`ರತ್ನಗಳು’ ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ. ಈ ಕೃತಿಯಲ್ಲಿ ರತ್ನಗಳ ಇತಿಹಾಸ, ನವರತ್ನಗಳ ಕಲ್ಪನೆ, ರತ್ನ ಪ್ರಪಂಚವನ್ನಾಳುತ್ತಿರುವ ಹಲವು ಪ್ರಶಸ್ತ ಮತ್ತು ಅರೆ ಪ್ರಶಸ್ತ ರತ್ನಗಳನ್ನು ಕುರಿತು ವಿವರಣೆಗಳಿವೆ. ವೈಜ್ಞಾನಿಕವಾಗಿ ರತ್ನಗಳನ್ನು ಕುರಿತು ಅರಿಯಲು ಬಯಸುವವರಿಗೆ ಇದೊಂದು ಆಕರ ಗ್ರಂಥ.
ರತ್ನಗಳ ಬಗ್ಗೆ ಪ್ರಾಚೀನ ಕಾಲದಿಂದಲೂ ಅನೇಕ ನಂಬಿಕೆಗಳು ಬೆಳೆದುಬಂದಿವೆ. ನವಗ್ರಹಕ್ಕೆ ಹೊಂದುವಂತೆ ನವರತ್ನಗಳನ್ನು ಗುರುತಿಸಿದ್ದಾರೆ. ಇವೆಲ್ಲ ಸಂಪ್ರದಾಯವಾಯಿತು. ಆದರೆ ರತ್ನಗಳ ನಿಜವಾದ ಗುಣ ಯಾವುದು, ಅವುಗಳಿಂದ ಶಿಲ್ಪ ಕಡೆಯುವ ಬಗೆ ಹೇಗೆ? ಅವುಗಳ ವಾಣಿಜ್ಯ ಉದ್ಯಮ ಹೇಗೆ ಸಾಗುತ್ತಿದೆ? ಇವೇ ಮುಂತಾದ ವೈಜ್ಞಾನಿಕ ಅಂಶಗಳನ್ನು `ರತ್ನಗಳು’ ಕೃತಿಯಲ್ಲಿ ಚರ್ಚಿಸಲಾಗಿದೆ.
ರತ್ನ ಪ್ರಪಂಚದಲ್ಲಿ ವಜ್ರ, ಮಾಣಿಕ್ಯ, ನೀಲ, ಪಚ್ಚೆ, ಪುಷ್ಯರಾಗ, ವೈಡೂರ್ಯ, ಗೋಮೇದಕ, ಹವಳ, ಮುತ್ತು ಇವಷ್ಟೇ ರತ್ನಗಳಲ್ಲ. ಸುಮಾರು 2000 ಬಗೆಯ ಖನಿಜಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳಲ್ಲಿ ಕನಿಷ್ಠ 100 ಖನಿಜಗಳು ರತ್ನಗಳಾಗಿ ಬಳಕೆಯಲ್ಲಿವೆ. ಶ್ರೀಲಂಕಾ, ಬರ್ಮ, ಪಾಕಿಸ್ತಾನ, ಬ್ರೆಜಿಲ್, ಭಾರತ – ರತ್ನ ಖನಿಜಗಳ ಉದ್ಯಮಕ್ಕೆ ಹಿಂದಿನಿಂದಲೂ ಹೆಸರುವಾಸಿ. ರತ್ನಗಳ ಬಳಕೆ ಹೆಚ್ಚಾದಂತೆ ಕೃತಕ ರತ್ನಗಳನ್ನೂ ಸೃಷ್ಟಿಸಿ ವಂಚಿಸುವ ದಾಂಧಲೆಯೂ ನಡೆಯುತ್ತಿದೆ. ಈ ಕೃತಿಯಲ್ಲಿ ಈ ಎಲ್ಲ ಸಂಗತಿಗಳನ್ನೂ ವೈಜ್ಞಾನಿಕವಾಗಿ ಓದುಗರ ಮುಂದೆ ತೆರೆದಿಡಲಾಗಿದೆ.
©2024 Book Brahma Private Limited.