`ಇಳಿಸಲಾಗದ ಶಿಲುವೆ' ಕೃತಿಯು ರಘುನಾಥ ಚ.ಹ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಲಂಕೇಶರು ಒಮ್ಮೆ 'ಅತಿಯಾದ ವೈಚಾರಿಕತೆ ಕೂಡ ಬದುಕನ್ನು ಶುಷ್ಕವಾಗಿ ಮಾಡುತ್ತದೆ' ಎಂದು ಹೇಳಿದ್ದರು. ಆ ಮಾತನ್ನು ರಘುನಾಥ್ ಅವರ ಬರವಣಿಗೆ ನೆನಪಿಸುವಂತಿದೆ. ಭಾರತದ ಮಟ್ಟಿಗೆ ಪತ್ರಿಕೋದ್ಯಮದಲ್ಲಿ ಎರಡು ದೊಡ್ಡ ಮನಸ್ಸುಗಳು ಈ ದೇಶವನ್ನು ಕಟ್ಟುವಲ್ಲಿ ಕೆಲಸ ಮಾಡಿವೆ. ಒಂದು ಗಾಂಧಿ, ಇನ್ನೊಂದು ಬಾಬಾ ಸಾಹೇಬ್ ಅಂಬೇಡ್ಕರ್, ಈ ಎರಡೂ ಮನಸುಗಳ ಕನಸುಗಳ ನೆರಳು ರಘುನಾಥರ ಮನಸ್ಸಿನಲ್ಲಿ ಹಾಯ್ದುಹೋಗಿದೆ ಎಂಬುದನ್ನು ಇಲ್ಲಿನ ಲೇಖನಗಳು ಸಾಕ್ಷೀಕರಿಸುತ್ತವೆ. 'ಇಳಿಸಲಾಗದ ಶಿಲುಬೆ' ಕೃತಿಯ ಶೀರ್ಷಿಕೆಯೇ ಜಗದ ದುಃಖಗಳನ್ನು ಅರಿಯುವ ಮಾತನ್ನು ಹೇಳುತ್ತಿದೆ. ಈ ಹೊತ್ತಿನ ಮತ್ತು ಯಾವತ್ತಿನ ಈ ದೇಶದಲ್ಲಿ ಜಾತಿ, ಧರ್ಮ, ಕೋಮುವಾದ ಮತ್ತೆ ಮತ್ತೆ ಫೂತ್ಕರಿಸುತ್ತಲೇ ಇವೆ. ಇವುಗಳನ್ನು ಬೇರುಸಹಿತ ಕೀಳಲು ಸಾಧ್ಯವಿಲ್ಲ. ಆದರೆ, ಕೊನೆ ಪಕ್ಷ ಹದಮಾಡಲು ಪ್ರಯತ್ನಿಸಬಹುದು. ಹಾಗೆ ಹದ ಮಾಡುವ ಕೆಲಸವನ್ನು ರಘುನಾಥ್ ಬರೆಯುವ ಮೂಲಕ ಮಾಡುತ್ತಿದ್ದಾರೆ. ಕೆಲವು ಲೇಖನಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕಠಿಣ ಶಬ್ದಗಳಲ್ಲಿ ಹೇಳಿದ್ದಾರಾದರೂ, ಯಾರ ವಿರುದ್ಧ ಹೇಳಿದ್ದಾರೋ ಅವರು ಅದನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಅವರ ಬರವಣಿಗೆಯಿದೆ. ಅಕ್ಷರಗಳನ್ನು ವಾಕ್ಯ ಮಾಡುವಾಗ ತುಂಬ ಸೂಕ್ಷ್ಮವಾಗಿ ಬರೆಯುತ್ತಾ, ಆ ವಾಕ್ಯ ಮಲಿನವಾಗದಂತೆ ಎಚ್ಚರವಹಿಸುವುದು ರಘುನಾಥ್ ಅವರಿಗೆ ಇರುವ ವಿಶೇಷ ಗುಣ ಎನ್ನುತ್ತಾರೆ ಸುಬ್ಬು ಹೊಲೆಯಾರ್.
©2025 Book Brahma Private Limited.