ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953 ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು.
ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ’ಬೆಳ್ದಿಂಗ್ಳಪ್ಪನ ಪೂಜೆ” ಕೃತಿ ಹಾಗೂ ‘ನೀರು ಮತ್ತು ಪ್ರೀತಿ’ ಕಾದಂಬರಿ ಪ್ರಕಟಿಸಿದ್ದು, ಈ ಕಾದಂಬರಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಇವರ ಸಾಹಿತ್ಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ.