‘ದೂರದೇಶವಾಸಿ’ ಕಿರಣ್ ಉಪಾಧ್ಯಾಯ ಅವರ ಕೃತಿಯಾಗಿದೆ. ಇದಕ್ಕೆ ವಿಶ್ವೇಶ್ವರ ಭಟ್ ಅವರು ಬರೆದ ಬೆನ್ನುಡಿ ಹೀಗಿದೆ; ಕಿರಣ್ ಉಪಾಧ್ಯಾಯ ಅವರು ಅನೇಕ ವರ್ಷಗಳಿಂದ ಬೆಹರೈನ್ ವಾಸಿಯಾಗಿರಬಹುದು, ಆದರೆ ಅವರು ಕರ್ನಾಟಕದಲ್ಲಿಯೇ ಹೆಚ್ಚು ಇರುತ್ತಾರೆ ಎಂಬ 'ಅಪಖ್ಯಾತಿ' ಇದೆ. ಹೀಗಾಗಿ 'ದೂರದೇಶವಾಸಿ'ಯಾಗಿಯೂ ಅವರು ಹತ್ತಿರದವರು. ಅವರು ಬರೆದ ಅಂಕಣಗಳನ್ನು ಓದುವಾಗ ಎಷ್ಟೋ ಸಲ ಅವರು ದೂರದೇಶವಾಸಿಯಲ್ಲ. ಇಲ್ಲೇ ನಮಗೆ ಹತ್ತಿರದವರು ಎಂದು ಎನಿಸಿದ್ದಿದೆ. ಅವರು ಆಯ್ದುಕೊಳ್ಳುವ ವಸ್ತು ಸೀಮಾತೀತ. ಹೀಗಾಗಿ ಅದು ದೂರದ ವಿಷಯ ಎನಿಸಿದರೂ, ನಿರೂಪಣೆ, ಶೈಲಿ, ಭಾಷ ಸೊಗಡು ಮತ್ತು ಪ್ರಸ್ತುತಿಯಲ್ಲಿ ಸನಿಹದ್ದೆನಿಸುತ್ತದೆ. ಯಾವ ವಿಷಯದ ಬಗ್ಗೆ ಬರೆದರೂ, ನಮಗೆ ಅಪ್ತವಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ವಿದೇಶವಾಸಿಯಾಗಿಯೂ ಅವರ ವಿಷಯ ಗ್ರಹಿಕೆ, ಬಿತ್ತರ, ಸಂವೇದನೆ ಮಾತ್ರ ಈ ನೆಲದ್ದು. ಬೊಗಟೆ ಅಲ್ಲಿದ್ದರೂ ತಾಯಿಬೇರು ಮಾತ್ರ ಕಾಲಬುಡದಲ್ಲೇ. ಹೀಗಾಗಿ ಯಾವ ವಿಷಯವನ್ನೇ ಅಗಲಿ, ಅದನ್ನು ದೇಶ-ವಿದೇಶಗಳ ನೆಲೆಯಲ್ಲಿ ನೋಡುವುದು, ವಿಮರ್ಶಿಸುವುದು ಅವರಿಗೆ ಸಾಧ್ಯವಾಗಿದೆ. ಹೀಗಾಗಿ ಅವರ ಅಂಕಣದ ಪಿಚ್ ಸಹಜವಾಗಿ ವಿಕಾಲವಾಗಿ ಅವರಿಸಿಕೊಳ್ಳುತ್ತದೆ. ಕಿರಣ್ ಏನೇ ಬರೆದರೂ, ಅದರಲ್ಲಿ ಅಧ್ಯಯನ, ಪ್ರವಾಸ, ಒಡನಾಟ, ತಕ್ಕಮಟ್ಟಿಗಿನ ಸಂಶೋಧನೆ, ಅನುಭವದ ಒಳನೋಟ ಇರುವುದನ್ನು ಗ್ರಹಿಸಬಹುದು. ಮಾಹಿತಿಯ ಹೊರೆಯಲ್ಲಿ ಅವರು ಓದುಗನನ್ನು ಮುಳುಗಿಸುವುದಿಲ್ಲ. ಅದನ್ನು ಒಂದು ಆಪ್ತ, ನವಿರಾದ, ಅನುಭವಗಳಿಂದ ಆರ್ದ್ರಗೊಳಿಸುತ್ತಾರೆ. ಈ ತೇವಾಂಶವೇ ಅವರ ಅಂಕಣ ಗುಣ ಎಂದು ನನಗೆ ಮನವರಿಕೆಯಾಗಿದೆ.
©2024 Book Brahma Private Limited.