‘ಗುಬ್ಬಿಯ ಕಲರವ’ ಲೇಖಕ ಎ.ಎನ್. ರಮೇಶ್ ಅವರ ಕೃತಿ. ಈ ಕೃತಿಗೆ ಪ್ರಕಾಶಕರಾದ ಡಾ.ಎಂ.ಜಿ.ಆರ್. ಅರಸ್ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ ಗುಬ್ಬಿ ವೀರಣ್ಣ ಅವರು ರಂಗಭೂಮಿಗೆ ಅದ್ಭುತವಾದ ಮತ್ತು ವಿಶಿಷ್ಟವಾದ ಕೊಡುಗೆ ನೀಡಿ ಚಿರಸ್ಮರಣೀಯರಾದವರು. ಆ ದಿವ್ಯ ಚೇತನದ ಹುಟ್ಟೂರಿನವರೇ ಆದ ರಮೇಶರವರು, ಗುಬ್ಬಿ ವೀರಣ್ಣನವರ ಆದರ್ಶ, ಹೋರಾಟ, ನಟನಾ ಕೌಶಲ್ಯಗಳ ವರ್ಣರಂಜಿತ ಘಟನೆಗಳನ್ನು ಕೇಳುತ್ತಾ ಬೆಳೆದಿದ್ದಾರೆ. ಸಹಜವಾಗಿ ರಂಗಭೂಮಿಯ ಒಲವು, ಸೆಳವು, ಮೋಡಿಗಳಿಗೆ ಒಳಗಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವ ರಮೇಶ್ ತಮ್ಮ ಹೆಸರಿನ ಮುಂದೆ ಗುಬ್ಬಿ ಅಂಕಿತವನ್ನು ಸೇರ್ಪಡೆ ಮಾಡಿಕೊಂಡಿರುವುದು ವಿಶೇಷವಾಗಿದೆ. ಹತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ದೇಶಾದ್ಯಂತ ಗೋವಾ, ಮುಂಬೈ, ಕಲ್ಕತ್ತಾ, ಹೈದರಾಬಾದ್ ಮುಂತಾದ ಮುಖ್ಯ ನಗರಗಳಲ್ಲಿ ತಮ್ಮ ತಂಡದೊಂದಿಗೆ ಅವುಗಳನ್ನು ಪ್ರದರ್ಶಿಸಿ, ವೀಕ್ಷಕರ ಮತ್ತು ನಿರ್ಣಾಯಕರ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಭಾರತೀಯ ಅಣು-ಶಕ್ತಿ ನಿಗಮದ ಅಖಿಲ ಭಾರತ ಮಟ್ಟದ ಸಾಂಸ್ಕೃತಿಕ ಕೂಟಗಳಲ್ಲಿ, ಉತ್ತಮ ಕವಿ, ರಚನೆಕಾರ, ನಟ ನಿರ್ದೇಶಕ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ರಂಗಭೂಮಿಯ ಜೊತೆ-ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತರಾದ ರಮೇಶ್ ರ ಚುಟುಕುಗಳು, ಮನೆಯಂಗಳದ ಗುಬ್ಬಿಯಷ್ಟೇ ಮುದನೀಡುತ್ತವೆ. ಹಾಗಾಗಿ ಪ್ರಥಮ ಸಂಕಲನಕ್ಕೆ ಗುಬ್ಬಿಯ ಕಲರವ ಎಂದು ಹೆಸರಿಟ್ಟಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇಲ್ಲಿಯ ಚುಟುಕುಗಳಲ್ಲಿರುವ ಉತ್ಕಟತೆ, ತೀವ್ರತೆ, ಪ್ರೀತಿ ಪ್ರೇಮಗಳ ಬಗ್ಗೆ ಇರುವ ವೈವಿಧ್ಯಮಯ ಕಲರವಗಳನ್ನು ಗಮನಿಸಬಹುದಾಗಿದೆ. ನಟನಾ ಕೌಶಲ್ಯದಲ್ಲಿ ತಮಗಿರುವ ವಿಶೇಷ ಪ್ರತಿಭೆಯನ್ನು ಕೌಶಲ್ಯವನ್ನು ಚುಟುಕುಗಳ ರಚನೆಯಲ್ಲೂ ಪ್ರತಿಬಿಂಬಿಸಿರುವುದನ್ನು ಕಾಣಬಹುದಾಗಿದೆ. ರೂಪಕಗಳು ಪ್ರತಿಮಾಲಂಕಾರಗಳನ್ನು ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಗುಬ್ಬಿಯ ಕಲರವ ನಿಜವಾಗಿಯೂ ಓದುಗರ ಮನದಲ್ಲಿ ಮಧುರವಾದ ಕಲರವವನ್ನುಂಟು ಮಾಡುವುದರಲ್ಲಿ ಗುಬ್ಬಿ ರಮೇಶ್ ಸಫರರಾಗಿದ್ದಾರೆ ಎಂದು ಎಂ.ಜಿ.ಆರ್. ಅರಸ್ ಭರವಸೆಯ ಮಾತುಗಳನ್ನಾಡಿದ್ದಾರೆ.
©2024 Book Brahma Private Limited.