About the Author

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ಗರಿಗಟ್ಟಿಕೊಂಡು ಮುಂದುವರಿಯುವಂತಾಯಿತು.

ಆದಿರಾಜಯ್ಯನವರು ಆಚಾರ್ಯ ವೀರಸಾಗರ ಮುನಿಗಳಿಂದ ದೀಕ್ಷೆ ಪಡೆದಿದ್ದರು. ಹಿರಿಯರ ಸಾಮೀಪ್ಯ ಮತ್ತು ಬೋಧನೆ ಅವರ ಮೇಲೆ ಅಗಣಿತ ಪ್ರಭಾವವನ್ನು ಬೀರಿ ಪ್ರೋತ್ಸಾಹದಾಯಕವಾಗಿ ಪರಿಣಮಿಸಿ ಕಲಿಕಾ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ತತ್ಪರಿಣಾಮವಾಗಿ ತುಳುನಾಡಿನ ಕುಡಿ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗಮಿಸುವಂತಾಗಿ (ಸು-1905) ಹಾಗೂ ದಿನಗಳುರುಳಿದಂತೆ ಮುಂದೆ ಮೈಸೂರಿನಲ್ಲಿ ಧಾರ್ಮಿಕ ಶಿಕ್ಷಣ ಮತ್ತು ಪ್ರವಚನಕ್ಕೆ ನಾಂದಿಯಾಯಿತು. ಶ್ರೀಗಳವರ ಪ್ರೇರಣೆ ಹಾಗೂ ಮಹದಾಕಾಂಕ್ಷೆಯಂತೆ 1909ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ರಾಜ್ಯದ ಮೊರೇನಾ ಜೈನ ಮಹಾವಿದ್ಯಾಲಯ ಮತ್ತು ಕಲ್ಕತ್ತದಲ್ಲಿಯೂ ಜೈನಾಗಮ, ವ್ಯಾಕರಣ, ದರ್ಶನ, ಕಾವ್ಯಾಲಂಕಾರ ಮತ್ತು ನ್ಯಾಯಶಾಸ್ತ್ರಗಳಲ್ಲಿ ಆಳವಾದ ಅಧ್ಯಯನಗೈದು ಶಾಸ್ತ್ರಿಗಳು ನ್ಯಾಯತೀರ್ಥ ವೆಂಬ ಪದವಿಯನ್ನುಗಳಿಸಿದರು. ಅಲ್ಲಿಂದ 1915 ರಲ್ಲಿ ಮೈಸೂರ್ಗೆ ಮರಳಿದ ತರುವಾಯ ಧರ್ಮಬೀರುಗಳಾದ ಮೋತೀಖಾನೆ ಎಂ.ಸಿ. ಲಕ್ಷ್ಮೀಪತಯ್ಯ ಮತ್ತು ಎಂ.ಎಲ್. ವರ್ಧಮಾನಯ್ಯನವರ ಉದಾರ ಚರಿತೆ, ಪರಮಾಶ್ರಯ ಮತ್ತು ಬೆಂಬಲದಿಂದಾಗಿ ಅವರ ಮುಂದಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗಲು ಮುಂದುವರಿಸಿಕೊಂಡು ಹೋಗಲು ಅನುವಾಯಿತು. ಅವರು ಸ್ವಯಂ ರೂಢಿಸಿಕೊಂಡಿದ್ದ ಶಿಸ್ತಿ, ಶ್ರದ್ಧೆ, ಸಂಯಮಯುತವಾದ ನಡವಳಿಕೆ ಮತ್ತು ಜ್ಞಾನಪಿಪಾಸೆಯ ಗುಣಗಳು ದ್ವಿಗುಣಗೊಂಡು ಅನವರತ ಮುನ್ನೆಡೆಸುವ ದಾರಿದೀಪವಾದವು. ಮುಂದೆ ಮಹಾನ್ ಪಂಡಿತರಾದ ಶಾಂತಿರಾಜಶಾಸ್ತ್ರಿಗಳು ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. 

ಎರ್ತೂರು ಶಾಂತಿರಾಜಶಾಸ್ತ್ರಿ