ಎಸ್‌ಕೆಡಿಆರ್ ಡಿಪಿ ಅಭಿವೃದ್ಧಿಯ ಬಾಗಿಲು ತೆರೆದ ರೀತಿಯೂ ಒಂದು ಮಾದರಿಯೇ. ಇದನ್ನು ತಿಳಿಯಪಡಿಸುವುದೇ ಲೇಖಕ ನಾ. ಕಾರಂತ ಪೆರಾಜೆಯವರ ಕೃತಿ-ʼಭಾಗ್ಯದ ಬಾಗಿಲುʼ ಚಿಂತಕ ಡಾ. ಜಿ.ವಿ ಜೋಶಿ ಅವರು ಕೃತಿಗೆ ಮುನ್ನುಡಿ ಬರೆದು ‘ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರ ಆಡಳಿತ ವ್ಯವಸ್ಥೆಯನ್ನು ಮತ್ತು ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ ಆದ ಬೆಳವಣಿಗೆಯನ್ನು ಹತ್ತಿರದಿಂದ ನೋಡಿ ಶ್ಲಾಘಿಸಿದ್ದ ಶಿವರಾಮ ಕಾರಂತರು, ವೀರೇಂದ್ರ ಹೆಗ್ಗಡೆಯವರ ಅಭಿವೃದ್ಧಿ ಆಡಳಿತ ಪರಿಪಾಲನೆಯ ಕ್ಷಮತೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದ ವಿಚಾರವು ಇಲ್ಲಿದೆ. ಗ್ರಾಮಾಭಿವೃದ್ಧಿ ಯೋಜನೆಯು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಯಾವ ರೀತಿಯಲ್ಲಿ ಆಶಾಕಿರಣವಾಗಿದೆ ಎನ್ನುವ ವಿಚಾರವು ಚರ್ಚೆಗೆ ಪೂರಕವಾಗಿದೆ. ಶ್ರೀ ಕ್ಷೇತ್ರದ ಆಡಳಿತ ಪರಂಪರೆಯಲ್ಲಿ ಅವಿಛ್ಚಿನ್ನವಾಗಿ ಹರಿದು ಬಂದ ಶಿಸ್ತು, ಅಚ್ಚುಕಟ್ಟುತನ ಮತ್ತು ಸಂಪನ್ಮೂಲಗಳ ಸದ್ವಿನಿಯೋಗ ಎಸ್‌ಕೆಡಿಆರ್ ಡಿಪಿಯ ಮೇಲೆ ಪ್ರಭಾವ ಬೀರಿದೆ. . ಹಳ್ಳಿಗಳಲ್ಲಿ ಕೃಷಿ ಬೆಳೆದರೆ ಕೃಷಿಯೇತರ ರಂಗಗಳು ಬೆಳೆಯಲು ಸಾಧ್ಯವೆನ್ನುವ ಪರಿಯನ್ನು ಯೋಜನೆ ತೋರಿಸಿಕೊಟ್ಟಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿಕೊಂಡಿರುವ ಇತಿಮಿತಿಗಳ ಹೊರತಾಗಿಯೂ ಅನೇಕ ವಿಚಾರೋಕ್ತಿಗಳನ್ನು ವಿಶ್ಲೇಷಿಸಲಾಗಿದೆ. ವಿಶೇಷವಾಗಿ ಈ ಪುಸ್ತಕದಲ್ಲಿ, ಪೆರಾಜೆಯವರು ಅಂಕಿ ಅಂಶಗಳನ್ನು ತಳ ಮಟ್ಟದ ಸಣ್ಣ ಹಿಡುವಳಿದಾರರ ಅನುಭವಗಳೊಂದಿಗೆ ಹಿತವಾಗಿ ಬೆಸೆದ ರೀತಿ ಅನನ್ಯವಾಗಿದೆ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.