“ಪಿಟ್ಕಾಯಣ” ರಾಜಾರಾಂ ತಲ್ಲೂರು ಅವರ ಅಂಕಣಗಳ ಸಂಗ್ರಹವಾಗಿದೆ. ವಾರ್ತಾಭಾರತಿಯಲ್ಲಿ ಪ್ರತೀವಾರ ಪ್ರಕಟವಾಗುತ್ತಿದ್ದ ಅಂಕಣದ ಸಂಗ್ರಹವಾಗಿದೆ. ಪಿಟ್ಯಾಯಣದ ಬರೆಹಗಳು ಹೆಚ್ಚಾಗಿ, ಅವು ಪ್ರಕಟಗೊಳ್ಳುವ ಹಿಂದಿನ ವಾರದಲ್ಲಿ ಸಂಭವಿಸಿದ್ದ ಸುದ್ದಿಯೊಂದರ ಬೆನ್ನು ಹತ್ತಿ ಸಂಗ್ರಹಿಸಿದ ಮಾಹಿತಿಗಳಾಗಿದೆ. ಒಂದು ವರ್ಷದ ಕಾಲ ವಾರ್ತಾ ಭಾರತಿಯಲ್ಲಿ ಸಮಕಾಲೀನ ಸಂಗತಿಗಳಿಗೆ ಬರೆದ ಅಂತರಂಗದ ಕಣ್ಣಿನ ವ್ಯಾಖ್ಯಾನ ಇದು. ಇನ್ನು, ಈ ಕೃತಿಯ ತಾತ್ವಿಕ ಚಹರೆಯನ್ನು ಚರ್ಚಿಸುವುದಾದರೆ, 'ಅಂಟೋನಿಯೋ ಗ್ರಾಮ್ಮಿ ಮಂಡಿಸುವ ಆರ್ಗಾನಿಕ್ ಬುದ್ದಿಜೀವಿಯ ನೋಟ ಇಲ್ಲಿ ಕಂಡುಬರುತ್ತದೆ. ಅಂದರೆ, ಎಲ್ಲೂ ಅಬ್ಬರವಿಲ್ಲದೆ, ಹೇಳುವುದನ್ನು ಮರೆಮಾಚದೆ, ಸಲೀಸಾಗಿ ವಿಚಾರಗಳನ್ನು ಲೇಖಕರು ಮಂಡಿಸುತ್ತಾರೆ. ಇಲ್ಲಿ ಯಾರಿಗೂ ಅವಮಾನಿಸದೆ, ಬದಲಾವಣೆಯಲ್ಲಿ ಪಾಲ್ಗೊಳ್ಳುವ ಮಾದರಿಯೊಂದು ಕಂಡುಬರುತ್ತದೆ. ಈ ಮಾದರಿಯನ್ನು ಆಂಟೋನಿಯೋ ಗ್ರಾಮ್ಮಿ 'ಮಂದಕ್ರಾಂತಿ' ಎಂದು ಕರೆಯುತ್ತಾರೆ. ಅಂತಹ ಪಲ್ಲಟಗಳನ್ನು ಈ ಕೃತಿಯೂ ಸಹ ಪ್ರಚೋದಿಸುತ್ತದೆ. ಅಂದರೆ, ಪ್ರಜಾತಂತ್ರ ವ್ಯವಸ್ಥೆಯನ್ನು ನಂಬಿಸುವ ಸರ್ಕಾರಗಳು, ಆಡಳಿತದಲ್ಲಿರುವ ಹುಳುಕುಗಳ ಬಗ್ಗೆ ಜನತಂತ್ರವನ್ನು ಎಚ್ಚರಿಸುವ ಮತ್ತು ದುಡಿಮೆಯ ಪ್ರತಿಫಲ ಕುರಿತ ಚರ್ಚೆಗಳು ಇಲ್ಲಿ ಮನನೀಯವಾದುವು. ಆದ್ದರಿಂದಲೇ, ಈ ಪ್ರಕ್ರಿಯೆಯೇ 'ಆರ್ಗಾನಿಕ್ ಬುದ್ದಿಜೀವಿಯ ನೋಟ' ಎಂದು ಗುರುತಿಸಿದ್ದು. ಇಂತಹ ಅಪ್ಪಟ ಮೆಲುಕುಗಳ ಚಿತ್ರಣವೇ ಈ ಪಿಟ್ಕಾಯಣ.
©2025 Book Brahma Private Limited.