ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.
ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ಹಿಂದಿ, ಉರ್ದು ಸೇರಿದಂತೆ ಹಲವು ಭಾಷೆಗಳಲ್ಲಿ ಕಾಶೀನಾಥ ಅಂಬಲಗೆಯವರು ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಪ್ರಕಟಣೆಗಳು- ಕನ್ನಡದಲ್ಲಿ- ಮೂವತ್ತೈದು ಕವನಗಳು, ಇನ್ನಷ್ಟು ಕವನಗಳು, ಹುಲ್ಲ ಮೇಲಿನ ಹನಿಗಳು(ಮಿನಿ ಕವಿತೆ), ಕೌದಿ(ಕಾವ್ಯ), ಕಬೀರದಾಸರು(ಕರ್ನಾಟಕ ಸಾಹಿತ್ಯ ಅಕಾಡೆಮಿ), ಶಿವಶರಣ ಪಾಟೀಲ ಜವಳಿ- ವ್ಯಕ್ತಿ ಕೃತಿ (ಸಂಪಾದನೆ), ದಾಸೋಹ(ರಂಗ ಶಿಬಿರ ಸ್ಮರಣ ಸಂಚಿಕೆ. ಸಂಪದಾನೆ), ಮಹಿಳಾ ವಚನಗಳು, ಶಬ್ದದ ಬೆಡಗು (ಸಂಪಾದನೆ). ಶರಣರು ಹಾಗೂ ಸಂತರ ಸಾಮಾಜಿಕ ಕಾಳಜಿ, ಚುಳುಕಾದಿರಯ್ಯಾ (ಕಾವ್ಯ), ಬೇವು ಬೆಲ್ಲ(ಮಿನಿ ಕವಿತೆ). ಹಾಡುಗಳು ಉಳಿದಾವ(ಕಾವ್ಯ), ಮೂವತ್ತಕ್ಕೆ ಮುನ್ನೂರು(ಕಾವ್ಯ), ಶರಣು ಶರಣಾರ್ಥಿ ಗಜಲ್ ಗಳು(ಕಾವ್ಯ) ಸೇರಿದಂತೆ ಹಲವಾರು.
ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು- ಸಮಕಾಲೀನ ಪಂಜಾಬಿ ಕವಿತೆಗಳು(ಕಾವ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ). ಕೋಗಿಲೆ ಅಳುತಿದೆ(ಕಾವ್ಯ), ಓದಿ ಅಳುವುದು(ಕವಿತೆಗಳು), ಸಪ್ದರ್ ಹಾಶ್ಮಿಯವರ ಮಕ್ಕಳ ನಾಟಕಗಳು, ಸೌಂದರ್ಯಶಾಸ್ತ್ರ (ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು), ರಾಮಜಿ ಜಾಗ್ರತನಾದ (ಎನ್ ಬಿಟಿ.ದೆಹಲಿ).
ಅವರ ಹಿಂದಿ ಕೃತಿಗಳು- ಅಧೂರೆ ಶಬ್ದ(ಕವಿತೆ) ಆಧುನಿಕ ಹಿಂದಿ ಕಾವ್ಯ ಪ್ರಕಾಶ (ಸಂ), ಸಂತೋಂ ಔರ ಶಿವಶರಣೋಂ ಕೆ ಕಾವ್ಯ ಮೆ ಸಾಮಾಜಿಕ ಚೇತನಾ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕನ್ನಡದಿಂದ ಹಿಂದಿಗೂ ಹಲವಾರು ಕೃತಿಗಳು ಅನುವಾದಿಸಿದ್ದಾರೆ. ಲಂಕೇಶಕ ಕ್ರಾಂತಿ ಬಂತು ಕ್ರಾಂತಿ ನಾಟಕ, ಜಿ.ಎಸ್. ಶಿವರುದ್ರಪ್ಪ, ಕಣವಿ, ರಂಜಾನ ದರ್ಗಾ ಅವರ ಕವಿತೆಗಳನ್ನೂ ಹಿಂದಿಗೆ ಅನುವಾದಿಸಿದ್ದಾರೆ . ಸಾಹಿತ್ಯಿಕ ಕೃಷಿ ನಡೆಸಿರುವ ಹಿರಿಯ ಲೇಖಕರಾದ ಅಂಬಲಗೆ ಅವರಿಗೆ ಕೇಂದ್ರ ಸರ್ಕಾರದ ಕೇಂದ್ರೀಯ ಹಿಂದಿ ನಿರ್ದೇಶನಾಲಯದ 50 ಸಾವಿರ ನಗದು ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಹಿಂದಿ ಪುರಸ್ಕಾರ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ.