ಭೂಮಿಯು ಕೋಟ್ಯಂತರ ವರ್ಷಗಳಿಂದ ಜೀವಿಗಳಿಗೆ ಆಸರೆಯಾಗಿದೆ. ಇಂತಹ ಭೂಮಿ ತನ್ನ ಗರ್ಭದೊಳಗೆ ಭೀಕರ ಬೆಂಕಿಯನ್ನು ಬಚ್ಚಿಟ್ಟುಕೊಂಡಿದೆ ಎನ್ನುವುದು ಮನುಷ್ಯನಿಗೆ ತಿಳಿದಿದೆಯೇ? ತಿಳಿದರೂ ಅದರ ಬಗ್ಗೆ ಎಷ್ಟರಮಟ್ಟಿಗೆ ಜಾಗೃತನಾಗಿದ್ದಾನೆ? ಭೂಮಿಯ ಮೇಲೆ ಹಕ್ಕು ಸಾಧಿಸುವ ಮನುಷ್ಯನಿಗೆ ಆ ಬೆಂಕಿಯ ಸಣ್ಣ ಕಲ್ಪನೆಯೂ ಇಲ್ಲ. ತನ್ನ ಒಡಲಲ್ಲಿರುವ ಬೆಂಕಿಯನ್ನು ಒಮ್ಮೆ ಹೊರ ತಳ್ಳಿದರೂ ಸಾಕು, ಇಲ್ಲಿ ಯಾವ ಜೀವಿಯೂ ಉಳಿಯಲಾರದು. ಭೂಮಿಯ ಸಹನೆಯಿಂದಲೇ ಜೀವರಾಶಿಗಳು ಬದುಕಿದೆ. ವೆಸೋವಿಯಸ್, ಕ್ರಟೋವ, ಹೆಲೆನ್ಸ್, ಇಯಾಕುಟ್ಸ್, ಕಟ್ಟಾ, ಹೆಕ್ಸಾ, ಪಿನತುಬೋ, ಮೌನಲೋಅ ಇವೆಲ್ಲ ವಿಚಿತ್ರ ಹೆಸರಿನಂತೆ ಕೇಳುತ್ತದೆ. ಆದರೆ ನಮ್ಮ ಪಾದದಡಿಯಲ್ಲಿ ಇವುಗಳು ಬುಸುಗುಡುತ್ತಾ ಅಸ್ತಿತ್ವದಲ್ಲಿವೆ. ಭೂಮಿಯಲ್ಲಿ ಅಡಗಿರುವ ನಿಸರ್ಗದ ಟೈ ಬಾಂಬುಗಳಿವು. ಬೆಂಕಿಯ ಕುಲುಮೆಗಳು, ಭೂಮಿಯ ಅಂತರಾಳ ವೀಕ್ಷಿಸಲು ನಿಸರ್ಗವೇ ಕೊರೆದಿರುವ ಕಿಂಡಿಗಳು ಎನ್ನಬಹುದು. ಇದನ್ನೇ ನಾವು ಜ್ವಾಲಾಮುಖಿ ಎಂದು ಕರೆಯುತ್ತಾ ಬಂದಿದ್ದೇವೆ. ಈ ಜ್ವಾಲಾಮುಖಿಯ ಅಗಾಧತೆಯನ್ನು ಪರಿಚಯಿಸುವ ಕೆಲಸವನ್ನು ಟಿ. ಆರ್. ಅನಂತರಾಮು ಅವರು ಬರೆದಿರುವ 'ಭೂಮಿಯ ಟೈಂ ಬಾಂಟ್-ಜ್ವಾಲಾಮುಖಿ' ಕೃತಿ ಮಾಡುತ್ತದೆ.
(ಹೊಸತು, ನವೆಂಬರ್ 2013, ಪುಸ್ತಕದ ಪರಿಚಯ)
ನಾವು ವಾಸಿಸುವ ಭೂಮಿ ನಮಗೆ ಬದುಕನ್ನು ಮಾತ್ರ ನೀಡಿದೆಯೆಂದು ನಾವು ಸಂಭ್ರಮಿಸುವುದೇನೂ ಬೇಡ. ಅದು ಪ್ರಕೃತಿಯ ಇನ್ನೊಂದು ಕರಾಳ ಮುಖವನ್ನೂ ಹೊಂದಿದೆ. ಬೆಂಕಿ-ಬಿರುಗಾಳಿ-ನೆರೆ-ಭೂಕಂಪಗಳಂತಹ ಅನಾಹುತಗಳೆಲ್ಲ ಪ್ರಕೃತಿಯ ವಿಕೋಪಗಳು, ಜ್ವಾಲಾಮುಖಿಗಳೇನೂ ಕಡಿಮೆ ಗಂಡಾಂತರ ತರುವವೆಂದು ತಿಳಿಯಬೇಡಿ. ಭೂಮಿಯೊಳಗಡೆಯೇ ರೂಪುಗೊಂಡು ಕುಲುಮೆಯಂತೆ ಕುದಿದು ಒತ್ತಡದಿಂದಾಗಿ ಬೂದಿ-ಬೆಂಕಿ-ಕಲ್ಲು-ಲಾವಾಗಳನ್ನು ಅಗ್ನಿಪರ್ವತಗಳ ಮುಖಗಳಿಂದ ವಾಯುಗೋಳಕ್ಕೆ ಚಿಲುಮೆಯಂತೆ ಚಿಮ್ಮುವುದನ್ನೇ ಜ್ವಾಲಾಮುಖಿ ಎಂದು ಹೇಳಲಾಗಿದೆ. ಇವುಗಳದ್ದೇ ಒಂದು ರೋಚಕ ಕಥೆ. ನೋಟಕ್ಕೆ ರಮ್ಯಾದ್ಭುತ ದೃಶ್ಯ, ಅನಾಹುತಗಳೋ ಅಪಾರ. ಇವು ಲಕ್ಷಾಂತರ - ಕೋಟ್ಯಾಂತರ ವರ್ಷಗಳ ಹಿಂದಿನಿಂದಲೂ ಕ್ರಿಯಾಶಾಲಿ ಯಾಗಿದ್ದುವೆಂದು ಅಂದಾಜಿಸಲಾಗಿದೆ. ಇವು ರೂಪುಗೊಳ್ಳುವ ಬಗೆ, ಸ್ವರೂಪ, ಬೆಂಕಿ ಚೆಂಡುಗಳನ್ನು ಉಗುಳಲು ಕಾರಣವನ್ನೆಲ್ಲ ಪತ್ತೆ ಮಾಡಿ ಭೂವಿಜ್ಞಾನಿಗಳು ನಮ್ಮ ಮುಂದಿರಿಸಿದ್ದಾರೆ. ಬಹಳ ಸಂಶೋಧನೆಗಳು ನಡೆದು ಇಂದು ಅಪಾಯದಿಂದ ನಗರಗಳನ್ನೂ ಜನತೆಯನ್ನೂ ರಕ್ಷಿಸುವತ್ತ ಹೆಜ್ಜೆ ಇಡಲಾಗಿದೆ. ಹುಲುಮಾನವನೆಂದು ಎಷ್ಟೇ ಹಗುರವಾಗಿ ಹಂಗಿಸಿದರೂ ಆತ ಇಂಥ ಅದ್ಭುತಗಳ ಬೇರನ್ನೇ ತಿಳಿದುಕೊಂಡಿದ್ದಾನೆ. ಇದೀಗ ಪ್ರಪಂಚದಾದ್ಯಂತ ಜ್ವಾಲಾಮುಖಿಗಳು ನಡೆಸಿದ ಹಾವಳಿಗಳ ಬಗ್ಗೆ ತಿಳಿಯೋಣ.
©2024 Book Brahma Private Limited.