ಪಂಡಿತರತ್ನ ಎರ್ತೂರು ಶಾಂತಿರಾಜಶಾಸ್ತ್ರಿ ಅವರು ಸಂಪಾದಿಸಿರುವ ಕೃತಿ ಜೈನವೇದ ಮತ್ತು ಶ್ರುತಪಂಚಮಿ. ಜೈನರ ವೇದಗಳು “ಆಪ್ತೋಜ್ಞಮನುಲ್ಲಂಘ್ಯ ಮದೃಷ್ಟೇಷ್ಟ ವಿರೋಧಕಂ, ತತ್ವೋಪದೇಶ ಕೃತ್ಸಾರ್ವಂ ಶಾಸ್ತ್ರಂ ಕಾಪಥ ಘಟ್ಟನಂ” ಅಂದರೆ, ಆಪ್ತ(ಸರ್ವಜ್ಞ)ನಿಂದ ಪ್ರಥಮೋಪದಿಷ್ಟವೂ, ವಸ್ತುಗಳು ಯಥಾರ್ಥಸ್ವರೂಪವನ್ನುಪದೇಶಿಸುವುದೂ, ಸಮಸ್ತ ಪ್ರಾಣಿಗಳಿಗೂ ಹಿತಕರವೂ, ಮಿಥ್ಯಾ ಮಾರ್ಗವನ್ನು ಖಂಡಿಸುವುದೂ ಯಾವುದೋ ಅದು ಶಾಸ್ತ್ರ(ವೇದ)ವು, ಈ ಲಕ್ಷಣಗಳುಳ್ಳವಾಗಿರಬೇಕೆಂದು ಜೈನಸಿದ್ಧಾಂತವು ಹೇಳುತ್ತದೆ. ಇದಕ್ಕೆ ವಿಪರೀತವಾದ ಲಕ್ಷಣಗಳುಳ್ಳವು ವೇದಾಭಾಸ(ಮಿಥ್ಯಾವೇದ)ಗಳು. ಅಂತಹ ವೇದಗಳನ್ನು ಜೈನರು ಒಪ್ಪುವುದಿಲ್ಲ. ಮೇಲೆ ಹೇಳಿದ ಲಕ್ಷಣಗಳುಳ್ಳ ಜೈನರ ಸತ್ಯವೇದಗಳು ಆಚಾರಾಂಗ, ಸೂತ್ರ ಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಾಖ್ಯಾಪ್ರಜ್ಞಪ್ತ್ಯಂಗ, ಜ್ಞಾತೃಕಥಾಂಗ, ಉಪಾಸಕಾಧ್ಯಯನಾಂಗ, ಅಂತಕೃದ್ದಶಾಂಗ, ಔಪಪಾದಿಕದಶಾಂಗ, ಪ್ರಶ್ನವ್ಯಾಕರಣಾಂಗ, ವಿಪಾಕಸೂತ್ರಾಂಗ, ದೃಷ್ಟಿವಾದಾಂಗಗಳೆಂದು ಹನ್ನೆರಡು ವಿಧಗಳಾಗಿವೆ. ಇವುಗಳಿಗೆ ದ್ವಾದಶಾಂಗ ವೇದಗಳೆಂದು ಜೈನಾಗಮದಲ್ಲಿ ಸಂಕೇತವಿದೆ. ಈ ವಿಚಾರವನ್ನು ಗೋಮಟಸಾರ ಜೀವಕಾಂಡ ಮೊದಲಾದ ಜೈನ ಗ್ರಂಥಗಳಿಂದ ವಿಶದವಾಗಿ ತಿಳಿಯಬಹುದು. ಬೇರೆ ಕೆಲವರು ನಮ್ಮ ಋಗ್ವೇದ ಮೊದಲಾದ ನಾಲ್ಕು ವೇದಗಳನ್ನೊಪ್ಪದಿರುವುದರಿಂದ ಜೈನರು ನಾಸ್ತಿಕರು ಎಂದು ಹೇಳುತ್ತಾರೆ. ಈ ಮಾತನ್ನು, ಋಗ್ವೇದದಲ್ಲಿರುವ ಓಂ ತ್ರೈಲೋಕ್ಯ ಪ್ರತಿಷ್ಠಿ ತಾನಾಂ ಚತುರ್ವಿಂಶತಿ ತೀರ್ಥಂಕರಾಣಾಂ ಋ(ವೃ)ಷಭಾದಿವರ್ಧಮಾನಾಂ ತಾನಾಂ ಸಿದ್ದಾನಾಂ ಶರಣಂ ಪ್ರಪದ್ಯೇ ಇತ್ಯಾವಾಕ್ಯ ಪ್ರಮಾಣಗಳಿಂದ, ಖಂಡಿಸಿ ದ್ವಾದಶಾಂಗ ಜೈನವೇದಗಳ ಸೂಕ್ಷ್ಮಪರಿಚಯವನ್ನು ಈ ಕಿರುಹೊತ್ತಿಗೆಯಲ್ಲಿ ಕೊಟ್ಟಿದ್ದಾರೆ.
©2024 Book Brahma Private Limited.