‘ದಶಲಕ್ಷಣಧರ್ಮಗಳು’ ಎರ್ತೂರು ಶಾಂತಿರಾಜಶಾಸ್ತ್ರಿ ಅವರ ಕೃತಿ. ಉತ್ತರ ಭಾರತದ ಜೈನ ಸಮಾಜದಲ್ಲಿ ದಶಲಕ್ಷಣಧರ್ಮದ ವ್ರತಾಚರಣೆಯು ವ್ರತನಿಯಮಾನುಷ್ಠಾನಗಳೆಲ್ಲೆಲ್ಲ ಬಹು ಮುಖ್ಯವಾಗಿ ಪರಿಗಣಿಸಲ್ಪಟ್ಟಿದೆ. ಈ ಪರಿಗಣನೆಯು ಉಚಿತವಾಗಿ ಇರುವುದಾದರೂ ದಕ್ಷಿಣ ಭಾರತದ ಜೈನಸಮಾಜದಲ್ಲಿ ಈ ವ್ರತಾಚರಣೆಯು ಸಾರ್ವತ್ರಿಕವಾಗಿ ಪ್ರಚಾರದಲ್ಲಿ ಬಾರದಿರಲು ಕಾರಣವೇನೋ ತಿಳಿಯದು. ಅಂತು ಸರ್ವತ್ರ ಈ ವ್ರತಾಚರಣೆಯು ಪ್ರಚಾರದಲ್ಲಿ ಬರುವುದಕ್ಕೆ ತಕ್ಕುದೆಂಬುದು ಈ ಧರ್ಮದ ಮುಂದಿನ ಮಹತ್ತ್ವವರ್ಣನೆಯಿಂದ ವಾಚಕರಿಗೆ ಗೊತ್ತಾಗಬಹುದು. ಮೊದಲು ನಾವು ಧರ್ಮ ಶಬ್ದದ ವಾಚ್ಯವನ್ನು ಎಂದರೆ ಅರ್ಥವನ್ನು ವಾಚಕರ ಲಕ್ಷ್ಯಕ್ಕೆ ತರುವೆವು. ಧರ್ಮವೆಂದರೆ ಧಾರಣಮಾಡುವುದು ಎತ್ತಿಹಿಡಿಯುವುದು ಎಂದರ್ಥ. ಸಾಮಾನ್ಯವಾಗಿ ವಸ್ತುವಿನ ಸ್ವಾಭಾವಿಕವಾದ ಗುಣಕ್ಕೆ ಧರ್ಮವೆಂದು ಹೆಸರಿರುವುದು. ಉದಾಹರಣೆ-ಬೆಂಕಿಯಲ್ಲಿ ಉಷ್ಣತೆ, ನೀರಿನಲ್ಲಿ ಸ್ವಚ್ಛತೆ, ಶೈತ್ಯ, ಜೀವದಲ್ಲಿ ಜ್ಞಾನ ಸುಖ ಇತ್ಯಾದಿ. ಈ ಧರ್ಮಗಳು ಆಯಾ ಪದಾರ್ಥಗಳನ್ನು ಎತ್ತಿಹಿಡಿಯುರುದೆಂದರೆ ಹೇಗೆ, ಎಂಬ ಪ್ರಶ್ನೆಗೆ, ಇತರ ಪದಾರ್ಥಗಳಿಂದ ಆಯಾ ಪದಾರ್ಥಗಳನ್ನು ಪ್ರತ್ಯೇಕಿಸುವುದು ಅಥವಾ ಒಂದು ಪದಾರ್ಥವು ಮತ್ತೊಂದು ಪದಾರ್ಥವಾಗದಂತೆ ಕಾಪಾಡುವುದು ಎಂದರ್ಥ. ಧರ್ಮವು ಯಾವ ಪದಾರ್ಥದಲ್ಲಿದೆಯೋ ಆ ಪದಾರ್ಥಕ್ಕೆ ಧರ್ಮಿಯೆಂದು ಹೆಸರು. ಒಂದು ವಸ್ತುವಿನಲ್ಲಿ ನಿಯತವಾಗಿರುವ ಧರ್ಮವು ಇತರ ವಸ್ತುವಿನ ಸಂಬಂಧದಿಂದ ವಿಕಾರವನ್ನು ಹೊಂದಿದರೆ ಅದಕ್ಕೆ ಅಧರ್ಮವೆಂದು ಹೆಸರು. ಆ ಧರ್ಮಪಾಲನೆಗೆ ಬೇಕಾಗುವ ದಶಲಕ್ಷಣಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.