‘ಭೂಗರ್ಭ ಯಾತ್ರೆ’ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ. ಈಗ ಮಂಗಳ ಗ್ರಹದಲ್ಲಿ ಏನಿದೆ ಎಂದು ಕೇಳಿದರೆ ಉತ್ತರ ಹೇಳುವುದು ಕಷ್ಟವಲ್ಲ. ಶನಿ ಗ್ರಹಕ್ಕೆ ಎಷ್ಟು ಉಪಗ್ರಹಗಳಿವೆ ಎಂದರೆ ಅದಕ್ಕೂ ಉತ್ತರ ಸಿದ್ಧ. ವಾಯೇಜರ್ ಎಂಬ ನೌಕೆಗಳು ಸೌರಮಂಡಲವನ್ನೇ ದಾಟಿ ಆಚೆ ಹೋಗಿವೆ. ಇನ್ನು ನಮ್ಮ ಚಂದ್ರನ ಎರಡೂ ಮುಖಗಳ ಬಗ್ಗೆ ನಮಗೆ ಸ್ಪಷ್ಟವಾದ ಅರಿವಿದೆ. ಇಂಥ ಬಾಹ್ಯಾಕಾಶ ಯುಗದಲ್ಲೂ ಮನುಷ್ಯನಿಗೆ ಸಾಧ್ಯವಾಗದೆ ಇರುವುದೆಂದರೆ ಭೂಗರ್ಭ ಯಾನ.
ಭೂಗರ್ಭ ಯಾತ್ರೆ ಕುರಿತು ಜೂಲ್ ವನ್ರ್ಸ್ ಅತ್ಯಂತ ಕುತೂಹಲಕಾರಿ ವಿಜ್ಞಾನ ಕಥೆಯೊಂದನ್ನು ರಚಿಸಿದ್ದಾರೆ. ಈಗಲೂ ಅದನ್ನು ಓದುವುದೆಂದರೆ ಮಕ್ಕಳಿಗೂ ಖುಷಿಯೇ. ಆದರೆ ಮನುಷ್ಯ ಎಷ್ಟು ಆಳಕ್ಕೆ ಹೋಗಿರಲು ಸಾಧ್ಯ? ದಕ್ಷಿಣ ಆಫ್ರಿಕದ ಚಿನ್ನದ ಗಣಿ ಸುಮಾರು ನಾಲ್ಕು ಕಿ.ಮೀ, ಆಳವಿದೆ. ಈಗಲೂ ಅಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ. ಅದಕ್ಕಿಂತಲೂ ಹೆಚ್ಚು ಆಳಕ್ಕೆ ತೈಲದ ಬಾವಿಗಳು ಇಳಿದಿವೆ.
ರಷ್ಯಾದ ಕೋಲಾಹೋಲ್ ಎಂಬಲ್ಲಿ ಭೂಮಿಯನ್ನು ಕೊರೆದು 14 ಕಿ.ಮೀ. ಆಳ ಹೋಗಲು ಸಾಧ್ಯವಾಗಿದೆ ಅಷ್ಟೇ. ಹಾಗಾದರೆ, ಭೂಮಿಯ ಒಳರಚನೆ ಹೇಗಿದೆ? ಇದನ್ನು ಸಾಮನ್ಯವಾಗಿ ಕೋಳಿಮೊಟ್ಟೆಗೆ ಹೋಲಿಸುವುದುಂಟು. ಹೊರಚಿಪ್ಪು 20-70 ಕಿ.ಮಿ.ವರೆಗೆ, ಅಲ್ಲಿಂದ ಮುಂದಕ್ಕೆ ಮಧ್ಯಗೋಳ 2900ಕಿ.ಮೀ. ಆಳದವರೆಗೆ, ಇಲ್ಲಿಂದ ಮುಂದಕ್ಕೆ 3,470 ಕಿ.ಮೀ. ಆಳ ಹೋದರೆ ಅದು ಭೂಗರ್ಭ. ಇದನ್ನು ಯಾರೂ ಕಣ್ಣಾರೆ ಕಂಡಿಲ್ಲ. ಆದರೆ ನಿಷ್ಕರ್ಷಿಸಿದ್ದು ಹೇಗೆ?
ವಿಜ್ಞಾನಿಗಳು ಭೂಕಂಪನದ ಅಲೆಗಳು ಬೇರೆ ಬೇರೆ ಮಾಧ್ಯಮದಲ್ಲಿ ಭೂಮಿಯ ಒಳಗೆ ಸಾಗುವಾಗ ತೋರುವ ವೇಗದ ವ್ಯತ್ಯಾಸ ಆಧರಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಂದರೆ ಕಣ್ಣಿಂದ ನೋಡದೆಯೇ ಭೂಗರ್ಭ ಎಷ್ಟು ಆಳದಲ್ಲಿದೆ ಎಂದು ಹೇಳುವುದು ಎಷ್ಟು ಸೋಜಿಗ. `ಭೂಗರ್ಭ ಯಾತ್ರೆ’ ಕೃತಿ ನಿಮ್ಮ ವಿಸ್ಮಯಕ್ಕೆಲ್ಲ ವೈಜ್ಞಾನಿಕ ಉತ್ತರ ಕೊಡುತ್ತ ಹೋಗುತ್ತದೆ.
©2024 Book Brahma Private Limited.