ಶ್ರೀಕುಂದಕುಂದ-ಪೂಜ್ಯಪಾದ ಕೃತ ದಶಭಕ್ತಿಃ ಕೃತಿಯನ್ನು ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಸಂಪಾದಿಸಿದ್ದಾರೆ. ಜೈನರ ನಿತ್ಯಕ್ರಿಯಾಪಾಠಗಳಲ್ಲಿ ದಶಭಕ್ತಿ ಪಂಚಸ್ತೋತ್ರಗಳು ಬಹುಮುಖ್ಯವಾಗಿರುತ್ತವೆ. ಈ ಮುಖ್ಯತೆಗೆ ಅವುಗಳಲ್ಲಿ ಪ್ರತಿಪಾದಿಸಲ್ಪಟ್ಟ ವಿಷಯಗಳ ಪವಿತ್ರತೆಯೂ ಪ್ರಧಾನತೆಯೂ ಕಾರಣಗಳಾಗಿರುತ್ತವೆ. ಜೈನಧಾರ್ಮಿಕ ಜನರು ಈ ಭಕ್ತಿ ಸ್ತೋತ್ರಗಳನ್ನು ಬಹುಶ್ರದ್ಧೆಯಿಂದಲೂ ಭಕ್ತಿಯಿಂದಲೂ ಪಠನ ಮಾಡುವ ಪರಿಪಾಟಿಯು ಬಹುಕಾಲದಿಂದ ಬಂದಿದೆ. ಪ್ರತಿಯೊಂದು ಧಾರ್ಮಿಕ ಕ್ರಿಯೆಗಳಲ್ಲಿ ಈ ಭಕ್ತಿಗಳಲ್ಲಿ ಆಯಾ ಸಂದರ್ಭೋಚಿತವಾದ ಭಕ್ತಿಗಳನ್ನು ಹೇಳಬೇಕೆನ್ನುವ ವಿಧಿಯಿರುವುದು. ದೇವಾಲಯಕ್ಕೆ ಹೋಗಿ ದೇವ ದರ್ಶನವನ್ನು ಮಾಡುವಲ್ಲಿಯೂ ನಿತ್ಯಸಂಧ್ಯಾನುಷ್ಠಾನಾನಂತರದಲ್ಲಿಯೂ ಈಗಲೂ ಯಥಾನುಕೂಲವಾಗಿ ಅನೇಕ ಜೈನಬಂಧುಗಳು ಈ ಭಕ್ತಿ ಸ್ತೋತ್ರಗಳನ್ನು ಪಠಿಸುವುದುಂಟು. ಅಂದಮೇಲೆ ಇವುಗಳ ಪವಿತ್ರತ್ವವನ್ನೂ ಮಹತ್ವ್ತವನ್ನೂ ಬೇರೆ ಹೇಳಬೇಕಾದುದಿಲ್ಲವು. ಅಂತಹ ಪಠಣಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದಾಗಿದೆ. ಇಲ್ಲಿ ಪಂಚಮಂತ್ರಃ, ಸಂಸ್ಕೃತ ಸಿದ್ಧಭಕ್ತಿಃ, ಪ್ರಾಕೃತ ಸಿದ್ಧಭಕ್ತಿಃ, ಸಂಸ್ಕೃತ ಶ್ರುತಭಕ್ತಿಃ, ಪ್ರಾಕೃತ ಶ್ರುತಭಕ್ತಿಃ, ಸಂಸ್ರೃತ ಚಾರಿತ್ರಭಕ್ತಿಃ, ಪ್ರಾಕೃತ ಚಾರಿತ್ರಭಕ್ತಿಃ, ಸಂಸ್ಕೃತ ಯೋಗಿಭಕ್ತಿಃ, ಪ್ರಾಕೃತ ಯೋಗಿಭಕ್ತಿಃ, ಸಂಸ್ಕೃತ ಆಚಾರ್ಯಭಕ್ತಿಃ, ಪ್ರಾಕೃತ ಆಚಾರ್ಯಭಕ್ತಿಃ ಸೇರಿದಂತೆ ಪಠಣಗಳ ಸಾರವಿದೆ.
©2024 Book Brahma Private Limited.