ಲೇಖಕ ಹೊಳಲು ಶ್ರೀಧರ ಅವರು ವಿವಿಧ ಪತ್ರಿಕೆಗಳ ವಾಚಕರ ವಾಣಿ ವಿಭಾಗಕ್ಕೆ ಬರೆದ ಪತ್ರಗಳ ಸಂಗ್ರಹ-ಪತ್ರ ಪ್ರಪಂಚ. ಸಣ್ಣ ಸಣ್ಣ ವೈಚಾರಿಕ ಲೇಖನ,ಕುಂದುಕೊರತೆ, ಪ್ರಶಂಸೆ,ಟೀಕೆ,ಸರ್ಕಾರಿ ವ್ಯವಸ್ಥೆಯ ಲೋಪದೋಷಗಳು ಕುರಿತಾದ ಪತ್ರಗಳಿವೆ.ಇದು ಯಾವುದೇ ವಿಷಯದ ನಿರ್ದಿಷ್ಟ ಮಿತಿ ಇಲ್ಲದೇ ತಾವು ಕಂಡದ್ದನ್ನು ಸಂಬಂಧಿಸಿದವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಈ ತರಹದ ನಿರ್ಭೀತ ಅಂಕಣಕಾರರು ನಿಜಕ್ಕೂ ‘ಕೊರೋನ ವಾರಿಯರ್ಸ್’ ಎನ್ನುವಂತೆ ‘ಪತ್ರ ವಾರಿಯರ್ಸ್’ ಎಂದೇ ಕರೆಯಬಹುದು. ಬರಹಗಾರರು, ಪುಸ್ತಕ, ಪತ್ರಿಕೋದ್ಯಮ ಮುಂತಾದವರನ್ನು ಗುರುತಿಸುವಂತೆ ಸಮಾಜವನ್ನು ಸ್ವಸ್ಥವಾಗಿಡಲು ಶ್ರಮಿಸುತ್ತವೆ.
‘ಸಾಮಾನ್ಯ ಸ್ಪಂದನೆ’ ವಿಭಾಗದಲ್ಲಿ ‘ಹೀಗೊಂದು ಒಗಟು’ ಶೀರ್ಷಿಕೆಯಲ್ಲಿ ಸಾರ್ವಜನಿಕರಿಗೆ ಆಗಾಗ್ಗೆ ಕಣ್ಣುಮುಚ್ಚಾಲೆ ಆಡಿಸುವ ಕರೆಂಟ್ ಅದನ್ನು ಒಗಟಿನ ರೂಪದಲ್ಲಿ ಬರೆದು ಅಂಕಣಕಾರರು ಚೆನ್ನಾಗಿ ತಿವಿದಿದ್ದಾರೆ.
ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಹಾರಿಹೋಗುವೆ; ನಾ ಹಕ್ಕಿಯಲ್ಲ/ ಬೆಳಗಿನಿಂದ ಸಂಜೆಯವರೆಗೆ ಆಗಾಗ ಬಂದುಹೋಗುವೆ; ನಾ ನೆಂಟನಲ್ಲ/ ಎಲ್ಲಾ ಮಲಗಿದ ನಂತರ ಮತ್ತೆ ಪ್ರತ್ಯಕ್ಷನಾಗುವೆ; ನಾ ಕಳ್ಳನಲ್ಲ! ಎನ್ನುತ್ತಾ ವಿದ್ಯುಚ್ಛಕ್ತಿ ಗ್ರಾಹಕರಿಗೆ ನೀಡುತ್ತಿರುವ ತೊಂದರೆಯನ್ನು ವ್ಯಂಗ್ಯವಾಗಿ ಚಿತ್ರಿಸುತ್ತಾರೆ. ಇದಲ್ಲದೆ ‘ಶಿಷ್ಯನ ಮುಂದೆ ಶಿಕ್ಷಕ’ ಎಂಬ ಶೀರ್ಷಿಕೆ ಶಿಕ್ಷಣ ಇಲಾಖೆಯ ಕುರುಡು ತೀರ್ಮಾನಗಳ ಬಗ್ಗೆ ಗಮನಸೆಳೆದಿದೆ. ‘ಅಂಬರೀಶ್ ಗೆದ್ದರೆ ಭೇಟಿ ಮಾಡುವುದೆಲ್ಲಿ?’ ಎಂಬ ಶೀರ್ಷಿಕೆ ‘ಜಾಗೃತಿ ಮೂಡಿಸುವ ಶಾಸಕ’ ಇವೆರಡರ ಅಂತರ ನೋಡಿಕೊಂಡರೆ ಸಾಕು ಹೇಗಿರಬೇಕು ಎಂಬುದು ಮನದಟ್ಟಾಗುತ್ತದೆ. ‘ಕಂಡಕ್ಟರನ ಸ್ತುತ್ಯ ಕಾರ್ಯ’ ಎಂಬ ಶೀರ್ಷಿಕೆ ‘ಮೈಸೂರಲ್ಲ ಮಂಡ್ಯ’ ಎಂಬ ಶೀರ್ಷಿಕೆ ‘ಕನ್ನಡಕ್ಕೆ ರ‍್ಯಾಂಕ್’, ‘ಜೆ.ಎಚ್.ಪಟೇಲರ ನಿಲುವು ಸಮರ್ಥನೀಯ’, ‘ರಸ್ತೆಯ ಮೇಲೆ ಒಕ್ಕಣೆ’ ಇಂತಹ ಹಲವಾರು ಗಮನ ಸೆಳೆಯುವ ಶೀರ್ಷಿಕೆಗಳ ವಿಷಯಗಳಿವೆ.
ಈ ಬಗೆಯ ನೂರಾರು ಪತ್ರಗಳಿವೆ. ಈ ಬರಹಗಳನ್ನು 30-40 ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡು ಬಂದಿರುವುದೇ ಒಂದು ಸಾಧನೆ. ಯಾವ ಯಾವ ಕಾಲದ ಘಟನಾವಳಿಗಳು ಕಂಡುಂಡ ಸಮಸ್ಯೆಗಳಿಗೆ ಕ್ಷ-ಕಿರಣ ಬೀರಿದ್ದು, ಅಧ್ಯಯನ ದೃಷ್ಟಿಯಿಂದ ಅವಶ್ಯ ಎನಿಸುತ್ತವೆ. ಇಲ್ಲಿನ ಪತ್ರಗಳು ಆಯಾ ಕಾಲಘಟ್ಟಗಳಲ್ಲಿ ಮೂಡಿ ಬಂದಿರುವುದರಿಂದ ಅಂದಿನ ಸಮಾಜದ ವ್ಯವಸ್ಥೆ,ಸ್ಥಿತಿಗತಿ, ಅಂಕುಡೊಂಕುಗಳು,ಸಮಸ್ಯೆಗಳನ್ನು ಮತ್ತೊಮ್ಮೆ ಅನಾವರಣಗೊಳಿಸುತ್ತವೆ.
©2024 Book Brahma Private Limited.