‘ಪರಮಾತ್ಮಬೋಧ’ ಎಂಬ ಪುಸ್ತಕವನ್ನು ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ವತಿಯಿಂದ ಪ್ರಕಟಿಸಿ, ಶಾಸ್ತ್ರದಾನ ಮಾಡಿರುತ್ತಾರೆ. ಎರ್ತೂರು ಶಾಂತಿರಾಜಶಾಸ್ತ್ರಿಗಳು ಸಂಪಾದಿಸಿರುವ ಈ ಕೃತಿಯು ಪರಮಾತ್ಮಬೋಧದ ಕುರಿತು ಚರ್ಚಿಸುತ್ತದೆ. ಪರಮಾನಂದಂಸಂಯುಕ್ತಂ ನಿರ್ವಿಕಾರಂ ನಿರಾಮಯಂ| ಧ್ಯಾನಹೀನಾ ನ ಪಶ್ಯಂತಿ ನಿಜದೇಹೇ ವ್ಯವಸ್ಥಿತಂ| ಶಬ್ದಾರ್ಥ: ಪರಮಾನಂದಸಂಯುಕ್ತನೂ ವಿಕಾರ ರಹಿತನೂ ನೀರೋಗಿಯೂ ತನ್ನ ಶರೀರದಲ್ಲಿರುವವನೂ ಆದ ಪರಮಾತ್ಮನನ್ನು ಧ್ಯಾನವಿಲ್ಲದವರು ನೋಡುವುದಿಲ್ಲ. ತಾತ್ಪರ್ಯ: ಬಾಹ್ಯೇಂದ್ರಿಯಗಳಿಗೆ ರೂಪ ರಸ ಗಂಧ ಸ್ಪರ್ಶಗುಣಗಳುಳ್ಳ ಮೂರ್ತವಸ್ತುವು ವಿಷಯವಾಗುವುದಲ್ಲದೆ ಆ ಗುಣಗಳಿಲ್ಲದಿರವ ಅಮೂರ್ತವಸ್ತುವು ವಿಷಯವಾಗುವುದಿಲ್ಲ. ಆತ್ಮನು ಅಮೂರ್ತನಾಗಿದ್ದಾನೆ. ಆತ್ಮನು ಅನಾದಿಕಾಲದಿಂದ ಕರ್ಮಬದ್ಧನಾಗಿ, ಶಿಲೆಯಲ್ಲಿ ಸುವರ್ಣವಿರುವಂತೆ, ದೇಹದಲ್ಲಿ ವಾಸಮಾಡುತ್ತಾನೆ. ಶಿಲೆಯೂ ಸುವರ್ಣವೂ ಸೇರಿದ್ದರೂ ಅವುಗಳ ಸ್ವರೂಪವು ಬೇರೆ ಬೇರೆಯಾಗಿರುವಂತೆ ದೇಹಾತ್ಮಗಳು ಸೇರಿದ್ದರೂ ಅವುಗಳ ಸ್ವಪೂಪವು ಬೇರೆಬೇರೆಯಾಗಿವೆ. ದೇಹವು ಜಡವಸ್ತು, ಆತ್ಮನು ಜ್ಞಾನದರ್ಶನರೂಪಿಯಾದ ಚೈತನ್ಯವಸ್ತು. ಸೇರಿರುವ ಶಿಲಾಸುವರ್ಣಗಳನ್ನು ಜ್ಞಾನದಿಂದ ಬೇರೆ ಬೇರೆಯಾಗಿ ತಿಳಿಯಬಹುದಾಗಿರುವಂತೆ ದೇಹಾತ್ಮಗಳನ್ನೂ ತಿಳಿಯಬಹುದು. ಏಕಾಗ್ರಚಿಂತಾನಿರೋಧೋ ಧ್ಯಾನಂ ಎಂದು ಹೇಳಿರುವಂತೆ ಜ್ಞಾನದ ಉಪಯೋಗವನ್ನು ತಡೆದು ನಿರ್ದಿಷ್ಟವಾದ ಧ್ಯೇಯದಲ್ಲಿರಿಸುವುದಕ್ಕೆ ಧ್ಯಾನವೆಂದು ಹೆಸರು. ಇದು ಜ್ಞಾನದ ಒಂದು ವಿಶಿಷ್ಟಾವಸ್ಥೆಯಾಗಿದೆ. ಇಂತಹ ಧ್ಯಾನದಿಂದ ದೇಹದಲ್ಲಿರುವ ಆತ್ಮನ ಸ್ವರೂಪವನ್ನು ತಿಳಿಯಬಹುದು. ಧ್ಯಾನಹೀನರು ತಿಳಿಯಲಾರರು. ವಸ್ತುವಿನ ನಿಜವಾದ ಸ್ವರೂಪ ಜ್ಞಾನಕ್ಕೆ ನಿಶ್ಚಯ ನಯವೆಂದು ಹೆಸರು. ಇದರಿಂದ ಆತ್ಮಸ್ವರೂಪವನ್ನು ಪೃಥಕ್ಕರಿಸಿ ವಿಚಾರಮಾಡುವುದಾದರೆ ಆತ್ಮನು ಪರಮಾನಂದಸ್ವರೂಪಿಯೂ ನಿರ್ವಿಕಾರನೂ ನೀರೋಗಿಯೂ ಆಗಿರುತ್ತಾನೆಂದು ಬೋಧೆಯಾಗುವುದು. ಇದೇ ಪರಮಾತ್ಮಬೋಧ.
©2025 Book Brahma Private Limited.