ಅಗ್ನಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣ ಬರಹದ ಈ ಸಂಕಲನದಲ್ಲಿ 25 ಲೇಖನಗಳಿವೆ. ಕೃತಿಯ ಬೆನ್ನುಡಿಯಲ್ಲಿ ಲೇಖಕ ವಸುಧೇಂದ್ರ “ಸುನಂದಾಳದು ಅಪರೂಪದ 'ಸ್ತ್ರೀ ಬರಹ', ಯಾವುದೇ ಹಟಮಾರಿತನ, ವ್ಯಗ್ರತೆ, ದ್ವೇಷಗಳಿಲ್ಲದೇ ಕೇವಲ ಸ್ತ್ರೀ ಸಹಜವಾದ ಪ್ರೀತಿ, ಅಂತಃಕರಣೆ, ಮೃದುತ್ವಗಳಿಂದ ಬದುಕಿನ ಚಿಕ್ಕ ಪುಟ್ಟ ಸಂಗತಿಗಳನ್ನು ಸಹಜವಾಗಿ, ಹಿತವಾಗಿ, ಪ್ರಾಮಾಣಿಕವಾಗಿ ಹೇಳುವ ಈ ಲೇಖನಗಳು ಅಮ್ಮನ ಜೋಗುಳದಷ್ಟು ಆಪ್ತವಾಗಿವೆ. ಜಲಪಾತದ ಧಾರೆಯಾಗಲೀ, ರೇಣುಕಾ ಚಿಕನ್ ಮಾರ್ಟ್ ಆಗಲೀ, ಕಟ್ಟೆಯ ಮೇಲೆ ಆಡಿಕೊಳ್ಳುತ್ತಿರುವ ಕೆಲಸದವಳ ಕಂದನಾಗಲೀ - ಎಲ್ಲ ಸಂಗತಿಗಳನ್ನೂ ಮಗುವಿನ ಮುಗ್ಧತೆಯಲ್ಲಿ ನೋಡಿ, ಆ ಭಾವವನ್ನು ನಮಗೂ ರವಾನಿಸುವ ಈ ಬರಹಗಳಲ್ಲಿ ಕಹಿಯಿಲ್ಲ, ಕೊಳೆಯಿಲ್ಲ, ವಂಚನೆಯಿಲ್ಲ, ಒಂದು ವಾಕ್ಯದಲ್ಲಿ ಹಲವು ಧ್ವನಿಗಳನ್ನು ಹೊಮ್ಮಿಸುವ ಸುನಂದಾ, ಕಡಲಿನ ಬದುಕಿನ ಬಗ್ಗೆ ಬರೆಯುತ್ತಲೇ ಹಗೂರಕ್ಕೆ ಅದನ್ನು ಬದುಕಿನ ಕಡಲಿನ ಲೇಖನವನ್ನಾಗಿ ಮಾಡುವ ಜಾಣೆ. ನಗಣ್ಯವೆಂದುಕೊಂಡ ಸಂಗತಿಗಳಲ್ಲೇ ದೈವದರ್ಶನ ಮಾಡಿಸುವ ಸುನಂದಾಳ ಬರವಣಿಗೆ ಆರೋಗ್ಯಪೂರ್ಣವಾದದ್ದು, ಆದ್ದರಿಂದಲೇ ಬಹುಕಾಲ ಜೀವಿಸುವಂಥಹದ್ದು. ಬದುಕಿನ ಸಿಹಿ ಕಹಿಗಳೆರಡನ್ನೂ ಪ್ರೀತಿಯಿಂದಲೇ ದಾಖಲಿಸುವ ಈ ಅಪರೂಪದ ಪುಟ್ಟ ಬರಹಗಳು ನಮ್ಮ ಬದುಕನ್ನು ಹೆಚ್ಚು ಸಹ್ಯವೆನ್ನಿಸುವಂತೆ ಮಾಡುತ್ತವೆ. ನಮ್ಮ ಸನಿಹದವರನ್ನು ಪ್ರೀತಿಯಿಂದ ಕಾಣುವಂತೆ ಮಾಡುತ್ತವೆ” ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.