‘ಯೋಗಾಮೃತಶತಕಂ’ ಕೃತಿಯನ್ನು ಎರ್ತೂರು ಶಾಂತಿರಾಜಶಾಸ್ತ್ರಿಗಳು ಹಾಗೂ ಹೆಚ್.ಆರ್. ರಂಗಸ್ವಾಮಯ್ಯಂಗಾರ್ ಅವರು ಸಂಪಾದಿಸಿದ್ದಾರೆ. ಒಂದುನೂರು ಆಣಿಮುತ್ತುಗಳಿರುವ ಯೋಗಾಮೃತಶತಕಂ ಪುಸ್ತಕದಲ್ಲಿ ಸಂಪಾದಕರು ಶ್ರಮವಹಿಸಿ ಎಲ್ಲರಿಗೂ ಅರ್ಥವಾಗುವಂತೆ ಪದ್ಯಗಳಿಗೆ ತಾತ್ಪರ್ಯವನ್ನು ಬರೆದಿದ್ದಾರೆ. ಚಿತ್ತವೆಂಬ ರತ್ನವನ್ನು ಯಾವ ವ್ಯಾಸಂಗದಲ್ಲಿಯೂ ಹರಿಯಿಸದೆ ಜಿನವಚನಾಭ್ಯಾಸದಲ್ಲಿಯೂ, ಆತ್ಮತತ್ತ್ವಾಭ್ಯಾಸದಲ್ಲಿಯೂ ಇರಿಸಲು ತಿಳಿದವನೇ ಧನ್ಯನು ಎಂಬುದನ್ನು ಪ್ರತಿಯೊಬ್ಬರೂ ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು. ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿರಬೇಕು. ಸಮುದ್ರದಲ್ಲಿ ಅಲೆಗಳು ಏಳುವಂತೆಯೇ ಮನಸ್ಸಿನಲ್ಲಿಯೂ ಸಂಸಾರಬಂಧಕ್ಕೆ ಕಾರಣವಾಗುವ ಭಾವನೆಗಳು ಮೇಲೇಳುತ್ತಲೇ ಇರುತ್ತವೆ. ಬಂಧಕ್ಕೆ ಕಾರಣವಾಗುವ ಭಾವನೆಗಳಿಂದ ದೂರವಾಗಿ ಶುದ್ಧಾತ್ಮನ ಚಿಂತನೆಯಲ್ಲಿಯೇ ಇದ್ದು ಮೋಕ್ಷಪ್ರಾಪ್ತಿಗೆ ಪ್ರಯತ್ನಿಸುವುದೇ ಜೀವನದ ಗುರಿ ಎಂಬುದನ್ನು ಮರೆಯಬಾರದು. ಅಜ್ಞಾತ ಕವಿಯಿಂದ ರಚಿತವಾದ ಯೋಗಾಮೃತಶತಕದ ಒಂದೊಂದು ಪದ್ಯಗಳೂ ಗಹನವಾದ ತತ್ತ್ವಗಳನ್ನು ಸುಲಭ ಶೈಲಿಯಲ್ಲಿ ತಿಳಿಸುವಂತಿವೆ, ಓದುಗರನ್ನು ತತ್ತ್ವಚಿಂತನೆಗೆ ಪ್ರೇರೇಪಿಸುತ್ತವೆ.
©2024 Book Brahma Private Limited.