‘ಸಮ್ಯಕ್ತ್ವ ಕೌಮುದಿ’ ಪಂಡಿತ ಎರ್ತೂರು ಶಾಂತಿರಾಜಶಾಸ್ತ್ರಿಗಳ ಕೃತಿ. ಜೈನಸಿದ್ಧಾಂತಾನುಸಾರವಾಗಿ ಸಮ್ಯಗ್ದರ್ಶನ ಸಮ್ಯಜ್ಞಾನ ಸಮ್ಯಕ್ಚಾರಿತ್ರಗಳು ಮೋಕ್ಷಕ್ಕೆ ಮಾರ್ಗ. ದರ್ಶನಶಬ್ದಕ್ಕೆ ನೋಟವೆಂದು ಅರ್ಥವಿದ್ದರೂ ಮೋಕ್ಷ ಮಾರ್ಗ ಪ್ರಕರಣದಲ್ಲಿ ಅದಕ್ಕೆ ನಂಬಿಕೆಯೆಂದರ್ಥ. ಯಥಾರ್ಥವಾದ ದೇವ ಗುರು ಶಾಸ್ತ್ರಗಳಲ್ಲಿ ಮತ್ತು ತತ್ವ್ತಾರ್ಥಗಳಲ್ಲಿ ಶ್ರೇಷ್ಠವಾದ ನಂಬಿಕೆಗೆ ಸಮ್ಯಗ್ದರ್ಶನವೆಂದೂ ಸಂಶಯ ವಿಪರೀತಿ ಅನಿಶ್ಚಿತಗಳಲ್ಲದ- ಯಥಾರ್ಥಜ್ಞಾನಕ್ಕೆ ಸಮ್ಯಜ್ಞಾನವೆಂದೂ ಪ್ರಾಣಿಬಾಧಾರಹಿತವೂ ನಿರ್ದಿಷ್ಟವೂ ಆದ ಆಚರಣೆಗೆ ಸಮ್ಯಕ್ಚಾರಿತ್ರವೆಂದೂ ಹೆಸರು. ಈ ಮೂರಕ್ಕೆ ರತ್ನತ್ರಯವೆಂದು ಜೈನಸಿದ್ಧಾಂತದಲ್ಲಿ ಸಂಕೇತವಿದೆ. ಇವುಗಳಲ್ಲಿ ಸಮ್ಯಗ್ದರ್ಶನವು ಪ್ರಧಾನವಾದುದು. ಅದಿದ್ದರೇನೆ ಜ್ಞಾನ ಚಾರಿತ್ರಗಳಿಗೆ ಶ್ರೇಷ್ಠತೆ. ಇಲ್ಲವಾದರೆ ಅವು ಮಿಥ್ಯಾಜ್ಞಾನಚಾರಿತ್ರಗಳೆನ್ನಿಸುವುವು. ಇವು ಮೂರೂ ಆತ್ಮನ ಗುಣಗಳಾಗಿರುತ್ತವೆ. ಸಮೀಚೀನಶ್ರದ್ಧಾರೂಪಾದ ಸಮ್ಯಗ್ದರ್ಶನಕ್ಕೆ ಜೈನಾಗಮದಲ್ಲಿ ಸಮ್ಯಕ್ತ್ವವೆಂದೂ ಹೆಸರಿದೆ. ಅದೇ ಈ ಗ್ರಂಥದಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗಿರುವ ವಿಷಯ. ಅದೇ ಈ ಗ್ರಂಥದಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗಿರುವ ವಿಷಯ. ಬೆಳದಿಂಗಳಿಗೆ ಸಂಸ್ಕೃತದಲ್ಲಿ ಕೌಮುದಿಯೆಂದು ಹೆಸರು. ಅದು ಮನಸ್ಸಿಗೆ ಆಹ್ಲಾದವನ್ನುಂಟುಮಾಡುವಂತೆ ಮನೋರಂಜಕವಾದ ಕಥೆಗಳ ಮೂಲಕ ಈ ಸಮ್ಯಕ್ತ್ವವೆಂಬ ಕೌಮುದಿಯೂ ಇದನ್ನು ಪಠನ ಮಾಡುವವರ ಮನಸ್ಸಿಗೆ ಶಾಂತಿ ಸಂತೋಷಗಳನ್ನೂ ಕೊನೆಗೆ ಮುಕ್ತಿಸುಖವನ್ನೂ ಉಂಟುಮಾಡತಕ್ಕುದಾಗಿರುವುದರಿಂದ ಈ ಗ್ರಂಥಕ್ಕೆ ಸಮ್ಯಕ್ತ್ವಕೌಮುದಿಯೆಂಬ ಹೆಸರು ಸಾರ್ಥಕವಾಗಿದೆ. ಧರ್ಮ ನೀತಿ ಮೊದಲಾದ ವಿಷಯಗಳನ್ನು ಇಷ್ಟು ಮನೋರಂಜಕವಾದ ಸುಲಭ ರೀತಿಯಲ್ಲಿ ಬೋಧಿಸುವ ಗ್ರಂಥವು ದೊರೆಯುವುದು ಕಷ್ಟ. ಈ ಗ್ರಂಥವು ಸಂಸ್ಕೃತದಲ್ಲಿಯೂ, ಹಿಂದಿಯಲ್ಲಿಯೂ, ಮರಾಠಿಯಲ್ಲಿಯೂ, ಕನ್ನಡದಲ್ಲಿ ಷಟ್ಪದಿಯಲ್ವಿಯೂ ಸಾಂಗತ್ಯದಲ್ಲಿಯೂ ಇರುತ್ತದೆ. ಇದರಿಂದಲೂ ಸಮ್ಯಕ್ತ್ವಕೌಮುದಿಯೆಂಬ ಹೆಸರಿನಿಂದಲೂ ಈ ಗ್ರಂಥದ ಮಹತ್ತ್ವವೂ ಮನೋರಂಜಕತೆಯೂ ಅನುಮಿತವಾಗುವುವು.
©2024 Book Brahma Private Limited.