‘ರತ್ನಾಕರ ವಿರಚಿತ ಶತಕತ್ರಯ’ ಕೃತಿಯನ್ನ ಎರ್ತೂರು ಶಾಂತಿರಾಜಶಾಸ್ತ್ರಿ ಅವರು ಭಾವದೀಪಿಕಾ ವ್ಯಾಖ್ಯಾನದ ಜೊತೆಗೆ ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಕರ್ಣಾಟಕ ಸಾಹಿತ್ಯ ರತ್ನವನ್ನು ಬೆಳಗಿದವರಲ್ಲಿ ಜೈನಕವಿಗಳು ಮೊದಲನೆಯವರೆಂಬುದು ಎಲ್ಲಾ ವಿದ್ವಾಂಸರೂ ಒಪ್ಪಿರುವ ಮಾತು. ನೃಪತುಂಗ, ಪಂಪ, ಪೊನ್ನ, ರನ್ನ, ಚಾಮುಂಡರಾಯ, ಬಾಲಚಂದ್ರ, ನಾಗಚಂದ್ರ,ನಯಸೇನ, ಕರ್ಣಪಾರ್ಯ, ನೇಮಿಚಂದ್ರ, ಅಗ್ಗಳ, ಜನ್ನ ಕೇಶಿರಾಜ, ನಾಗವರ್ಮ, ಬಂಧುವರ್ಮ, ಗುಣವರ್ಮ, ಕಮಲಭವ, ನಾಗರಾಜ, ಪಾರ್ಶ್ವಪಂಡಿತ, ಭಟ್ಟಾಕಲಂಕ ಮೊದಲಾದ ಜೈನಕವಿಪುಂಗವರು ತಮ್ಮ ಕೃತಿರತ್ನಾಭರಣಗಳಿಂದ ಕರ್ಣಾಟಕ ಸಾಹಿತ್ಯ ಸರಸ್ವತೀ ಮಾತೆಯನ್ನು ಆಪಾದಮಸ್ತಕ ಅಲಂಕರಿಸಿ ತಮ್ಮ ಸೇವೆಯನ್ನು ಸಲ್ಲಿಸಿ ಅಚ್ಚಳಿಯದ ಕೀರ್ತಿಯನ್ನು ಗಳಿಸಿದ್ದಾರೆ. ಕ್ರಿಸ್ತಶಕ ಹದಿನಾರನೆಯ ಶತಮಾನದ ಕರ್ಣಾಟಕ ಜೈನಕವಿಗಳಲ್ಲಿ ರತ್ನಾಕರ ಕವಿಯು ಅಗ್ರಗಣ್ಯನು. ಆತನ ಪರಿಯಚವು ದೇವಚಂದ್ರನ ರಾಜಾವಲೀ ಕಥೆಯಲ್ಲಿ ಉಕ್ತವಾಗಿದೆ. ಈ ಉಲ್ಲೇಖದಿಂದ ರತ್ನಾಕರಾರ್ಯನು ಸೂರ್ಯವಂಶದ ಕ್ಷತ್ರೀಯ ಪುತ್ರನೆಂದೂ ಕ್ರಿಸ್ತಶಕ 16ನೆಯ ಶತಮಾನದ ಮಧ್ಯಕಾಲದಲ್ಲಿದ್ದನೆಂದೂ ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅಧ್ಯಾತ್ಮ ವಿದ್ಯೆಯಲ್ಲಿಯೂ ನಿಪುಣನಾಗಿದ್ದನೆಂದೂ ಅವನಿಗೆ ಭೈರವರಸ ಒಡೆಯರ ಆಸ್ಥಾನದಲ್ಲಿ ಶೃಂಗಾರಕವಿ ಎಂಬ ಪ್ರಶಸ್ತಿಯೂ ಪ್ರಾಪ್ತವಾಗಿದ್ದಿತೆಂದೂ ಅವನು ಮೊದಲು ಭರತೇಶ್ವರಚರಿತ (ಭರತೇಶ ವೈಭವ) ವನ್ನು ರಚಿಸಿದನೆಂದೂ ಅದನ್ನು ವಿಜಯಕೀರ್ತಿಪಟ್ಟಾಚಾರ್ಯರು ಆನೆಯ ಮೇಲೆ ಮೆರೆಯಿಸದಿದ್ದುದರಿಂದಲೂ ಅವನಿಗೆ ಶ್ರಾವಕರ ಮನೆಗಳಲ್ಲಿ ಆಹಾರವನ್ನು ಕೊಡದಂತೆ ತಡೆದುದರಿಂದಲೂ ಕೋಪಗೊಂಡು ವೀರಶೈವಮತವನ್ನು ಸ್ವೀಕರಿಸಿ ಲಿಂಗಧಾರಿಯಾಗಿ ಕೆಲವು ಆ ಮತಗ್ರಂಥಗಳನ್ನು ರಚಿಸಿದನೆಂದೂ ಕೋಪೋಪಶಾಂತಿಯಾದನಂತರ ಮತ್ತೆ ಜೈನಮತಾವಲಂಬಿಯಾಗಿ ರತ್ನಾಕರಶತಕ ಅಪರಾಜಿತಶತಕ ತ್ರಿಲೋಕಶತಕಗಳನ್ನೂ ಅಧ್ಯಾತ್ಮಗೀತಗಳನ್ನೂ ರಚಿಸಿದನೆಂದೂ ಗೊತ್ತಾಗುವುದು. ಉದ್ದಾಮವಿದ್ವಾಂಸನಾಗಿದ್ದ ರತ್ನಾಕರನ ಘನವಿದ್ವತ್ವವನ್ನು ನೋಡಿ ಸಂತೋಷಿಸುವುದನ್ನು ಬಿಟ್ಟು ಕರುಬಿ ಆ ಸಜ್ಜನನಿಗೆ ನಿಷ್ಕಾರಣವೈರಿಗಳಾದ ಕೆಲವರು ಉಪದ್ರವವನ್ನು ಮಾಡಿದುದರಿಂದ ಅವನು ಬೇಸತ್ತು ವೀರಶೈವ ಮತವನ್ನವಲಂಬಿಸಿದ ಬಳಿಕ ಅವನು ಸೋಮೇಶ್ವರಶತಕವನ್ನು ರಚಿಸಿದನೆಂದು ಪ್ರತೀತಿಯಿದೆ. ಇದು ವೀರಶೈವವಿದ್ವಾಂಸರಾದ ಗುಂಡ್ಲಹಳ್ಳಿ ಹಿರೇಮಠದ ವಿದ್ವಾನ್ ಶ್ರೀ ಎಂ.ಜಿ. ನಂಜುಂಡಾರಾಧ್ಯರು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿರುವ ಕವಿರತ್ನಾಕರನೂ ಸೋಮೇಶ್ವರಶತಕವೂ ಎಂಬ ಶಿರೋನಾಮವುಳ್ಳ ಲೇಖನದಿಂದಲೂ ವ್ಯಕ್ತವಾಗುವುದು ಎಂದಿದ್ದಾರೆ ಎರ್ತೂರು ಶಾಂತಿರಾಜಶಾಸ್ತ್ರಿಗಳು.
©2024 Book Brahma Private Limited.