ಪತ್ರಕರ್ತ, ಲೇಖಕ ಪ್ರಕಾಶ ಕುಗ್ವೆ ಅವರ ಆಯ್ದ ಕಿರುಬರಹಗಳ ಸಂಕಲನ ಸೀಳುನೋಟ. ಈ ಕೃತಿಗೆ ಹಿರಿಯ ಪರಿಸರತಜ್ಞ, ವಿಜ್ಞಾನ ಬರಹಗಾರರಾದ ನಾಗೇಶ ಹೆಗಡೆ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಈ ಸಂಕಲನದಲ್ಲಿ ವಾಸ್ತವ ಬದುಕಿನ ಸಾಕಷ್ಟು ಸೀಳುನೋಟಗಳಿವೆ. ವರದಿಗಾರನೊಬ್ಬ ಕಣ್ಣಂಚಿನಲ್ಲಿ ಕಂಡ ಅಪಸವ್ಯಗಳಿವೆ. ಪತ್ರಕರ್ತನ ಕೆಲಸವೆಂದರೆ ಹಗ್ಗದ ಮೇಲಿನ ನಡಿಗೆಯೇ ಸರಿ. ಅದೇ ಕಾರಣಕ್ಕೆ ಇಲ್ಲಿ ದಾಖಲಾದ ಅನೇಕಾನೇಕ ನಾಟಕೀಯ ಪ್ರಸಂಗಗಳಲ್ಲಿ ಪಾತ್ರಧಾರಿಗಳ ಹೆಸರು ನಮಗೆ ಗೊತ್ತಾಗುವುದಿಲ್ಲ. ಅವರಾಡುವ ನಾಟಕವಷ್ಟೇ ಕಾಣುತ್ತದೆ ಎಂದಿದ್ದಾರೆ ನಾಗೇಶ ಹೆಗಡೆ. ಜೊತೆಗೆ ನಾವು ಇತಿಹಾಸದಿಂದ ಯಾವುದೇ ಪಾಠ ಕವಿಯಲಾರೆವು ಎಂಬುದೇ ಚರಿತ್ರೆಯಿಂದ ನಮಗೆ ಸಿಗುವ ಪಾಠ ಎಂದು ದಕ್ಷಿಣಾ ಆಫ್ರಿಕಾದ ಧರ್ಮಗುರು ಮತ್ತು ಸಮಾಜ ಸುಧಾರಕ ಡೆಸ್ಮಂಡ್ ಟುಟು ಹೇಳಿದ್ದುಂಟು. ಅಂಥ ಪಾಠವಾದರೂ ಚರಿತ್ರೆಯ ಪಾಠ ಹೇಳುವವರಿಗೆ ಮತ್ತು ಚರಿತ್ರೆಯನ್ನು ಮರು ರೂಪಿಸ ಬಯಸುವವರಿಗೆ ಸಿಗುತ್ತಿರಬೇಕು. ಆ ಕಾರಣದಿಂದಲೇ ಇಲ್ಲಿನ ಟಿಪ್ಪಣಿಗಳು ದಶಕಗಳಷ್ಟು ಹಳತಾದರೂ ಮತ್ತೆ ಅವನ್ನು ಈಗ ಮುನ್ನೆಲೆಗೆ ತರಲು ನಿರ್ಧರಿಸಿದ್ದಕ್ಕೆ ಪ್ರಕಾಶ ಕುಗ್ವೆ ಮತ್ತು ಪ್ರಕಾಶಕ ಡಾ. ಗಣೇಶ ಅಮೀನಗಡ ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಈ ಕೃತಿಯಲ್ಲಿ ಪತ್ರಕರ್ತ ಪ್ರಕಾಶ ಕುಗ್ವೆ ತಾವು ಬರೆದ ಸುದ್ಧಿಗಳಲ್ಲಿ ಆಯ್ದ ಕಿರು ಬರಹಗಳನ್ನು ಸಂಕಲನ ಮಾಡಿದ್ದಾರೆ.
©2024 Book Brahma Private Limited.