ಕಿರಣ್ ಉಪಾಧ್ಯಾಯ ಅವರ ಅಂಕಣ ಬರಹಗಳ ಸಂಕಲನ ‘ವಿದೇಶವಾಸಿ’. ವಿದೇಶಿ ಅನುಭವವನ್ನು ಕನ್ನಡದ ಓದುಗರಿಗೆ ಪ್ರಸ್ತುತವಾಗುವಂತೆ, ವಾಸ್ತವದ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ವಿದೇಶಿ ವಿದ್ಯಮಾನಗಳೆಲ್ಲವೂ ಕನ್ನಡಿಗರಿಗೆ ಸ೦ಬ೦ಧಪಡುತ್ತವೆ, ಪ್ರಸ್ತುತವಾಗುತ್ತವೆ, ಸಾಮಯಿಕವಾಗುತ್ತವೆ ಎನ್ನಲಾಗುವುದಿಲ್ಲ. ಯಾವ ವಿಷಯವೇ ಆಗಲಿ, ಅದಕ್ಕೊಂದು ಸ್ಥಳೀಯ ಟಚ್ ಕೊಡುವುದು, ಕನ್ನಡದ ಸಂದರ್ಭಕ್ಕೆ ಆಪ್ತವಾಗುವಂತೆ ಮಾಡುವುದು, ಓದುಗರು ವಾರವಾರವೂ ಎದುರು ನೋಡುವಂತೆ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವುದು ಸಾಮಾನ್ಯವಲ್ಲ. ಇಲ್ಲಿ ಲೇಖಕ ವಿದೇಶಿ ಅನುಭವವನ್ನು ಕನ್ನಡದ ಸಂದರ್ಭಕ್ಕೆ ಅನ್ವಯವಾಗುವ ಹಾಗೆ ಸಹಜವಾಗಿ ವಿವರಿಸುತ್ತಾರೆ. ಹೀಗಾಗಿ ಇದು ವಿದೇಶಿ ಎಂದೆನಿಸದೇ, ವಿಶಿಷ್ಟ ದೇಸಿಯ ಸೊಬಗನ್ನು ಪಡೆಯುತ್ತವೆ. ವಿಷಯ ಹುಡುಕಾಟದಲ್ಲಿ ನಾವೀನ್ಯ, ಸೃಜನ-ಶಿಪ್ಪ ಶೋಧ, ವಿಷಯ ನಿವೇದನೆಯಲ್ಲಿನ ನಮ್ರತೆ, ಸೂಕ್ಷ್ಮತೆಗಳನ್ನು ಕಿರಣ್ ಬರಹಗಳುದ್ದಕ್ಕೂ ಕಾಣಬಹುದು. ಹೀಗಾಗಿ ಇಲ್ಲಿನ ಬರಹಗಳು ಅಂಕಣದಾಚೆಯ ಸಾಹಿತ್ಯ ಪ್ರಕಾರಕ್ಕೆ ತನ್ನನ್ನು ಹೊಂದಿಸಿಕೊಳ್ಳುವ ಸ್ಥಿತಿಸ್ಥಾಪಕಶೀಲವನ್ನು ಮೆರೆಯುತ್ತವೆ. ಇದೊಂದು ವಿಭಿನ್ನ ದೃಷ್ಟಿಕೋನದಿಂದ ಬರೆದ, ಬದಲಿನ ಹುದಲನ್ನು ಬಿಟ್ಟುಕೊಡುವ ನಿರುದ್ವಿಗ್ನತೆಯನ್ನು ಅಂತರ್ಗತವಾಗಿಸಿಕೊಂಡು ಬರೆದ ಬರಹಗಳಾಗಿವೆ.
©2024 Book Brahma Private Limited.