ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ಅಣ್ಣಾ ಹಜಾರೆ (ಜೀವನ ಚಿತ್ರಗಳು), ಸತಿ ಸುಲೋಚನಾ (ಕನ್ನಡದ ಮೊದಲ ವಾಕ್ಚಿತ್ರದ ಕಥನ), ಚಂದನವನದ ಚಿನ್ನದ ಹೂಗಳು, ಪುಟ್ಟಲಕ್ಷ್ಮಿ ಕಥೆಗಳು (ಮಕ್ಕಳ ಕಥೆಗಳು), ಅಂಕಣ ವ್ಯಾಯೋಗ ಇವರ ಪ್ರಮುಖ ಕೃತಿಗಳು.
ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ದತ್ತಿನಿಧಿ ಬಹುಮಾನ ಹಾಗೂ ಚಿನ್ನದ ಪದಕ, ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನ ವಸುದೇವ ಭೂಪಾಲಂ ದತ್ತಿನಿಧಿ ಬಹುಮಾನ, ವರ್ಧಮಾನ ಪ್ರಶಸ್ತಿ, ಕೆ. ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ, ದ.ರಾ.ಬೇಂದ್ರೆ ಟ್ರಸ್ಟ್‌ನ ಗ್ರಂಥ ಬಹುಮಾನ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅರಳು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮ ಭಟ್ಟ ದತ್ತಿ ಬಹುಮಾನ, ಶ್ರೀವಿಜಯ ಪ್ರಶಸ್ತಿ ಹಾಗೂ ಇವರ ಬೆಳ್ಳಿತೊರೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.