‘ಸಂಸಾರವೆಂಬ ಹಾರ(ರ್)ಮೋನಿಯಂ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಹಾಸ್ಯ ಕವನ ಸಂಕಲನ. ಈ ಕೃತಿಗೆ ಡಾ.ಕಬ್ಬಿನಾಲೆ ವಸಂತಭಾರಧ್ವಾಜ ಹಾಗೂ ಎಚ್.ಡುಂಡಿರಾಜ್ ಅವರ ಬೆನ್ನುಡಿ ಬರಹಗಳಿವೆ. ಸಾಮಾಜಿಕ ವಿಡಂಬನೆಯಾಗಿ ಹಾಸ್ಯಕವನಗಳನ್ನು ಬಳಸುವಲ್ಲಿಯೂ ಈ ಕವಿಯ ಕಾವ್ಯಸಿದ್ಧಿಯಿದೆ. ಓದುವಾಗ ಹಾಸ್ಯರಸಾಯನವೆನಿಸುತ್ತಲೇ ಸಮಾಜದಲ್ಲಿರುವ ವಿಸಂಗತಿಗಳ ತಡೆಗೆ ನಮ್ಮನ್ನು ಎಚ್ಚರಿಸುವ ಕಾರ್ಯವನ್ನು ಅವು ಮಾಡುತ್ತವೆ. ಅಂತರಂಗದಲ್ಲಿ ಅಂತಹ ವಿಪರ್ಯಾಸಗಳ ಕಡೆಗೆ ಒಂದು ಸಾತ್ವಿಕ ಅಸಹನೆಯನ್ನು ಉಂಟುಮಾಡುತ್ತವೆ. ಬಸ್ಸಿನಲ್ಲಿ ಹತ್ತಿರದಲ್ಲೇ ಕುಳಿತ ಮೋಹನಾಂಗಿ ಮೋಡಿಮಾಡುತ್ತಲೇ ಬೆರಳಿನ ಚಿನ್ನದುಂಗುರ ಕದಿಯುವುದು(ಚೋರಿ-ಚಕೋರಿ), ರಾಜಕಾರಣಿಗಳು ಸದಾ ಅಳುತ್ತಾ ಕಣ್ಣೀರು ಒರೆಸಿಕೊಳ್ಳುವುದು(ಅವಸ್ಥೆ), ಅವಿರೋಧದಿಂದ ದುಪ್ಪಟ್ಟು ಹೆಚ್ಚಳವಾಗುವ ಶಾಸಕರ ಭತ್ಯೆಪಗಾರಗಳು(ಅವಿರೋಧ ನಿರ್ಣಯ), ಶಿವ ಮತ್ತು ಗಂಗೆಯರು ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವುದು(ಪರದಾಟ) ಇತ್ಯಾದಿ ಈ ಸಾಲಿಗೆ ಸೇರುವ ಉತ್ತಮ ಕವನಗಳು ಎಂದಿದ್ದಾರೆ ಕಬ್ಬಿನಾಲೆ ವಸಂತಭಾರಧ್ವಾಜ. ಹಾಗೇ ಇತ್ತೀಚಿನ ದಿನಗಳಲ್ಲಿ, ಕನ್ನಡದಲ್ಲಿ ಹಾಸ್ಯ ಕವಿತೆಗಳನ್ನು ಬರೆಯುತ್ತಿರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕೈಲಾಸಂ, ನಾ.ಕ, ರಾಜರತ್ನಂ, ಅರಾಸೇ, ಬಿಳಿಗಿರಿ, ವೈಎನ್ಕೆ ನಂತರ ಈ ಪ್ರಕಾರ ಬಡವಾಗಿದೆ. ಇಂಥ ಹೊತ್ತಿನಲ್ಲಿ, ಹಾಸ್ಯ ಕವಿತೆಗಳನ್ನು ರಚಿಸಲು ಮನಸ್ಸು ಮಾಡಿರುವ ರಮೇಶ್ ಗುಬ್ಬಿ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು, ಈ ಪ್ರಯತ್ನದಲ್ಲಿ ಅವರಿಗೆ, ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಎಚ್.ಡುಂಡಿರಾಜ್.
©2024 Book Brahma Private Limited.