ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದು, ಬೇಂದ್ರೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಕೃತಿ ರಚಿಸಿದ್ದಾರೆ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರು. ಸುಮಾರು 180ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಸುಮಾರು 200ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ
ಕೃತಿಗಳು : ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಆಚಾರ್ಯ ಚಾಣಕ್ಯ, ತಿರುಪ್ಪಾವೈ, ತಿರುಮಲೈ, ಸ್ತೋತ್ರರತ್ನಂ, ವಿಶಿಷ್ಟಾದ್ವೈತ ಮೂಲ ಪರಿಕಲ್ಪನೆಗಳು, ಮಹಾತ್ಮಗಾಂಧಿಯನ್ನು ಕೊಂದಿದ್ದು ಯಾರು? ಸುಭಾಷರ ಕಣ್ಮರೆ, ವಾಲ್ಮೀಕಿ ಯಾರು?, ಮತಾಂತರ, ಶ್ರೀ ರಾಮಜನ್ಮಭೂಮಿ ತೀರ್ಪು, ಮಹಾಮಾತೆ ಕುಂತಿ ಕಣ್ತೆರೆದಾಗ, ದೇವಕಿಯ ಚಿಂತನೆಗಳು, ಮಹಾ ಪ್ರಸ್ಥಾನ, ಕೃಷ್ಣಾವತಾರದ ಕೊನೆಯ ಗಳಿಗೆಗಳು-ಈ ಕೃತಿಯು ಅಪಾರ ಸಂಖ್ಯೆಯಲ್ಲಿ ಓದುಗರನ್ನು ಸೆಳೆದಿದ್ದು, ಸುಮಾರು 20000ಕ್ಕೂ ಅಧಿಕ ಕೃತಿಗಳು ಮಾರಾಟವಾಗಿವೆ. ‘ಶ್ರೀ ರಾಮಾವತಾರ ಸಂಪೂರ್ಣವಾದಾಗ’ ಕೃತಿಯು ಸಹ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಶ್ರೀರಾಮಾಯಾಣದ ಮಹಾಪ್ರಸಂಗಗಳು, ಶ್ರೀಮದ್ ರಾಮಾಯಣದ ಮಹಾಪ್ರಸಂಗಗಳು, ವೇದ ಸಂಸ್ಕೃತಿಯನ್ನು 10 ಕೃತಿಗಳಲ್ಲಿ ಪರಿಚಯಿಸಿದ್ದಾರೆ. ರಾಮಾಯಣ, ರಾಮಕಥಾ ಸಾರ, ರಾಮಾಯಣ ಪಾತ್ರ ಪರಿಚಯ, ರಾಮಾಯಣ ಸಾಹಶ್ರೀ, ಮಹಾಭಾರತ ಪಾತ್ರ ಪರಿಚಯ, ವನದಲ್ಲಿ ಪಾಂಡವರು, ರಾಜಸೂಯದ ರಾಜಕೀಯ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಆ ಹದಿನೆಂಟು ದಿನಗಳು (2 ಬೃಹತ್ ಸಂಪುಟಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡಿವೆ) ಗುರುದೇವ ರಾನಡೆ ಅವರ ಉಪನ್ಯಾಸ ಸರಣಿ ಮಾಲಿಕೆಯ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ, ವನಪರ್ವ, ವಿರಾಟಪರ್ವ ಸೇರಿದಂತೆ ಮಹಾಭಾರತ, ರಾಮಾಯಣ, ವೇದ ಸಂಸ್ಕೃತಿ, ಸನಾತನ ಪರಂಪರೆಯ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಸಮಾಕಾಲೀನ ವಿಷಯಗಳಿಗೂ ಅವರು ಸ್ಪಂದಿಸಿ ಬರೆದ ಹಲವಾರು ಲೇಖನಗಳು ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಶಸ್ತಿ-ಪುರಸ್ಕಾರಗಳು ರಾಮಾಯಣ, ಭಾಗವತ, ಮಹಾಭಾರತ, ವೇದಗಳು, ಭಗವದ್ಗೀತೆ, ಹರಿದಾಸ ಸಾಹಿತ್ಯ ಪ್ರಸಾರಕ್ಕಾಗಿ ಪ್ರೊ.,ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಜರುಗಿದ ( 2016), ವಿಶ್ವ ರಾಮಾಯಣ ಸಮ್ಮೇಳನದಲ್ಲಿ ಇವರಿಗೆ ‘ವಾಲ್ಮೀಕಿ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಬಿರುದು ಸಂದಿವೆ. ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ರಾಮಾಯಣವನ್ನು ಆಧಿಕೃತವಾಗಿ ಉಪನ್ಯಾಸ ನೀಡುವ ವಿದ್ವತ್ ಗಾಗಿ ಸಾಹಿತ್ಯಾಸಕ್ತರು ಅವರಿಗೆ ‘ರಾಮಾಯಣಾಚಾರ್ಯರು’ ಎಂದೇ ಕರೆಯುತ್ತಾರೆ.