ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು. ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ.
'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', 'ಹಸಿರು ಮಾತು, 'ಕಾಡುಮಾವು', 'ಎಡ್ವರ್ಡ್ ರೆಬೆಲ್ಲೋ', 'ನೆಲದನಾಡಿ - ಭಾಗ ೧, ಭಾಗ ೨', 'ಅವಿಲು' ’ವೆಂಕಟರಾಮ ದೈತೋಟ', 'ಶೇಣಿ ದರ್ಶನ”, ’ಶೇಣಿ ಚಿಂತನ', 'ಹಾಸ್ಯಗಾರನ ಅಂತರಂಗ', 'ಯಕ್ಷಕೋಗಿಲೆ', 'ಅಂತಿಕ', 'ಸಾಮಗ ಪಡಿದನಿ' (ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಶಸ್ತಿ ಪಡೆದಿದೆ), 'ದಗಲೆ', 'ಪಾತಾಳ ವೆಂಕಟ್ರಮಣ ಭಟ್' ಇತ್ಯಾದಿ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಪ್ರಶಸ್ತಿ, 'ಚರಕ ಪ್ರಶಸ್ತಿ', 'ಪ.ಗೋ.ಪ್ರಶಸ್ತಿ, 'ಮುರುಘಾಶ್ರೀ ಪ್ರಶಸ್ತಿ', 'ರಾಜ್ಯ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ', 'ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ', 'ಪರಿಸರ ಪತ್ರಿಕೋದ್ಯಮ ಪ್ರಶಸ್ತಿ' ಹೀಗೆ ಹತ್ತಾರು ಪುರಸ್ಕಾರಗಳು ಅವರಿಗೆ ಸಂದಿವೆ. ಹಸಿರುಮಾತು, ಯಕ್ಷಮಾತು ಬ್ಲಾಗ್ ಬರೆಯುತ್ತಾರೆ.