ಪ್ರಶಾಂತ ಆಡೂರರ ಹಾಸ್ಯ ಲೇಖನಗಳ ಸಂಗ್ರಹ- ಅಳ್ಳಿಟ್ಟು. ಈ ಕೃತಿಗೆ ಮುನ್ನುಡಿ ಬರೆದಿರುವ ವಸುಧೇಂದ್ರ ಅವರು ಲೇಖಕರ ಬಗ್ಗೆ ಹೇಳುತ್ತಾ, ’ಪ್ರಶಾಂತ ಆಡೂರರ ಕೈಯೊಳಗೆ ಲಾಲಿತ್ಯದ ಅಕ್ಷಯಪಾತ್ರೆ ಇದೆಯೇನೋ ಎಂಬ ಅನುಮಾನ ನನಗಾಗುತ್ತದೆ. ಹೆಂಡತಿ, ಮಗ, ಅವ್ವ, ಹುಬ್ಬಳ್ಳಿ ಊರು - ಇಷ್ಟರಾಗ ಅದೆಷ್ಟು ಲಾಲಿತ್ಯ ಹುಟ್ಟಿಸುತ್ತಾರೆ! ಮುದ ಕೊಡುವ ಹುಬ್ಬಳ್ಳಿ ಭಾಷೆಯೊಳಗೆ ಅವರು ಹೇಳುವ ಸಂಗತಿಗಳೆಲ್ಲ ಕಚಗುಳಿ ಇಡುತ್ತಲೇ ಹೋಗುತ್ತವೆ. ಅಚ್ಚರಿಯಾಗುವುದು, ಅವರು ಈವರೆಗೆ ಬರೆದ ನೂರಾರು ಹಾಸ್ಯ ಲೇಖನಗಳಿಗಾಗಿ ಅಲ್ಲ; ಇನ್ನೂ ಸಾವಿರಾರು ಅಂತಹ ಲೇಖನಗಳನ್ನು ಮುಂದೆಯೂ ಅವರು ಬರೆಯಬಲ್ಲರು ಎನ್ನುವ ಖಚಿತ ನಂಬಿಕೆ ಅವರ ಮೇಲೆ ಮೂಡುವುದರಿಂದಾಗಿ! ಸಾಮಾಜಿಕ, ರಾಜಕೀಯ, ಧಾರ್ಮಿಕ, ಆಧುನಿಕ - ಯಾವೊಂದು ಸಂಗತಿಗಳನ್ನೂ ಪ್ರಶಾಂತ್ ಬಿಟ್ಟುಕೊಡುವುದಿಲ್ಲ. ಬಾಣಂತನವನ್ನೂ ಬಿಡುವುದಿಲ್ಲ, ಕಾಂಟ್ರಾಸೆಪ್ಷನ್ ದಿನವನ್ನೂ ಮರೆಯುವುದಿಲ್ಲ. ಕಮೋಡ್ ದಿಕ್ಕನ್ನು ಚರ್ಚಿಸುತ್ತಲೇ, ಕುಂಕುಮ ತೊಗೊಂಡು ಹೋಗ್ರಿ ಎಂದು ಸಂಪ್ರದಾಯವನ್ನು ನುಡಿಯುತ್ತಾರೆ. ಶುದ್ಧ ಹಾಸ್ಯಕ್ಕೆ ಯಾವ ಅಶ್ಲೀಲತೆಯ ಸೋಂಕೂ ಬೇಕಿಲ್ಲವೆನ್ನುವುದನ್ನು ಅರ್ಥ ಮಾಡಿಸುತ್ತಾರೆ. ಅದೇ ವಸ್ತು, ಅದೇ ಪಾತ್ರ, ಅವೇ ಸನ್ನಿವೇಶಗಳನ್ನು ನೀವು ಏನಾದರೂ ಸುಕೋಮಲ ಕನ್ನಡದಲ್ಲಿ ಬರೆಯಲು ಹೊರಟಿರೋ, ಅದು ತನ್ನ ಲಾಲಿತ್ಯವನ್ನೇ ಕಳೆದುಕೊಂಡು ಬಿಡುತ್ತದೆ. ಈ ಎಲ್ಲ ಲೇಖನಗಳ ಬೆನ್ನೆಲುಬಾಗಿ ಹುಬ್ಬಳ್ಳಿಯ ಜವಾರಿ ಭಾಷೆ ನಿಂತಿದೆ! ಇವರು ಆಗಾಗ ಇಂಗ್ಲಿಷ್ ಪದಗಳನ್ನು, ವಾಕ್ಯಗಳನ್ನು ಬಳಸಿದರೂ ಅವೂ ನಮ್ಮ ಕನ್ನಡದ್ದೇ ಏನೋ ಎಂದು ಸಂಭ್ರಮಿಸುವಷ್ಟು ದೇಸಿತನ ಇವರ ಭಾಷೆಗೆ ದಕ್ಕಿದೆ. ನಿಜ ಹೇಳಬೇಕೆಂದರೆ, ಅನುವಾದಕ್ಕೆ ದಕ್ಕದಂತಹ ದೇಸಿಬನಿ ಇವರ ಭಾಷೆಯಲ್ಲಿದೆ. ನಗಿಸುವುದು ಪುಣ್ಯಕಾರ್ಯ. ಆಧುನಿಕ ಜಂಜಾಟದಲ್ಲಿ ನಾವುಗಳು ಸಂಭ್ರಮದಿಂದ ನಗುವುದನ್ನೇ ಮರೆತುಬಿಟ್ಟಿದ್ದೇವೆ. ಅದನ್ನು ನೆನಪಿಸಿ, ನಮ್ಮ ಮುಖದಲ್ಲಿ ನಗೆಯ ಹೂ ಅರಳಿಸಿ, ಬದುಕನ್ನು ತುಸು ಹಗುರವಾಗಿಸುವ ಪ್ರಶಾಂತ ಆಡೂರ ಅಂತಹವರು ನಿಜಕ್ಕೂ ಅಭಿನಂದನಾರ್ಹರು. ಶುದ್ಧ ನಗೆ ಎನ್ನುವುದು ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ’ ಎಂದಿದ್ದಾರೆ.
©2024 Book Brahma Private Limited.