‘ಬದಲಾಗುತ್ರಿರುವ ಭೂಮಿ’ ಲೇಖಕರಾದ ಸ.ರ.ಸುದರ್ಶನ ಮತ್ತು ಟಿ.ಆರ್. ಅನಂತರಾಮು ಅವರು ಸಂಪಾದಿಸಿರುವ ವಿಜ್ಞಾನಬರಹಗಳ ಸಂಕಲನ. ಭೂಮಿ ಹುಟ್ಟಿ 460 ಕೋಟಿ ವರ್ಷಗಳಾಗಿವೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ವಿಜ್ಞಾನಿಗಳು ಕೆಲವು ವಿಕಿರಣ, ಖನಿಜಗಳು ಸವೆಯುವುದರ ಮೇಲೆ ಈ ಅಭಿಪ್ರಾಯಕ್ಕೆ ಬಂದಿದ್ದಾರೆ.
ಹಾಗಾದರೆ ಭೂಮಿ ಮೂಲದಲ್ಲಿ ಇದ್ದಂತೆಯೇ ಇದೆಯೆ? ಖಂಡಿತಾ ಇಲ್ಲ. ಭೂಮಿ ಹುಟ್ಟಿದಾಗ ಹಿಮಾಲಯ ಪರ್ವತವೂ ಇರಲಿಲ್ಲ, ವಿಂಧ್ಯ ಪರ್ವತವೂ ಇರಲಿಲ್ಲ. ಪಶ್ಚಿಮ ಘಟ್ಟಗಳೂ ಇರಲಿಲ್ಲ. ಅನಿಲ ಸ್ಥಿತಿಯಿಂದ ದ್ರವಸ್ಥಿತಿಗೆ ಬಂದು, ದ್ರವ ಸ್ಥಿತಿಯಿಂದ ಘನಸ್ಥಿತಿಗೆ ಬಂದು ಅತಿ ನಿಧಾನವಾಗಿ ವಿಕಾಸವಾದ ಗ್ರಹ ನಮ್ಮದು. ಭೂಮಿಯನ್ನು ಸತತವಾಗಿ ಆಂತರಿಕ ಶಕ್ತಿ ದೂಡುತ್ತಿದೆ. ಬಾಹ್ಯ ಶಕ್ತಿಗಳು ಅದರ ರೂಪವನ್ನೇ ಬದಲಾಯಿಸುತ್ತಿದೆ. ಬಿಸಿಲು, ಮಳೆ, ಗಾಳಿ, ಇವು ಭೂಮಿಯ ಮುಖವನ್ನು ಕೆತ್ತುತ್ತಲೇ ಇವೆ, ಸ್ವರೂಪವನ್ನು ಬದಲಾಯಿಸುತ್ತಲೇ ಇವೆ. ಹಾಗೆಯೇ ಆಂತರಿಕ ಶಕ್ತಿ ಇಡೀ ಭೂಮಿಯನ್ನು ಬೇರೆ ಬೇರೆ ಫಲಕಗಳಾಗಿ ಸೀಳಿ, ಈ ಒಂದೊಂದು ಫಲಕವೂ ಖಂಡಗಳನ್ನೇ ಹೊತ್ತು ಅತಿ ಮೆಲ್ಲನೆ ಸರಿದಾಡುತ್ತಿದೆ. ಈ ಕ್ರಿಯೆಯಿಂದಾಗಿ ಸೀಳಿದ ಭಾಗದಲ್ಲಿ ಜ್ವಾಲಾಮುಖಿಗಳೇಳುತ್ತಿವೆ, ಭೂಕಂಪನಗಳು ಹುಟ್ಟುತ್ತಿವೆ.
ನಿಮಗೆ ವಿಸ್ಮಯವಾಗಬಹುದು, ಈಗ್ಗೆ ಸುಮಾರು 300 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಖಂಡಗಳೇ ಇರಲಿಲ್ಲ. ಎಲ್ಲವೂ ಒಟ್ಟಿಗೇ ಸೇರಿಕೊಂಡು ಮುದ್ದೆಯಂತಾಗಿದ್ದವು. ದಕ್ಷಿಣ ಅಮೆರಿಕ, ಆಫ್ರಿಕಾ, ಭಾರತ, ಆಸ್ಟ್ರೇಲಿಯ, ಅಂಟಾರ್ಕ್‍ಟಿಕ ಖಂಡ ಇವೆಲ್ಲವೂ ಆಗ ಒಂದುಗೂಡಿದ್ದವು. ಅನಂತರ ನಿಧಾನ ಗತಿಯಲ್ಲಿ ಸರಿದು ಈಗಿನ ನೆಲೆ ತಲಪಿವೆ. ಉತ್ತರದ ಕಡೆಯಿಂದ ಬರುತ್ತಿದ್ದ ಫಲಕ, ಇತ್ತ ದಕ್ಷಿಣದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತವನ್ನು ಹೊತ್ತ ಫಲಕವನ್ನು ಗುದ್ದಿದಾಗ ಹಿಮಾಲಯ ಪರ್ವತ ಹುಟ್ಟಿತೆಂದು ವಿಜ್ಞಾನಿಗಳು ಸಾಕ್ಷಿಗಳನ್ನು ಒದಗಿಸಿದ್ದಾರೆ. ನಿರಂತರವಾಗಿ ಬದಲಾಗುತ್ತಿರುವ ಭೂಮಿಯ ಎಲ್ಲ ರೋಚಕ ಮುಖಗಳನ್ನೂ ಈ ಪುಸ್ತಕ ಓದುಗರ ಮುಂದಿಡುತ್ತದೆ.
©2024 Book Brahma Private Limited.