ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರ ಮತ್ತೊಂದು ವಿಜ್ಞಾನ ಬರಹಗಳ ಸಂಕಲನ ‘ರಾಜರ ಲೋಹ : ಲೋಹಗಳ ರಾಜ ಚಿನ್ನ’ . ಚಿನ್ನವೆಂದರೆ ಯಾರಿಗೆ ಬೇಡ? ಚರಿತ್ರೆಯುದ್ದಕ್ಕೂ ಚಿನ್ನ ಲೋಹಗಳ ರಾಜವಾಗಿ ಮೆರೆದಿದೆ, ರಾಜರ ಲೋಹವಾಗಿ ವಿಜೃಂಭಿಸಿದೆ. ಚಿನ್ನಕ್ಕಾಗಿ ಯುದ್ಧಗಳಾಗಿವೆ, ನಾಗರಿಕತೆಗಳೇ ನೆಲಸಮವಾಗಿವೆ. ನಿಮಗೆ ಗೊತ್ತೆ ಒಂದು ಗ್ರಾಂ ಚಿನ್ನದಿಂದ ಎರಡೂವರೆ ಕಿಲೋ ಮೀಟರ್ ದೂರ ತಂತಿ ಎಳೆಯಬಹುದು. ಒಂದು ಟನ್ ಚಿನ್ನ ಎಂದರೆ ಪುಟ್ಟ ಟಿ.ವಿ. ಪೆಟ್ಟಿಗೆ ಗಾತ್ರದಷ್ಟು. ಇದರಿಂದ ತಂತಿ ಎಳೆಯುತ್ತ ಹೋದರೆ ಚಂದ್ರನನ್ನು ತಲುಪಿ ಅದು ಮರಳಿ ಭೂಮಿಗೆ ಬರಬಲ್ಲದು. ಒಂದು ಸೆಂಟಿಮೀಟರ್ ದಪ್ಪದ ಚಿನ್ನದ ತಗಡಿನಿಂದ ಒಂದು ಲಕ್ಷ ರೇಕುಗಳನ್ನು ಬಿಡಿಸಬಹುದು. ಈಜಿಪ್ಟ್ ದೊರೆಗಳು ಚಿನ್ನದ ಗಣಿಗಳಲ್ಲಿ ದುಡಿಯಲು ನುಬಿಯ ಗುಲಾಮರನ್ನು ಬಳಸುತ್ತಿದ್ದರಂತೆ. ಮಧ್ಯ ಅಮೆರಿಕದ ಇಂಕಾಗಳ ಬುಡಕಟ್ಟು ಚಿನ್ನದ ದಾಸ್ತಾನಿನಿಂದಾಗಿ ಸ್ಪೈನ್‍ನ ದಾಳಿಗೆ ತುತ್ತಾಯಿತು. ಈಗಲೂ ಚಿನ್ನ ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ. ಭಾರತ ಒಂದರಲ್ಲೇ ಸುಮಾರು 5,000 ಟನ್ನಿಗೂ ಮಿಕ್ಕಿ ಖಾಸಗಿ ಚಿನ್ನದ ಸಂಗ್ರಹವಿದೆ ಎಂದು ಅಂದಾಜು. ಸರ್ಕಾರ ಚಿನ್ನವನ್ನು ಆಪದ್ಧನ ಎಂದು ರಕ್ಷಿಸುತ್ತಿದೆ.
`ರಾಜರಲೋಹ : ಲೋಹಗಳ ರಾಜ – ಚಿನ್ನ’ ಓದುಗರಿಗೆ ಚಿನ್ನದ ಇತಿಹಾಸವನ್ನೇ ತೆರೆದಿಡುತ್ತದೆ. ಹಾಗೆಯೇ ಚಿನ್ನದ ಮೂಲಕ ಮಾಡುವ ವ್ಯವಹಾರದ ಬಗ್ಗೆಯೂ ನಿಮ್ಮ ಮುಂದೆ ಅನೇಕ ಅಂಶಗಳನ್ನು ಇಡುತ್ತದೆ. ಕರ್ನಾಟಕದಲ್ಲಿ ಕೋಲಾರದ ಚಿನ್ನದ ಗಣಿ ಸುಮಾರು 800 ಟನ್ ಚಿನ್ನ ಕೊಟ್ಟ ಮೇಲೆ ಆಯುಷ್ಯ ಕಳೆದುಕೊಂಡಿತು. ಸದ್ಯದಲ್ಲಿ ಚಿನ್ನವನ್ನು ಗಣಿ ಮಾಡುತ್ತಿರುವುದು ರಾಯಚೂರಿನ ಹಟ್ಟಿ ಚಿನ್ನದ ಗಣಿಗಳಲ್ಲಿ ಮಾತ್ರ. ಅಲ್ಲಿ ಉತ್ಪಾದನೆಯಾಗುತ್ತಿರುವುದು ವಾರ್ಷಿಕ ಸುಮಾರು ಮೂರು ಟನ್. ಆದರೆ ಭಾರತದಲ್ಲಿ ಬೇಡಿಕೆ ಇರುವುದು ವಾರ್ಷಿಕ ಸುಮಾರು 800 ಟನ್. ಇಂತಹ ತುಂಬ ವಿರಳವಾದ ಮಾಹಿತಿಗಳನ್ನು ಓದಿದಾಗ, ಚಿನ್ನ ಹೇಗೆ ಈಗಲೂ ಜಗತ್ತನ್ನು ಆಳುತ್ತಿದೆ ಎಂಬ ಗುಟ್ಟು ನಿಮಗೆ ತಿಳಿಯುತ್ತದೆ ಜೊತೆಗೆ, ಈ ಹಳದಿ ಲೋಹದ ಮಹತ್ವದ ಬೇರೆ ಬೇರೆ ಆಯಾಮಗಳು ತೆರೆದುಕೊಳ್ಳುತ್ತವೆ.
©2024 Book Brahma Private Limited.