ಈಶಾನ್ಯ ದಿಕ್ಕಿನಿಂದ ಸುದೇಶ ದೊಡ್ಡಪಾಳ್ಯ ಅವರ ಅಂಕಣ ಬರಹಗಳ ಸಂಗ್ರಹವಾಗಿದೆ. ವರದಿಗಳು, ನುಡಿಚಿತ್ರಗಳನ್ನಲ್ಲದೆ ಒಂದೆರಡು ಕಲ್ಪಿತ ಹಾಸ್ಯಲೇಖನಗಳನ್ನೂ ಹತ್ತಾರು ಪುಟಗಳ ದೀರ್ಘ ವಿಶ್ಲೇಷಣೆಗಳನ್ನೂ ಇಲ್ಲಿ ಸುದೇಶ ಸೇರಿಸಿದ್ದಾರೆ. ಗಣ್ಯರ ಸಂದರ್ಶನಗಳೂ ಇವೆ; ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿ ‘ದಿ ಪ್ಯಾಕ್’ನ ಚಿತ್ರವಿಮರ್ಶೆಯಿದೆ; ವಿಶ್ವದ ಅತಿ ಎತ್ತರದ ವಾಹನ ಸಂಚಾರ ಮಾರ್ಗವೆನಿಸಿದ ಖರ್ದೂಂಗ ಲಾ ಪಾಸ್ ಮೂಲಕ ಹಾದು ಬಂದ ವರದಿಯಿದೆ. ಆಫ್ರಿಕಾ ಖಂಡದ ತುತ್ತತುದಿಯ ಕೇಪ್‌ಟೌನ್‌ಗೆ ಭೇಟಿನೀಡಿದ ವಿದೇಶೀ ಪ್ರವಾಸ ಕಥನವೂ ಇಲ್ಲಿ ಸೇರ್ಪಡೆಯಾಗಿದೆ. ತೀರ ಚೌಚೌ ಎನ್ನಿಸಬಹುದಾಗಿದ್ದ ಸಂಗ್ರಹವನ್ನು ಕ್ರಮಬದ್ಧವಾಗಿ ಜೋಡಿಸಿದ್ದು ಓದುಗರಿಗೆ ಅನುಕೂಲವಾಗಿದೆ. ಪತ್ರಕರ್ತನ ವೃತ್ತಿಯಲ್ಲಿ ಬಿಡುವು ಎಂಬುದಿರುವುದಿಲ್ಲ. ಮಾಡುವ ಕೆಲಸದಲ್ಲಿ ಕಾಳಜಿ, ತಲ್ಲೀನತೆ ಇದ್ದರೆ ‘ದುಡಿಮೆ- ಎಂಬುದೂ ಇರುವುದಿಲ್ಲ: ಇರಬಾರದು. ಅವೆರಡೂ ‘ಇಲ್ಲವುಗಳ ಮಧ್ಯೆ ಏನೇನಿರುತ್ತದೆ ಎಂಬುದು ಈ ಸಂಕಲನದ ಪ್ರತಿ ಪುಟದಲ್ಲಿ ವ್ಯಕ್ತವಾಗಿದೆ. ಈಗೇನು ಬಿಡಿ, ನಾಲ್ಕು ಗೋಡೆಗಳ ಮಧ್ಯೆ ಕೂತೇ ಜಗತ್ತನ್ನು ಆವಿರ್ಭವಿಸಿಕೊಳ್ಳಲು ಬೇಕಾದಷ್ಟು ತಂತ್ರಜ್ಞಾನ ಲಭ್ಯವಿದೆ. ಸುದ್ದಿಯ ಹಸಿವೆ (ಹಂಗರ್) ಇದ್ದರೆ ಕಣ್ಣು-ಕಿವಿ-ಕೈಕಾಲುಗಳನ್ನಷ್ಟೇ ಬಳಸಿಕೊಂಡು ಎಂತೆಂಥ ನಿಧಿನಿಕ್ಷೇಪಗಳನ್ನು ಪತ್ತೆಹಚ್ಚಬಹುದು ಎಂಬುದನ್ನು ಹಂಗರಹಳ್ಳಿಯ ಗಣಿಯಲ್ಲಿನ ಬರ್ಬರ ಪ್ರಸಂಗವನ್ನು ತೆರೆದಿಟ್ಟವರು ಸುದೇಶ ದೊಡ್ಡಪಾಳ್ಯ. ಕಾಲಗರ್ಭದಲ್ಲಿ ಹೂತುಹೋಗಿದ್ದನ್ನು ಮತ್ತೆ ಎತ್ತಿ ನಮ್ಮ ಕೈಗಿಟ್ಟಿದ್ದಾರೆ. ಓಡುವ ಸಮಾಜವನ್ನು ಓದುವ ಸಮಾಜವನ್ನಾಗಿ ಮಾಡಲು ಇಂಥ ಗಣಿಗಾರಿಕೆ ನಡೆಯುತ್ತಲೇ ಇರಬೇಕು ಎಂದು ನಾಗೇಶ ಹೆಗಡೆ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.