ಯಶೋವಾಣಿ ಯಶೋಮತಿ ರವಿ ಬೆಳಗೆರೆ ಅವರ ಕೃತಿಯಾಗಿದೆ. ನಿರಂತರ ಹರಿಯುವ ನದಿಗೆ ಕೆಳಗಿಳಿಯುವ ಆಳದ ಹಂಗಿಲ್ಲ. ನಿಂತಲ್ಲೇ ಭೋರ್ಗರೆಯುವ ಸಮುದ್ರದ ಆಳವನ್ನು ಅರಿತವರಿಲ್ಲ! ಎಷ್ಟೇ ಉರಿದರೂ ಸೂರ್ಯನ ಬಣ್ಣ ಬದಲಾಗಿಲ್ಲ. ತಿರುಗುವ ಭೂಮಿ ನಿಂತಿಲ್ಲ. ನಾವು ಮಾಡಿಟ್ಟ ಹಣ - ಆಸ್ತಿ ನಮ್ಮ ನಂತರ ನಮ್ಮ ವಾರಸುದಾರರ ಪಾಲಾಗುತ್ತದೆ. ಈ ಜಗತ್ತಿನಲ್ಲಿ ನಾವು ನೆನಪಿನಲ್ಲುಳಿಯುವುದು ಕೇವಲ ನಮ್ಮ ಕೆಲಸ-ಕಾರ್ಯಗಳ ಮೂಲಕ; ವಿಚಾರ-ಚಿಂತನೆಗಳ ಮೂಲಕ ಮಾತ್ರ. ಇಂದಿಗೂ ರಾಷ್ಟ್ರಕವಿ ಕುವೆಂಪುರವರಾಗಲೀ, ವರಕವಿ ಬೇಂದ್ರೆಯವರಾಗಲೀ ಹೆಸರು ಕೇಳಿದ ಕೂಡಲೆ ನೆನಪಾಗುವುದು ಅವರ ಬರಹ, ಕವಿತೆ ಹಾಗೂ ಕೃತಿಗಳ ಮೂಲಕವೇ ಹೊರತು ಅವರು ಸಂಪಾದಿಸಿದ ಹಣ-ಆಸ್ತಿಯಿಂದಲ್ಲ. ಅನುಭವಿಸಿದ ಕ್ಷಣಗಳ ಅನುಭವ ಕೇವಲ ನಮ್ಮದೇ ಹೊರತು ಅದು ಸಾರ್ವತ್ರಿಕವಾದುದಲ್ಲ! ಅದರಿಂದ ಸೃಷ್ಟಿಯಾದ ಕಲೆ, ಸಾಹಿತ್ಯ, ಸಂಗೀತಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಜೀವನವೆಂಬುದು ಕಳೆದುಕೊಳ್ಳುತ್ತಾ, ಕೂಡಿಕೊಳ್ಳುತ್ತಾ ಸಾಗುವುದು. ಹಾಗಾದರೆ ಕಳೆದುಕೊಂಡವರ ಸ್ಥಾನವನ್ನು ಯಾರಾದರೂ ತುಂಬಲು ಸಾಧ್ಯವೇ? ಪ್ರತಿಯೊಬ್ಬರಿಗೂ ಅವರದೇ ಆದಂಥ ಸ್ಥಾನಗಳಿರುತ್ತವೆ. ತುಂಬಲು ಅದೇನು ಬಿಟ್ಟು ಹೋದ ಸ್ಥಳಗಳೇ? ಅದು ನಿರಂತರ ಮುಂದುವರಿಕೆ. ನಮ್ಮ ನಮ್ಮ ಸ್ಥಾನಗಳನ್ನು ಕರಾರುವಾಕ್ಕಾಗಿ ಸ್ಥಾಪಿಸಿ ಹೋಗುವುದಷ್ಟೇ ನಮ್ಮ ಕೆಲಸ. ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದು ನಮ್ಮಂತೆಯೇ ಮತ್ತೊಂದು ಸೃಷ್ಟಿ ಸಾಧ್ಯವಾದರೂ ಅದು ನಮ್ಮ ಪ್ರತಿರೂಪವಾಗಬಹುದೇ ಹೊರತು ನಾವಾಗಲು ಸಾಧ್ಯವಿಲ್ಲ. ಹೀಗಾಗಿ ನಾವು ಬೇರೆ ಯಾರಂತೆಯೋ ಆಗಲು ಅನುಕರಿಸದೆ, ನಾವು ನಾವಾಗಿರುವುದನ್ನು ರೂಢಿಸಿಕೊಳ್ಳೋಣ.
©2024 Book Brahma Private Limited.