ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಭಾರತದ ಬೃಹತ್ ಮಹಿಳಾ ಸಮುದಾಯ ಕುಟುಂಬವಷ್ಟೇ ಹೆಣ್ಣಿನ ಜಗತ್ತು ಎಂಬ ಮಿಥ್ಯೆಯನ್ನು ಭೇದಿಸಿತು. ದೇಶ ವಿಮೋಚನೆಯ ಹೋರಾಟಕ್ಕೆ ಮಹಿಳಾ ಸಮುದಾಯವನ್ನು ಒಳಕ್ಕೆ ಸೇರಿಸಿಕೊಂಡ ಪುರುಷ ಲೋಕ, ತನ್ನ ಉದ್ದೇಶ ಸಾಧನೆಯ ನಂತರ ಒಮ್ಮೆಗೆ ಅವರನ್ನು ಕೈಬಿಟ್ಟಿತು.
ಕಳೆದ ಶತಮಾನದಿಂದ ಪ್ರವರ್ಧಮಾನಕ್ಕೆ ಬಂದ ಮಹಿಳಾ ಚಳವಳಿ ಮನೆ-ಜಗತ್ತು ಎರಡರಲ್ಲೂ ಹಿತ ಕಾಣಬಯಸುವ ಆಕಾಂಕ್ಷೆ ಹೊತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಪರಿಣಾಮವಾಗಿ, ಮಹಿಳಾ ಮೀಸಲಾತಿ ಮಸೂದೆ ಇಂದು ನಮ್ಮ ಮುಂದಿನ ವಾಸ್ತವವಾಗಿದೆ. 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಮಸೂದೆ ನಮ್ಮ ಸಮಾಜದಲ್ಲಿನ ಪುರುಷಾಹಂಕಾರದ ಪ್ರತಿಷ್ಠಾಪನೆಯ ಸಂಕೇತವಾಗಿದೆ. ಅಧಿಕಾರ ಕೇಂದ್ರವಾದ ಶಾಸನ ಸಭೆ ಮತ್ತು ಸಂಸತ್ತುಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವ ಅವಕಾಶ ಕಲ್ಪಿಸಿ, ಮಸೂದೆಗೆ ಅಂಗೀಕಾರ ಮುದ್ರೆ ಹಾಕಲೇಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಯ ಬಗೆಗೆ ಮನದಟ್ಟು ಮಾಡಿಕೊಡುತ್ತಾ, ರಾಜಕೀಯ ಅಧಿಕಾರದ ವ್ಯವಸ್ಥೆಯ ಹೊರಗಿರುವವರನ್ನು ಒಳಗೆ ಕೈಹಿಡಿದು ತರುವ ಒಂದು ಚಿಕ್ಕ ಪ್ರಯತ್ನ ಈ ಪುಸ್ತಕ.
(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)
ನಿಷ್ಠ ದೃಷ್ಟಿಕೋನ ಮತ್ತು ಪ್ರಖರ ರಾಜಕೀಯ ಪ್ರಜ್ಞೆ ಇವೆರಡರ ಸಂಗಮದಿಂದ ಹುಟ್ಟಿರುವ ಮಹತ್ವದ ಕೃತಿಯಿದು. ಒಟ್ಟು ಹತ್ತು ಲೇಖನಗಳು ಇಲ್ಲಿದ್ದು ಒಂದು ಮತ್ತೊಂದರ ಮುಂದುವರೆದ ಭಾಗಗಳು ಎಂಬಂತಿವೆ. ಭಾರತದಲ್ಲಿ ವಸಾಹತುಶಾಹಿ ಸಂದರ್ಭದಲ್ಲಿ ಮಹಿಳಾ ಹೋರಾಟಗಳು ಹೇಗೆ ಆರಂಭಗೊಂಡವು ಎಂಬುದನ್ನೂ, ಆ ಸಂದರ್ಭದಲ್ಲಿ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳು ಯಾವ ಬಗೆಯವು ಎಂಬುದನ್ನೂ ಹೋರಾಟಗಾರ್ತಿಯರು ಆ ಕಾಲಕ್ಕೆ ಪುರುಷ ಪ್ರಧಾನ ಸಮಾಜದ ಮುಂದೆ ಇಟ್ಟ ಬೇಡಿಕೆಗಳು ಯಾವುವು ಎಂಬುದನ್ನೂ, ತಮ್ಮ ಬೇಡಿಕೆಗಳು ಯಾವುದು ಎಂಬುದನ್ನೂ, ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಹಿಳೆಯರು ಯಾವ ರೀತಿಯಲ್ಲಿ ಸಾಂಘಿಕ ಹೋರಾಟಗಳನ್ನು ನಡೆಸಬೇಕಾಯಿತು. ಎಂಬುದನ್ನೂ ಹಂತ ಹಂತವಾಗಿ ಈ ಕೃತಿಯಲ್ಲಿ ಡಾ|| ಎನ್. ಗಾಯತ್ರಿ ವಿವರಿಸಿದ್ದಾರೆ. ಹೋರಾಟಗಳನ್ನು ದಾಖಲಿಸುವುದು ಮತ್ತು ಆ ಕುರಿತು ಕೇವಲ ಮಾಹಿತಿ ನೀಡುವುದಷ್ಟೇ ಈ ಕೃತಿಯ ಉದ್ದೇಶವಲ್ಲ ಓದುಗರನ್ನು ಚಿಂತನೆಗೆ ಹಚ್ಚುವ, ಓದುಗರ ಆಲೋಚನಾ ವಿಧಾನವನ್ನು ದಾಖಲಿಸುವ ದಟ್ಟ ರಾಜಕೀಯ ಪ್ರಜ್ಞೆಯನ್ನು ತುಂಬುವ ಕೃತಿಯಿದು. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದದ್ದನ್ನು ಗ್ರಾಮಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಮಹಿಳೆಯರ ಮೀಸಲಾತಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತಾರೆ. ಅನಾದಿಕಾಲದಿಂದಲೂ ಪುರುಷ ಪ್ರಧಾನ ಸಮಾಜದಿಂದ ಶೋಷಣೆಗೆ ಒಳಗಾಗಿರುವ ಸ್ತ್ರೀ ಸಮುದಾಯಗಳು ಪ್ರಧಾನವಾಹಿನಿಗೆ ಬರಬೇಕಾದರೆ, ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳುವುದು ಬಿಟ್ಟು ಬೇರೆ ದಾರಿಯೇ ಇಲ್ಲವೆನ್ನುತ್ತಾರೆ.
©2024 Book Brahma Private Limited.