ಅಧಿಕಾರ ಮತ್ತು ಅಧೀನತೆ ಕೇಟ್ ಮಿಲೆಟ್ ವಿಚಾರಗಳು ಶ್ರೀಮತಿ ಹೆಚ್. ಎಸ್ ಅವರ ಸ್ತ್ರೀವಾದಿ ಚಿಂತನೆಗಳ ಕೃತಿಯಾಗಿದೆ. ಬೇರೆ ಭಾಷೆಯಿಂದ ಕನ್ನಡಕ್ಕೆ ಭಾಷಾಂತರವಾಗಿ ಬರುವ ಕೃತಿಗಳು ಬೆಳಕಿಂಡಿಗಳು ಇದ್ದಂತೆ. ಅವು ನಮಗೆ ಅನ್ಯಭಾಷೆಯ ಜಗತ್ತಿನೊಳಗೆ ಇಣುಕಿ ನೋಡಲು ಅವಕಾಶ ಒದಗಿಸುತ್ತವೆ. ಅವುಗಳ ಓದಿನಿಂದ ದಕ್ಕುವ ಒಳನೋಟಗಳು ನಮ್ಮ ಚಿಂತನೆಗಳನ್ನು ಹರಿತಗೊಳಿಸುತ್ತವೆ. ಒಳ್ಳೆಯ ಅನುವಾದಗಳು ನಮ್ಮ ಸಂವೇದನೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತವೆ. ತೌಲನಿಕ ಅಧ್ಯಯನಗಳಿಗೆ ದಾರಿ ಮಾಡಿಕೊಡುತ್ತವೆ. ಪ್ರಮುಖ ಸ್ತ್ರೀವಾದಿ ಚಿಂತನೆಗಳನ್ನು ಕನ್ನಡಕ್ಕೆ ತರಬೇಕಾದ ಅಗತ್ಯ ಬಹಳ ಇದೆ. ಇದರಲ್ಲಿ ದೇಶಿ, ವಿದೇಶಿ ಎಂಬ ಕಾರಣಗಳು ಅಡ್ಡಿಯಾಗಬಾರದು ಎನಿಸುತ್ತದೆ. ಏಕೆಂದರೆ, ಸದ್ಯ ನಾವು ಇನ್ನೂವರೆಗೂ ಸ್ತ್ರೀವಾದಿ ಚಿಂತನೆಗಳ ಪರಿಚಯವನ್ನೂ ಸಮಗ್ರ ರೂಪದಲ್ಲಿ ಮಾಡಿಕೊಂಡಿದ್ದೇವೆ ಎಂದಂತೂ ತೋರುವುದಿಲ್ಲ. ಈ ಮೊದಲ ಹಂತದ ನಂತರ ಆ ಎಲ್ಲ ಚಿಂತನೆಗಳ ತೌಲನಿಕ ಅಧ್ಯಯನದ ಮಾತು. ಈ ಮಾತಿರಲಿ, ಈ ಮೊದಲ ಹಂತದ ಕೆಲಸವನ್ನು ಕೂಡಾ ಒಂದು ವೇಳಾ ಪಟ್ಟಿಯ ಮೇರೆಗೆ ಯಾರೋ ಒಂದಿಬ್ಬರು ಪೂರೈಸಬಹುದು ಎಂದಲ್ಲ. ಇದು ನಿರಂತರವಾಗಿ ಜಾರಿಯಲ್ಲಿ ಇರಬೇಕಾದ ಒಂದು ಸಮುದಾಯದ ಕೆಲಸ. ನಾನು ಈ ದಿಸೆಯಲ್ಲಿ ಒಂದಿಷ್ಟು ಸಾಗಲು ಮೊದಲಿಟ್ಟಿದ್ದೇನೆ ಅಷ್ಟೇ. ಇದರ ಮುಂದುವರಿಕೆಯಾಗಿ ಕೇಟ್ ಮಿಲೆಟ್‌ಳ, Sexual Politics ಕೃತಿಯನ್ನು ಕನ್ನಡಕ್ಕೆ ತರಲು ಪ್ರಯತ್ನಿಸಿದ್ದೇನೆ. ಸೆಕ್ಸುಯಲ್ ಪಾಲಿಟಿಕ್ಸ್ ಕೃತಿಯ ಕನ್ನಡ ನಿರೂಪಣೆಯನ್ನು ನಾನು 'ಅಧಿಕಾರ ಮತ್ತು ಅಧೀನತೆ' ಎಂದು ಕರೆದಿದ್ದೇನೆ. ಒಳಪುಟಗಳಲ್ಲಿ ಈ ಕುರಿತು ವಿವರಣೆಯನ್ನು ಕೊಡಲಾಗಿದೆ ಎಂದು ಪುಸ್ತಕದ ಲೇಖಕರ ನುಡಿಯಲ್ಲಿ ಶ್ರೀಮತಿ ಹೆಚ್. ಎಸ್ ಅವರು ತಿಳಿಸಿದ್ದಾರೆ.
©2024 Book Brahma Private Limited.