ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭೀಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-1ರ ಭಾಗವಾಗಿ ಡಾ. ಕೆ. ಚಿನ್ನಪ್ಪಗೌಡ ಅವರು ರಚಿಸಿದ ಕೃತಿ-ತುಳುಮಾನ್ಯ. ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ ರೈ ಅವರು ಕೃತಿಗೆ ಮುನ್ನುಡಿ ಬರೆದು ‘ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತುಳು ಅನನ್ಯತೆಯನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಜನಪರ ನಿಲುವು ಮತ್ತು ಕಾಯಕದಿಂದ ತುಳುವಿಗೆ ಮಾನ್ಯತೆಯನ್ನು ತಂದುಕೊಟ್ಟ ಸಂಕಥನವನ್ನು ಲೇಖಕರು ತಲಸ್ಪರ್ಶಿಯಾಗಿ ಅಧ್ಯಯನದ ಮೂಲಕ ಈ ಕೃತಿಯಲ್ಲಿ ವಿವರಿಸಿದ್ದಾರೆ. ಆ ಮೂಲಕ ಶ್ರೀ ಹೆಗ್ಗಡೆಯವರು ತುಳು ಮಾನ್ಯರೂ ಆದ ಐದು ದಶಕಗಳ ಸಾಂಸ್ಕೃತಿಕ ಇತಿಹಾಸವನ್ನು ಅನಾವರಣ ಮಾಡಿದ್ದಾರೆ. ವಿಶ್ವತುಳು ಸಮ್ಮೇಳನವು ತುಳುನಾಡಿನಲ್ಲಿ ತುಳುವರಲ್ಲಿ ಉಂಟು ಮಾಡಿದ ಪ್ರತಿಫಲನಗಳ ಪ್ರಸ್ತಾವ ಕೂಡ ಇಲ್ಲಿ ದೊರೆಯುತ್ತದೆ. ತುಳು ಜಗತ್ತಿನ ಭೌತಿಕ ಸಂರಕ್ಷಣೆಯ ರೂಪವಾದ ‘ಮಂಜೂಷ ವಸ್ತು ಸಂಗ್ರಹಾಲಯ’ದ ಕುರಿತು ಮಾಹಿತಿಪೂರ್ಣವಾದ ವಿವರಣೆ ಇದೆ.ಪರಂಪರೆಯ ಬಗೆಗಿನ ಒಲವು, ಸಂಗ್ರಹ ಪ್ರವೃತ್ತಿಯ ಗೀಳು, ಹೇಗೆ ತುಳು ಸಂಸ್ಕೃತಿ ಮಗ್ಗಲುಗಳನ್ನು ಸ್ಪರ್ಶಿಸಬಹುದು ಎನ್ನುವ ಸೂಚನೆಗಳು ಇಲ್ಲಿ ದೊರೆಯುತ್ತವೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತುಳು ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬದುಕಿದ ಮತ್ತು ಪುನರುಜ್ಜೀವನ ಮಾಡಿದ ಬಹುಬಗೆಗಳನ್ನು ಅಧ್ಯಯನಪೂರ್ಣ ಮಾಹಿತಿಗಳ ನೆರವಿನಿಂದ ಅನಾವರಣ ಮಾಡಿದ್ದಾರೆ. ಈ ದೃಷ್ಟಿಯಿಂದ ಈ ಗ್ರಂಥವು ಒಂದು ಅಧ್ಯಯನಶೀಲ ಸಾಂಸ್ಕೃತಿಕ ದಾಖಲೆಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಹಿನ್ನೆಲೆ-ಧರ್ಮಸ್ಥಳದ ಮಾದರಿ, ತುಳುವ ಜಗತ್ತು-ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕೃಷಿಮೇಳಗಳು ಮತ್ತು ತುಳುವ ಸಂವರ್ಧನೆ, ಮಂಜೂಷ ವಸ್ತು ಸಂಗ್ರಹಾಲಯ-ಹೆಗ್ಗಡೆಯವರು ಕಟ್ಟಿಕೊಟ್ಟ ತುಳುವ ಜಗತ್ತು, ವಿಶ್ವ ತುಳು ಸಮ್ಮೇಳನ-ಹೆಗ್ಗಡೆಯವರು ತೆರೆದಿಟ್ಟ ತುಳು ವಿಶ್ವ, ತುಳು ಸಂಸ್ಕೃತಿ ಗ್ರಾಮ, ತುಳು ಮಾನ್ಯ ಹೀಗೆ ವಿಷಯ ಸಮೃದ್ಧಿಯ ಒಟ್ಟು 11 ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.