‘ಭೂಮಿಯ ವಯಸ್ಸು’ ಭೂವಿಜ್ಞಾನಿ, ಲೇಖಕರು ಟಿ.ಆರ್. ಅನಂತರಾಮು ವಿಜ್ಞಾನ ಲೇಖನಗಳ ಸಂಕಲನ. ಮನುಷ್ಯನೂ ಸೇರಿದಂತೆ ಪ್ರಾಣಿ, ಪಕ್ಷಿ, ಸಸ್ಯಗಳ ವಯಸ್ಸನ್ನು ಹೇಳುವುದು ಕಷ್ಟವೇನಲ್ಲ. ಆದರೆ, ನಮ್ಮ ಭೂಮಿಗೆ ಎಷ್ಟು ವಯಸ್ಸು ಎಂದು ಕೇಳಿದರೆ, ಇದೆಂಥ ಪ್ರಶ್ನೆ ಎನ್ನಿಸಬಹುದು. ಇಂಥ ಪ್ರಶ್ನೆಗೆ ಭೂವಿಜ್ಞಾನಿಗಳು ಮಾತ್ರ ಉತ್ತರಿಸಬಲ್ಲರು. ಪ್ರತಿಯೊಂದು ವಸ್ತುವಿಗೂ ಹುಟ್ಟು, ಸಾವು ಇರುತ್ತವೆ. ಭೂಮಿಯೂ ಇದಕ್ಕೆ ಹೊರತಲ್ಲ. ಭೂಮಿಯೂ ಸೇರಿದಂತೆ ನಮ್ಮ ಸೌರಮಂಡಲದ ಎಲ್ಲ ಕಾಯಗಳೂ ಒಂದೇ ಮೂಲದಿಂದ ಹುಟ್ಟಿವೆ ಎನ್ನುವುದು ವೈಜ್ಞಾನಿಕ ಸತ್ಯ.
ಈಗಿನ ಅಂದಾಜಿನಂತೆ ಇವೆಲ್ಲವೂ ಹುಟ್ಟಿ 460 ಕೋಟಿ ವರ್ಷಗಳಾಗಿವೆ. ಭೂಮಿಯ ವಯಸ್ಸನ್ನು ಕಂಡು ಹಿಡಿಯಲು ವಿಜ್ಞಾನಿಗಳು ಅನೇಕ ವಿಧಾನಗಳನ್ನು ಬಳಸಿದ್ದಾರೆ. ಇವುಗಳಲ್ಲಿ ಎಲ್ಲವುದಕ್ಕಿಂತ ಹೆಚ್ಚು ವೈಜ್ಞಾನಿಕವಾದ್ದು ಭೂಮಿಯ ಶಿಲೆಗಳಲ್ಲಿ ಅಡಗಿರುವ ವಿಕಿರಣಪಟು ಧಾತುಗಳು ಯಾವ ದರದಲ್ಲಿ ಕ್ಷಯಿಸಿ ಬೇರೆ ಯಾವ ಕೊನೆಯ ಉತ್ಪನ್ನವಾಗಿ ನಿಲ್ಲುತ್ತವೆ ಎನ್ನುವುದು. ಇದಕ್ಕೆ ವ್ಯಾಪಕವಾಗಿ ಯುರೇನಿಯಂ, ಸೀಸವಾಗಿ ಪರಿವರ್ತಿತವಾಗಲು ತೆಗೆದುಕೊಳ್ಳುವ ಸಮಯವನ್ನು ಆಧರಿಸಿ ಭೂಮಿ 460 ಕೋಟಿ ವರ್ಷದ ಪ್ರಾಯದ್ದೆಂದು ನಿರ್ಣಯ ಮಾಡಿದ್ದಾರೆ. `ಭೂಮಿಯ ವಯಸ್ಸು’ ಕೃತಿಯಲ್ಲಿ ಭೂಮಿ ಹುಟ್ಟಿದ ಕಾಲದಿಂದ ಯಾವ ಯಾವ ಬದಲಾವಣೆಗೆ ಒಳಗಾಯಿತು, ಜೊತೆಜೊತೆಗೆ ಜೀವಿಸಂಕುಲ ಉಗಮವಾಗಿ ವಿಕಾಸವಾಗಿದ್ದು ಹೇಗೆ ಎಂಬ ಅತ್ಯಂತ ಕ್ಲಿಷ್ಟ ಸಂಗತಿಗಳನ್ನು ಸರಳವಾಗಿ, ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ. ಓದುಗರಿಗೆ ಇದೊಂದು ಹೊಸ ಜಗತ್ತು.
©2024 Book Brahma Private Limited.