‘ಬಾಹುಬಲಿ ಕವಿ ವಿರಚಿತ ನಾಗಕುಮಾರಚರಿತಂ’ ಕೃತಿಯನ್ನು ಪಂಡಿತ ಎರ್ತೂರು ಶಾಂತಿರಾಜಶಾಸ್ತ್ರಿಗಳು ಸಂಪಾದಿಸಿದ್ದಾರೆ. ಈ ಭೂಮಂಡಲದಲ್ಲಿ ಅನೇಕಮತಗಳು, ಒಂದೆರಡು ಮುಂಗಾರು ಮಳೆಗಳಾದನಂತರ ಭೂಮಿಯಿಂದೇಳುವ ರೆಕ್ಕೆಯ ಹುಳಗಳಂತೆ, ಹುಟ್ಟಿ ಬೆಳೆದು ಅನಾದ್ಯನಂತಕಾಲಗಳಲ್ಲಿ ಎಡೆಬಿಡದೆ ತಿರುಗುತ್ತಿರುವ ಕಾಲಚಕ್ರಕ್ಕೆ ಸಿಲುಕಿ ಸ್ವಲ್ಪ ಕಾಲದಲ್ಲೇ ತಮ್ಮ ಜೀವನ ಲೀಲೆಯನ್ನು ಕೊನೆಗಾಣಿಸಿದುವು. ಆ ಕಾಲಚಕ್ರದ ಹೊಡೆತಕ್ಕೂ ಪಶ್ಚಿಮಜಂಝಾಮಾರುತಕ್ಕೂ ಸಿಲುಕಿ ಹೋರಾಡಿ ಕುಟುಕು ಜೀವವನ್ನು ಉಳಿಸಿಕೊಂಡಿರುವ ಜೈನವೈದಿಕಾದಿ ಸನಾತನಮತಗಳ ಗ್ರಂಥಗಳಲ್ಲಿರುವ ಪೂರ್ವಪಕ್ಷಸಿದ್ಧಾಂತ- ಖಂಡನಮಂಡನಪ್ರಕರಗಣಗಳಿಂದ ಆ ಕೆಲವು ನಾಮಾವಶಿಷ್ಟವಾದ ಮತಗಳಿದ್ದುವೆಂದು ತಿಳಿದುಬರುವುದಲ್ಲದೆ ಈಗ ಆ ಮತಗಳಾಗಲಿ ಆ ಮತೀಯರಾಗಲಿ ದೃಷ್ಟಿಗೋಚರರಾಗುವುದಿಲ್ಲ. ಹೀಗಾಗಲು ಆ ಮತಗಳಲ್ಲಿ ಅಪಾರವಾದ ಸಿದ್ಧಾಂತ ಸಾಹಿತ್ಯಾದಿಗ್ರಂಥಗಳ ನಿರ್ಮಾಣವಾಗದಿರುವುದೇ ಕಾರಣವಾಗಿರುವುದು. ಯಾವ ಮತದಲ್ಲಿ ವಿಶೇಷವಾದ ಸಾಹಿತ್ಯಗ್ರಂಥರಾಶಿಯಿಲ್ಲವೋ ಆ ಮತವು ಭೂಲೋಕದಲ್ಲಿ ಹೆಚ್ಚು ಕಾಲ ಬಾಳಲಾರದು. ಗ್ರಂಥರಾಶಿಯೆಂಬುದು ಮತದ ಪ್ರಾಣವಾಯು. ಅದಿಲ್ಲದಿದ್ದರೆ ಮತವು ಎಷ್ಟು ಕಾಲ ಬಾಳೀತು. ಒಂದು ವೇಳೆ ಮತೀಯರ ಅಭಾವವಾದರೂ ಆ ಮತ ಬೋಧಕಗಳಾದ ಗ್ರಂಥಗಳು ಉಳಿದರೆ ಅವುಗಳ ಪ್ರಭಾವದಿಂದ ಮುಂದೆ ಮುಂದೆ ಹೊಸದಾಗಿ ಮತೀಯರುಂಟಾಗಬಹುದು. ಮತಗ್ರಂಥಗಳು ಹುಟ್ಟದಿದ್ದರೂ ಹುಟ್ಟಿರುವುವು ಆ ಮತೀಯರ ಔದಾಸೀನ್ಯದಿಂದ ಅಳಿದು ಹೋದರೂ ಮುಂದೆ ಅಂತಹ ಗ್ರಂಥಗಳು ಹುಟ್ಟುವ ಆಸೆಯೂ ಇಲ್ಲ, ಆ ಮತೀಯರಾಗುವ ಆಸೆಯೂ ಇಲ್ಲ. ಪ್ರಪಂಚವೆಂಬ ಮಹಾಸಾಗರದಲ್ಲಿ ಜೈನವೈದಿಕಾದಿ ಸನಾತನಮತಗಳೆಂಬ ಹಡಗುಗಳು ನಾನಾ ವಿಪತ್ತುಗಳೆಂಬ ಪ್ರಬಲತರ ತರಂಗಗಳ ಹೊಡೆತಕ್ಕೆ ಸಿಕ್ಕಿದ್ದರೂ ಈ ಮತಗಳ ಗ್ರಂಥರಾಶಿಯೆಂಬ ಭದ್ರಸ್ತಂಭದ ಆಧಾರದಿಂದ ಇದುವರೆಗೆ ಇವು ಬಾಳಿಕೊಂಡಿವೆ.
©2024 Book Brahma Private Limited.