ಹೆಂಗಸರು- ಹೆಣ್ಣು ಮಕ್ಕಳು ಎಂದರೆ ಹರಟೆ ಮಲ್ಲಿಯರು. ಹೆಣ್ಮಕ್ಕಳು ಮಾತಾಡಿದ್ದು ಸಾಕು ಬಾಯ್ಮುಚ್ಚಿ ಹೀಗೆ ಗಾದೆ ಹಾಗು ಯುಕ್ತಿಗಳ ಮೂಲಕ ಗದರುವವರಿಗೇನು ಕಡಿಮೆಯಿಲ್ಲ. ಆದರೆ ಹಾಗೆಂದು ಎಲ್ಲದಕ್ಕು ಬಾಯಿ ಮುಚ್ಚಿದರೆ ಹೆಮ್ಮಕ್ಕಳ ಕಥೆ ಹೇಳುವವರು ಯಾರು? ಹೇಳುವವರು ಯಾರು? ತಮ್ಮ ನೋವು, ಒಳದನಿ, ವೇದನೆ, ಸಂಕಟ, ಸಂತಸವನ್ನು ಹೇಳಲೆಂದು ಹೊರಟಿರುವ ಹದಿನಾರು ಮಹಿಳೆಯರು ಬರೆದ ಹದಿನಾರು ಬರಹಗಳ ಸಂಕಲನ ‘ಏನೋ ಹೇಳುತ್ತಿದ್ದಾರೆ’. ಮಹಿಳಾ ಸಾಮಾಜಿಕತೆಯ ಸಮಕಾಲೀನತೆಯ ದಾರುಣತೆಯನ್ನು ಚರ್ಚೆಸ ಬಯಸುವ ವಿಷಯಗಳು ಇಲ್ಲಿವೆ. ‘ತೇಜಸ್ವಿನಿ ಹೆಗಡೆ, ದೀಪ್ತಿ ಭದ್ರಾವತಿ, ಸಂಧ್ಯಾರಾಣಿ, ಸಂಯುಕ್ತಾ ಪುಲಿಗಲ್ ಮುಂತಾದವರ ಬರಹಗಳು ನಮ್ಮನ್ನು ಎದುರುಗೊಂಡು ಆಪ್ತಗೊಳಿಸುತ್ತವೆ. ಅವರು ಏನು ಹೇಳ್ತಿದಾರೆ ಅನ್ನೋದನ್ನ ಕೃತಿಯಲ್ಲೇ ಓದಬೇಕು.
ಸಾವಣ್ಣ ಪ್ರಕಾಶನ 16 ಲೇಖಕಿಯರ ಬರಹಗಳನ್ನಿಟ್ಟುಕೊಂಡು 'ಏನೋ ಹೇಳುತ್ತಿದ್ದಾರೆ' ಎಂಬ ಕೃತಿಯನ್ನು ಇದೇ ಸಂದರ್ಭದಲ್ಲಿ ಹೊರತಂದಿದೆ. ಇಲ್ಲಿ ತೇಜಸ್ವಿನಿ ಹೆಗಡೆ, ಸಂಧ್ಯಾರಾಣಿ, ಮೇಘನಾ, ಪ್ರಿಯಾ ಕರ್ವಾತೆ, ಸಿಂಧುರಾವ್, ರಂಜನಿಕೀರ್ತಿ, ಭಾರತಿ ಹೀಗೆ ಹದಿನಾರು ಮಂದಿ ಒಂದೇ ಏನೂ ಆ ವಿಚಾರದ ಕುರಿತು ತಮ್ಮ ಅನುಭವ ಹೇಳುತ್ತಿದ್ದಾರೆ... ದಾಖಲಿಸಿದ್ದಾರೆ. ಇದಕ್ಕೆ ಎಚ್ ಎಸ್
ಶ್ರೀಮತಿ ಅರ್ಥಪೂರ್ಣವಾದ ಮುನ್ನುಡಿಯೊಂದನ್ನು ಬರೆದಿದ್ದಾರೆ. 'ಈ ಮಹಿಳೆಯರು ಬಹುಮಟ್ಟಿಗೆ ಶಿಕ್ಷಣ, ಉದ್ಯೋಗ ಮುಂತಾದ ಸೌಲಭ್ಯಗಳನ್ನು ಪಡೆದ ಮಧ್ಯಮ ಹಾಗೂ ಮೇಲುಮಧ್ಯಮವರ್ಗಗಳಿಂದ ಬಂದವರು ಎನಿಸುತ್ತದೆ. ಎಲ್ಲ ಬರಹಗಳಲ್ಲೂ ಕಾಣುವ ಒಂದು ಸಾಮಾನ್ಯ ಸಂಗತಿ ಎಂದರೆ ಮಹಿಳೆಯರು ಶಿಕ್ಷಣ, ಆರ್ಥಿಕ ಸ್ವಾವಲಂಬನೆಗಳನ್ನು ಎಟುಕಿಸಿಕೊಂಡರೆ ಎಲ್ಲ ಪ್ರಶ್ನೆಗಳನ್ನು ಎದುರಿಸಬಹುದು ಎಂಬ ಭರವಸೆ, ಆದರೆ ಮಹಿಳಾ ಸಾಮಾಜಿಕತೆಯ ಸಂದರ್ಭಗಳು ಇಷ್ಟು ಸಲೀಸಾದವಲ್ಲ' ಎಂಬ ಮಾತು ಈ ಕೃತಿಯನ್ನು ಓದುವರಿಗೆ ಕೀಲಿಕೈ ಆಗಬಹುದು.
ಕೃಪೆ - ವಿಜಯವಾಣಿ (2020 ಮಾರ್ಚಿ 15)
...........................................................................................
ಏನೋ ಹೇಳುತ್ತಿದ್ದಾರೆ
ಹದಿನಾರು ಲೇಖಕಿಯರು ಕನ್ನಡ ಪುಸ್ತಕಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಈ ಪುಸ್ತಕದ ವಿಶೇಷತೆ ಎಂದರೆ ವಿಶ್ವ ಮಹಿಳಾ ದಿನದಂದು ಬಿಡುಗಡೆಯಾಗಿದ್ದು, ಜತೆಗೆ, ಬಿಡುಗಡೆಯಾದ ಮೊದಲ ವಾರದಲ್ಲೇ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಮಹಿಳಾ ದಿನದ ನೆನಪಿಗೆ ಹೊಸದೇನನ್ನಾದರೂ ಮಾಡಬಾರದೇಕೆ ಎಂದು ಪ್ರಕಾಶಕರು ಯೋಚಿಸಿ ದಾಗ ಹೊಳೆದದ್ದೇ ಈ ಪುಸ್ತಕದ ಪರಿಕಲ್ಪನೆ. ಮಹಿಳೆಯರ ಒಳತೋಟಿಗಳನ್ನು ಸಂಕಲಿಸಿ ಪುಸ್ತಕವೊಂದನ್ನೇಕೆ ಮಾಡಬಾರದೆಂದು ಕಾರ್ಯಪ್ರವೃತ್ತರಾದಾಗ ಈ ಹೊತ್ತಗೆ ರೂಪು ಗೊಂಡಿತು. ಹದಿನಾರು ಕನ್ನಡ ಲೇಖಕಿಯರ ಬರಹಗಳನ್ನು ಇಲ್ಲಿ ಅಡಕಗೊಳಿಸಲಾ ಗಿದ್ದು, ಒಂದೊಂದು ಬರಹವೂ ವಿಶಿಷ್ಟ ಅನನ್ಯ. ತೇಜಸ್ವಿನಿ ಹೆಗಡೆ, ದೀಪ್ತಿ ಭದ್ರವಾತಿ, ದೀಪಾ ಹಿರೇಗುತ್ತಿ, ಸಂಧ್ಯಾರಾಣಿ, ನಂದಿನಿ ಹೆದ್ದುರ್ಗ, ಮೇಘನಾ ಸುಧೀಂದ್ರ, ಪ್ರಿಯಾ ಕೆರ್ವಾಶೆ, ಸಿಂಧು ರಾವ್ ಟಿ., ಸಂಯುಕ್ತಾ ಪುಲಿಗಲ್, ರಂಜನಿ ಕೀರ್ತಿ, ಭಾರತಿ ಬಿ.ವಿ, ಧರ್ಮಶ್ರೀ ಅಯ್ಯಂಗಾರ್, ರಾಜಮ್ಮ ಡಿ.ಕೆ., ಕುಸುಮಬಾಲೆ, ಚೇತನಾ ತೀರ್ಥ ಹಳ್ಳಿ ಮತ್ತು ಮಾಲಿನಿ ಗುರುಪ್ರಸನ್ನ ಅವರ ಬರಹಗಳನ್ನು ಓದುವುದು ಒಂದು ಹೊಸ ಅನುಭವ, ಪುಸ್ತಕದ ಮುಖಪುಟವು ಅಂತಾರಾಷ್ಟ್ರೀಯ ಮಟ್ಟದ ವಿನ್ಯಾಸವನ್ನು ಹೊಂದಿದ್ದು ಮನಸೆಳೆಯುತ್ತದೆ.
ಕೃಪೆ - ವಿಶ್ವವಾಣಿ (2020 ಮಾರ್ಚಿ 15)
©2024 Book Brahma Private Limited.