ಭೂವಿಜ್ಞಾನಿ, ಲೇಖಕ ಅನಂತರಾಮು ಅವರ ಕೃತಿ ‘ಜ್ವಾಲಾಮುಖಿ’. ಜಾವಾ ಮತ್ತು ಸುಮಾತ್ರಗಳ ನಡುವೆ ಇರುವ ಸುಂಡಾ ಜಲಸಂಧಿಯಲ್ಲಿ ಕ್ರಕಟೋವ ಎನ್ನುವ ಪುಟ್ಟ ದ್ವೀಪ 1883ರಲ್ಲಿ ಸ್ಫೋಟಿಸಿದಾಗ, ಆ ಶಬ್ದ 4,800 ಕಿ.ಮೀ.ದೂರದವರೆಗೆ ಕೇಳಿಸಿ ಜಗತ್ತೇ ದಿಗಿಲುಗೊಂಡಿತ್ತು. ಆ ದ್ವೀಪ ಜ್ವಾಲಾಮುಖಿಯಾಗಿ ಕೆರಳಿತ್ತು. ಸುನಾಮಿ ಎದ್ದು ಒಂದೇ ದಿನದಲ್ಲಿ 36,000 ಜನ ಸತ್ತರು. ಜಾವಾದ ಬಳಿ ಸಾಗರದ ಅಲೆಗಳು 40 ಮೀ. ಎತ್ತರಕ್ಕೆ ಏರಿದ್ದವು. ತೀರದಲ್ಲಿದ್ದ ನೌಕೆಗಳನ್ನು ದ್ವೀಪದ ಮಧ್ಯಕ್ಕೆ ಬಿಸುಟಿದ್ದವು. ನಾಲ್ಕು ದಶಲಕ್ಷ ಚ.ಕಿ.ಮೀ. ನೆಲದ ತುಂಬ ಬೂದಿ ಹರಡಿತ್ತು. ಆಗ ಎದ್ದ ಸಣ್ಣ ಧೂಳಿನ ಕಣ ಭೂಗೋಳವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿತ್ತು. ನಿಸರ್ಗದ ವಿಕೋಪಗಳಲ್ಲಿ ಜ್ವಾಲಾಮುಖಿಗಳು ಮನುಷ್ಯನ ಬದುಕನ್ನು ಮೂರಾಬಟ್ಟೆ ಮಾಡಿವೆ. ಭೂಮಿಯೊಳಗಿನ ತಾಪ ಬಿಡುಗಡೆ ಬಯಸುತ್ತದೆ, ಕಲ್ಲನ್ನು ಕರಗಿಸುತ್ತದೆ. ಲಾವಾರಸದ ಮೂಲಕ ಹೊರಹಾಕುತ್ತದೆ.
ಇಟಲಿಯ ವೆಸೂವಿಯಸ್ ಜ್ವಾಲಾಮುಖಿ ಕ್ರಿ.ಶ. 79ರಲ್ಲಿ ಕೆರಳಿ ಬುಡದಲ್ಲಿದ್ದ ಇಡೀ ಪಾಂಪೆ ನಗರವನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತು. ಈಗ ಅಲ್ಲಿನ ಅವಶೇಷಗಳು ಅಂದಿನ ದಾರುಣ ಸ್ಥಿತಿಗೆ ಕನ್ನಡಿಯಾಗಿವೆ. `ಜ್ವಾಲಾಮುಖಿ’ ಕೃತಿಯಲ್ಲಿ ಭೂಮಿಯ ಇತಿಹಾಸದಲ್ಲಿ ಏನೇನು ಘಟಿಸಿವೆ, ಜ್ವಾಲಾಮುಖಿಗಳು ಏಕೆ ನಿರ್ದಿಷ್ಟ ಜಾಗದಲ್ಲೇ ಕೆರಳುತ್ತವೆ, ಅವುಗಳಿಂದ ಭೂಮಿಯ ಒಳರಚನೆಯನ್ನು ಅರಿಯಲು ಸಾಧ್ಯವೆ? ಚಿನ್ನವೂ ಸೇರಿದಂತೆ ನಾವು ಗಣಿ ಮಾಡುತ್ತಿರುವ ಖನಿಜ ಸಂಪನ್ಮೂಲವು ಜ್ವಾಲಾಮುಖಿಗಳು ಹೊತ್ತು ತಂದವೆ? ಇಂಥ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ.
©2024 Book Brahma Private Limited.