ಲೇಖಕಿ ವೀಣಾ ರಘುಚಂದ್ರ ಶೆಟ್ಟಿ ಅವರ ಜಿನ ಸಹಸ್ರನಾಮ ಸ್ತುತಿ ‘ಶ್ರೀ ಆದಿನಾಥ ವೈಭವ’. ಈ ಕೃತಿಗೆ ಕೇಸರಿ ರತ್ನರಾಜಯ್ಯ ಅವರು ಮುನ್ನುಡಿಬರೆದಿದ್ದಾರೆ. ಅವರು ಹೇಳುವಂತೆ, ಕವಯಿತ್ರಿ ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿಯವರು ನಿರಂತರ ಶ್ರದ್ಧಾ ಭಕ್ತಿಯಿಂದ ತಮ್ಮದೇ ಆದ ಉತ್ತಮ ಉನ್ನತ ಮಟ್ಟದ ಕಾವ್ಯಶೈಲಿಯೊಂದಿಗೆ ಅರ್ಥಸಹಿತ ಪದಗಳ ಜೋಡಣೆಯೊಂದಿಗೆ ಆದಿನಾಥರ ವೈಭವವನ್ನು ಸಾಂಗತ್ಯದಲ್ಲಿ ಸುಂದರವಾಗಿ, ಸರಳವಾಗಿ, ಸುಲಭವಾಗಿ ಶ್ರಾವಕ-ಶ್ರಾವಕಿ ಬಂಧುಗಳಿಗೆ ಅರ್ಥವಾಗುವಂತೆ ನಿರೂಪಿಸಿದ್ದಾರೆ. ನಿಜಕ್ಕೂ ಶ್ಲಾಘನೀಯ, ಮೇರು ಸಾಹಿತ್ಯ, ಸರಳ ರಚನೆ. ಇದೊಂದು ದೀರ್ಘ ಸಂಯಮ ಸಹನೆಯ ಸಾಧನೆಯೇ ಹೌದು’ ಎಂಬುದಾಗಿ ಹೇಳಿದ್ದಾರೆ.
ಎಸ್. ಪಿ. ಅಜಿತ್ ಪ್ರಸಾದ್, ಮೂಡುಬಿದಿರೆ ಅವರು ಕೃತಿಗೆ ಬೆನ್ನುಡಿಯನ್ನು ಬರೆದಿದ್ದು, “ಶ್ರೀ ಆದಿನಾಥ ವೈಭವ”ವು (ಜಿನಸಹಸ್ರನಾಮ) ಭಗವಾನ್ ಆದಿನಾಥರ ಸಾವಿರದ ಎಂಟು ಹೆಸರುಗಳನ್ನು ಸ್ತುತಿ ರೂಪದಲ್ಲಿ ಆರಾಧಿಸುವ ಅಪರೂಪದ ಕೃತಿ. ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ ಅವರಿಗೆ ಕವಿತ್ವ ಸಹಜವಾಗಿಯೇ ಒದಗಿ ಬಂದಿದೆ. ನಿರಂತರವಾದ ಸ್ವಾಧ್ಯಾಯದ ಮೂಲಕವಾಗಿ ತಮ್ಮಲ್ಲಿರುವ ಕವಿತಾ ಪ್ರತಿಭೆಗೆ ಸಾಣೆ ಹಿಡಿಯುತ್ತಾ ಬಂದಿದ್ದಾರೆ. ಅವರು ರಚಿಸಿರುವ ನೂರಾರು ಜಿನಭಕ್ತಿಗೀತೆಗಳು ನಾಡಿನಾದ್ಯಂತ ಇಂದು ಸಹೃದಯರ ನಾಲಿಗೆ ಮೇಲೆ ನಲಿದಾಡುತ್ತಿದೆ. ಸಹಜ ಕವಿತ್ವಾ ಶಕ್ತಿ ಮತ್ತು ವ್ಯುತ್ಪತ್ತಿ ಜ್ಞಾನದ ಪರಿಣಾಮವಾಗಿ ಇಂದು ಲೋಕಾರ್ಪಣೆಗೊಳ್ಳುತ್ತಿರುವ “ಶ್ರೀ ಆದಿನಾಥ ವೈಭವ” (ಜಿನಸಹಸ್ರನಾಮ) ದ ಪ್ರತೀ ರಚನೆಗಳೂ ಅತ್ಯಂತ ಸರಳವಾಗಿ ಒಂದೇ ಓದಿಗೆ ಮನಸ್ಸನ್ನು ಸೂರೆಗೊಳ್ಳುತ್ತವೆ. ಆದುದರಿಂದಲೇ ಇಲ್ಲಿಯ ರಚನೆಗಳು ಕಾವ್ಯ ರಸಿಕರ ಮನಸ್ಸಿಗೆ ಮುದವನ್ನು ಕೊಡುವುದರಲ್ಲಿ ನನಗೆ ಯಾವುದೇ ಸಂಶಯವೂ ಇಲ್ಲ’ ಎಂದಿದ್ದಾರೆ.
©2024 Book Brahma Private Limited.