`ಬಹುವಚನ’ ಅಗ್ರಹಾರ ಕೃಷ್ಣಮೂರ್ತಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ನವೆಂಬರ್ 2003 ರಿಂದ ಸುಮಾರು ಎರಡು ವರ್ಷಗಳ ಕಾಲ ಹದಿನೈದು ದಿನಕ್ಕೊಮ್ಮೆ ಶುಕ್ರವಾರದಂದು ಈ ಅಂಕಣ ಬಹುವಚನ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗುತ್ತಿತ್ತು. ಬಹುವಚನ ಎನ್ನುವ ಈ ಅಂಕಣವು ನಿಜದಲ್ಲಿ ಬಹುತ್ವಗಳ ಹುಡುಕಾಟವೇ ಆಗಿದೆ. ವರ್ತಮಾನದ ಸಂಗತಿಗಳಿಗೆ ಸಲ್ಲುವ ಚರಿತ್ರೆಯನ್ನು, ಈ ಎರಡರಿಂದಾಗಿ ಹುಟ್ಟುವ ಭವಿಷ್ಯದ ಕನವರಿಕೆಗಳನ್ನು ಕೃತಿಯಲ್ಲಿ ನೋಡಬಹುದು. ಜನಸಮುದಾಯವನ್ನು ಕಣ್ಣ ಮುಂದೆ, ಬೆನ್ನ ಹಿಂದೆ ಕಾಡುವ, ಪ್ರಭಾವಿಸುವ ಸಂಗತಿಗಳು ಇಲ್ಲಿ ಆದ್ಯತೆ ಪಡೆದಿವೆ. ಅದು ಕನ್ನಡ ರೊಟ್ಟಿ, ಇಂಗ್ಲಿಷ್ ಬೆಣ್ಣೆಯಾಗಬಹುದು, ಕಂಪ್ಯೂಟರ್ ಎಂಬ ಮಹಾ ಮಾಯೆಯಾಗಬಹುದು. ಸಾಮಾಜಿಕ ಎಚ್ಚರವನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಇಲ್ಲಿನ ಲೇಖನಗಳು ಮತ್ತೆ ಮತ್ತೆ ತಮಗೆ ತಾವೇ ಎಂಬಂತೆ ಹೇಳಿಕೊಳ್ಳುತ್ತಾ ಹೋಗುತ್ತವೆ. ಇಲ್ಲಿನ ಲೇಖನಗಳಿಗೆ ಆಪ್ತಗುಣವೊಂದು ಒದಗಿರುವುದು ಇವು ಉಳಿಸಿಕೊಳ್ಳಲು ಹಂಬಲಿಸುವ ಪ್ರಾಮಾಣಿಕತೆಯಲ್ಲಿ. ಮೂಲತಃ ಅಗ್ರಹಾರ ಭಾರತದ ಬಹುತ್ವಗಳಿಗೆ ಸಮಾನವೇದಿಕೆಯನ್ನು ಹುಡುಕುವ ಹಂಬಲದವರು. ಅದು ಗಾಂಧಿ, ಜನತಾ ವಿಶ್ವವಿದ್ಯಾಲಯದ ಮಹಾಗುರುವಾದ ಎಂ ಡಿ ಎನ್ ಅವರಾಗಲಿ, ಹೂವಾಡಿಗ ಕೆಎಸ್‌ನ ಅವರಾಗಲಿ, ಜಗತ್ತಿನ ಯಾವ ಮೂಲೆಯಿಂದ ಲಾದರೂ ಸರಿ ಅದನ್ನು ಎತ್ತಿ ಹಿಡಿಯುವ ಅಂಶಗಳನ್ನು ಈ ಕೃತಿ ಹುಡುಕುತ್ತದೆ. ಬದುಕಿನ ಆರೋಗ್ಯದಲ್ಲಿ ಆ ಆರೋಗ್ಯವನ್ನು ಹೆಚ್ಚಿಸುವ ಕಲೆಗಳನ್ನು ಮರೆಯಬಾರದು ಎನ್ನುವುದೂ ಇಲ್ಲಿನ ಮತ್ತೊಂದು ಕಾಳಜಿಯಾಗಿದೆ. ಸಾರ್ವಜನಿಕ ವಿಷಯಗಳನ್ನು ಕುರಿತ ಅಂಕಣಗಳಿಗೂ ಕಾವ್ಯಗುಣ ಇರಬಹುದೆನ್ನುವುದನ್ನು ಕಾಣಿಸಿದ ಅಪರೂಪದ ಕೃತಿಗಳಲ್ಲೊಂದು ಬಹುವಚನ.
©2025 Book Brahma Private Limited.