ಞಾನ) ಪರಿವಿಡಿಯ 19 ಅಧ್ಯಾಯಗಳು. 1. ವಿಶ್ವ ಅಥವ ಬ್ರಹ್ಮಾಂಡ 2. ಭೂಮಿಯ ವಿಕಾಸ ಮತ್ತು ವಯಸ್ಸು 3. ಜ್ವಾಲಾಮುಖಿಗಳು 4. ಭೂಕಂಪನಗಳು 5. ಸುನಾಮಿ 6. ಚಂಡಮಾರುತ 7. ಪರ್ವತಗಳು ಮತ್ತು ಶಿಲೆಗಳು 8. ಪಳಿಯುಳಿಕೆಗಳು ಮತ್ತು ಭೂಮಿಯ ವಯಸ್ಸು 9. ಬದಲಾಗುತ್ತಿರುವ ಭೂಮಿಯ ಬಾಹ್ಯ ಚಿತ್ರಣ 10. ಖನಿಜಗಳು 11. ಮರುಭೂಮಿ 12. ಅಂತರ್ಜಲ 13. ಇಂಧನ ಮತ್ತು ಅನಿಲ 14. ಕಲ್ಲಿದ್ದಲು 15. ಸಾಗರ ಸಂಪನ್ಮೂಲ 16. ನದಿಗಳು 17. ದಕ್ಷಿಣ ಧ್ರುವ ಅಥವ ಅಂಟಾರ್ಟಿಕ 18. ಓಝೋನ್ ಪದರು ನಾಶ 19. ಹವಾಮಾನ ಮತ್ತು ತಾಪಮಾನ
©2024 Book Brahma Private Limited.