ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಒಡನಾಟದ ಕುರಿತ ಅಭಿಮಾನವನ್ನು ಸಾರುವ ಕೃತಿ ʼಧರ್ಮಸ್ಥಳದ ರಥಿಕರುʼ. ದಾನ ಪರಂಪರೆಯ ಮೂಲಕ ನಾಡಿಗೆ ಮಾದರಿ ಕ್ಷೇತ್ರವಾಗಿ, ನುಡಿಗೆ ದಾರಿದೀಪವಾಗಿ, ಬದುಕಿನ ಪಥಕ್ಕೆ ಮಾರ್ಗದರ್ಶಿ ಸೂತ್ರವಾಗಿ ಶ್ರೀ ಕ್ಷೇತ್ರವು ಭಕ್ತರಿಗೆ ಪಥದರ್ಶನ ಮಾಡುತ್ತಿದೆ.
ಸಾಹಿತಿ ಡಾ. ಕೆ. ದೇವರಾಜ್ ಅವರು ಕೃತಿಗೆ ಮುನ್ನುಡಿ ಬರೆದು ‘ಶ್ರೀ ವೀರೇಂದ್ರ ಹೆಗ್ಗಡೆಯವರು ಸಾರಥಿಯಾಗಿ ಧರ್ಮರಥವನ್ನು ಮುನ್ನಡೆಸುವವರು. ಮಹಾಭಾರತದಲ್ಲಿ ಅರ್ಜುನ ರಥಿಕನಾಗಿ ಸಾಧಿಸಿದ ಧರ್ಮವಿಜಯಕ್ಕೆ, ಶ್ರೀ ಕೃಷ್ಣ ಪರಮಾತ್ಮನ ಸೂತ್ರಧಾರತ್ವ ಅರ್ಥಾತ್ ಸಾರಥ್ಯವೇ ಕಾರಣ. ಅಂತೆಯೇ ಸಮಕಾಲೀನ ಪ್ರಪಂಚದಲ್ಲಿ ಶ್ರೀ ಕ್ಷೇತ್ರದಿಂದ ನಡೆಯುತ್ತಿರುವ ಧರ್ಮಕಾರ್ಯವೂ ಸಾಮಾಜಿಕ ಸ್ವಾಸ್ಥ್ಯ ಸಾಧನೆಯ ವಿಜಯದಂತೆ ಪರಿಗಣಿಸಬಹುದು. ಹೆಗ್ಗಡೆಯವರಿಗೆ ತಮ್ಮ ನೌಕರವೃಂದದವರ ಮೇಲೆ ಅಪಾರ ಅಭಿಮಾನ. ಲೇಖಕ ಎಲ್.ಎಚ್ ಮಂಜುನಾಥ್ ಅವರು ಬರೆದ ʼಧರ್ಮಸ್ಥಳದ ರಸಿಕರುʼ ಪುಸ್ತಕವು, ಧರ್ಮಸ್ಥಳ ಸಂಸ್ಥೆಗಳಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆಗಿದ್ದ ಹದಿನೇಳು ಆಯ್ದ ಸಿಬ್ಬಂದಿಗಳ ಬದುಕಿನ ಪಥವನ್ನು ಪರಿಶೀಲಿಸುವ ವಿಚಾರೋಕ್ತಿಯನ್ನು ಒಳಗೊಂಡಿರುತ್ತದೆ. ಹೆಗ್ಗಡೆಯವರು ಕ್ಷೇತ್ರದ ವಿವಿಧ ಇಲಾಖೆ, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದವರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಸಿಬ್ಬಂದಿಗಳು ಹೆಗ್ಗಡೆಯವರ ಚಿಂತನೆಗಳಿಗೆ ಮೂರ್ತಸ್ವರೂಪವನ್ನು ನೀಡುವಲ್ಲಿ ಸದಾ ತತ್ವರರಾಗಿರುತ್ತಾರೆ’ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.